ನವದೆಹಲಿ,ಅ.6- ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಕ್ರಮ ಹಾಗೂ ವ್ಯತ್ಯಾಸಗಳಾಗಿವೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಬ್ಲಾಕ್ ಮಂಗಳವಾರ ನವದೆಹಲಿಯಲ್ಲಿ ನಡೆಸಿದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತು.
ಸಂಸತ್ತಿನ ಮಕರ ದ್ವಾರದಿಂದ ಚುನಾವಣಾ ಆಯೋಗದ ಕಚೇರಿ ನಿರ್ವಚನ ಸದನದತ್ತ ಹೊರಟಿದ್ದ ವಿರೋಧ ಪಕ್ಷದ ಸಂಸದರನ್ನು ಪೊಲೀಸರು ತಡೆದರು. ಬಳಿಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
ಮೆರವಣಿಗೆ ವೇಳೆ ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ದಾಟಲು ರಾಹುಲ್ ಗಾಂಧಿ ಪ್ರಯತ್ನಿಸಿದ್ದು, ಬ್ಯಾರಿಕೇಡ್ ಏರಿ ತ್ರಿವರ್ಣ ಧ್ವಜವನ್ನು ಬೀಸಿದ ದೃಶ್ಯಗಳು ಗಮನ ಸೆಳೆದವು. ಬಳಿಕ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡರು. ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಟಿಎಂಸಿ ನಾಯಕರು ಸೇರಿದಂತೆ ಹಲವು ವಿರೋಧ ಪಕ್ಷದ ಸಂಸದರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆಗೂ ಮುನ್ನ ಹಾಗೂ ಮೆರವಣಿಗೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ, ಜ್ಞಾನೇಶ್, ಅವಧಿ ಮುಗಿದಿದೆ.ಸಹೋದರ, ರಾಜೀನಾಮೆ ನೀಡುವ ಸಮಯ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಸಿಇಸಿ ವಿರುದ್ಧ ತಮ ಆಕ್ರೋಶ ವ್ಯಕ್ತಪಡಿಸಿದರು. ಎಸ್‌ಐಆರ್ ಮೂಲಕ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳನ್ನು ಮಾಡಲಾಗುತ್ತಿದ್ದು, ಇದರಿಂದ ಅರ್ಹ ಮತದಾರರ ಹಕ್ಕಿಗೆ ಧಕ್ಕೆಯಾಗಬಹುದು ಎಂಬುದು ಇಂಡಿಯಾ ಬ್ಲಾಕ್‌ನ ಪ್ರಮುಖ ಆರೋಪವಾಗಿದೆ.
ಮೆರವಣಿಗೆಯನ್ನು ನವದೆಹಲಿಯ ನೀತಿ ಆಯೋಗದ ಕಚೇರಿ ಸಮೀಪವೇ ಪೊಲೀಸರು ತಡೆದರು. ಭದ್ರತಾ ಕಾರಣಗಳಿಂದಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಪ್ರತಿಭಟನಾಕಾರರು ಅಲ್ಲಿಯೇ ಕುಳಿತು ಧರಣಿ ನಡೆಸಿದರು. ಬಳಿಕ ಕೆಲ ನಾಯಕರನ್ನು ಪೊಲೀಸ್ ವಾಹನಗಳಲ್ಲಿ ಕರೆದೊಯ್ಯಲಾಯಿತು. ಇಂಡಿಯಾ ಬ್ಲಾಕ್ ಮತ್ತು ಚುನಾವಣಾ ಆಯೋಗದ ನಡುವಿನ ಸಂಘರ್ಷಕ್ಕೆ ಇತ್ತೀಚಿನ ದಿನಗಳಲ್ಲಿ ಫಾರ್ಮ್-6 ವಿವಾದ ಮತ್ತಷ್ಟು ಕಿಡಿ ಹಚ್ಚಿದೆ. ಮತದಾರರ ಪಟ್ಟಿಗೆ ಹೊಸ ಮತದಾರರ ಹೆಸರು ಸೇರ್ಪಡೆಗೆ ಬಳಸುವ ಫಾರ್ಮ್-6ರಲ್ಲಿ ಖ ಅವಧಿಯಲ್ಲಿ ಹೆಚ್ಚುವರಿ ಘೋಷಣೆ ಸೇರಿಸಲಾಗಿದೆ ಎಂಬುದು ವಿವಾದದ ಕೇಂದ್ರಬಿಂದು.
ಇದಾದ ಬೆನ್ನಲ್ಲೇ ರಾಹುಲ್ ಗಾಂಧಿ, ಫಾರ್ಮ್-6ನಲ್ಲಿ ಜ್ಞಾನೇಶ್ ಕುಮಾರ್ ಅವರು ಱಱಕಾನೂನುಬಾಹಿರವಾಗಿ ಮತ್ತು ಏಕಪಕ್ಷೀಯವಾಗಿೞೞ ಬದಲಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ, ರಾಹುಲ್ ಗಾಂಧಿಯವರ ಹೇಳಿಕೆ ದಾರಿತಪ್ಪಿಸುವಂತದ್ದು ಎಂದು ಹೇಳಿದೆ. ಬಿಹಾರದಲ್ಲಿ ಎಸ್‌ಐಆರ್‌ಗೆ ಸಂಬಂಧಿಸಿದ 2025ರ ಆದೇಶವನ್ನು ಆಯೋಗದ ಸರ್ವಾನುಮತದ ಅನುಮೋದನೆಯೊಂದಿಗೆ ಹೊರಡಿಸಲಾಗಿತ್ತು ಮತ್ತು ಅದನ್ನು ಸುಪ್ರೀಂಕೋರ್ಟ್‌ನ 2026ರ ತೀರ್ಪು ಎತ್ತಿಹಿಡಿದಿದೆ ಎಂದು ಇಸಿಐ ತನ್ನ ವಾದ ಮುಂದಿಟ್ಟಿದೆ.
ಜ್ಞಾನೇಶ್ ಕುಮಾರ್ ವಿರುದ್ಧದ ಹೋರಾಟಕ್ಕೆ ಇಂಡಿಯಾ ಬ್ಲಾಕ್‌ನ ಹಲವು ಪ್ರಮುಖ ಪಕ್ಷಗಳು ಬೆಂಬಲ ನೀಡಿದ್ದರೂ, ಎಲ್ಲ ಮೈತ್ರಿಪಕ್ಷಗಳೂ ಮಂಗಳವಾರದ ಮೆರವಣಿಗೆಯಲ್ಲಿ ಭಾಗವಹಿಸಲಿಲ್ಲ. ಆಮ್ ಆದಿ ಪಕ್ಷ ಮೆರವಣಿಗೆಯಿಂದ ದೂರ ಉಳಿಯುವುದಾಗಿ ತಿಳಿಸಿತ್ತು. ಇದರಿಂದ ಚುನಾವಣಾ ಆಯೋಗದ ವಿರುದ್ಧದ ಹೋರಾಟದಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟು ಎಷ್ಟರ ಮಟ್ಟಿಗೆ ಮುಂದುವರಿಯಲಿದೆ ಎಂಬ ಪ್ರಶ್ನೆಯೂ ರಾಜಕೀಯ ವಲಯದಲ್ಲಿ ಚರ್ಚೆಗೆ ಬಂದಿದೆ.
ಪ್ರತಿಭಟನೆ ರಾಷ್ಟ್ರವ್ಯಾಪಿ ಹೋರಾಟದ ಭಾಗ
ಅಕ್ಟೋಬರ್ 2ರಿಂದ 8ರವರೆಗೆ ಱಸೇವ್ ಡೆಮಾಕ್ರಸಿೞ ಅಭಿಯಾನದ ಭಾಗವಾಗಿ ಇಂಡಿಯಾ ಬ್ಲಾಕ್ ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸುತ್ತಿದೆ. ಖ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಮತದಾರರ ಹಕ್ಕುಗಳ ರಕ್ಷಣೆ ಹಾಗೂ ಚುನಾವಣಾ ಆಯೋಗದ ಹೊಣೆಗಾರಿಕೆ ಕುರಿತ ಪ್ರಶ್ನೆಗಳನ್ನು ಜನರ ಮುಂದೆ ಕೊಂಡೊಯ್ಯುವುದು ವಿರೋಧ ಪಕ್ಷಗಳ ಉದ್ದೇಶವಾಗಿದೆ.
ಮತ್ತೊಂದೆಡೆ, ಬಿಜೆಪಿ ಮತ್ತು ಚುನಾವಣಾ ಆಯೋಗವು ವಿರೋಧ ಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದ್ದು, ಮತದಾರರ ಪಟ್ಟಿಯ ಪರಿಷ್ಕರಣೆ ಚುನಾವಣಾ ವ್ಯವಸ್ಥೆಯ ಶುದ್ಧತೆ ಮತ್ತು ಅರ್ಹ ಮತದಾರರನ್ನು ಖಚಿತಪಡಿಸುವ ಪ್ರಕ್ರಿಯೆಯ ಭಾಗವಾಗಿದೆ ಎಂದು ಪ್ರತಿಪಾದಿಸುತ್ತಿವೆ. ಹೀಗಾಗಿ ಖ ವಿವಾದ ಇದೀಗ ಕೇವಲ ಮತದಾರರ ಪಟ್ಟಿ ಪರಿಷ್ಕರಣೆಯ ವಿಷಯವಾಗಿ ಉಳಿಯದೆ, ಚುನಾವಣಾ ಆಯೋಗದ ಸ್ವಾಯತ್ತತೆ, ಫಾರ್ಮ್-6ರ ಬದಲಾವಣೆ, ಮತದಾರರ ಹಕ್ಕು ಮತ್ತು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆ ಕುರಿತ ರಾಷ್ಟ್ರಮಟ್ಟದ ರಾಜಕೀಯ-ಕಾನೂನು ಸಂಘರ್ಷವಾಗಿ ರೂಪುಗೊಂಡಿದೆ.
ಜ್ಞಾನೇಶ್‌ಕುಮಾರ್ ರಾಜೀನಾಮೆಗೆ ಆಗ್ರಹಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಮಂಗಳವಾರದ ಪ್ರತಿಭಟನೆ ಎಸ್‌ಐಆರ್ ವಿವಾದದ ಮುಂದಿನ ಹಂತಕ್ಕೆ ನಾಂದಿ ಹಾಡಿದೆ. ಒಂದು ಕಡೆ ಸುಪ್ರೀಂಕೋರ್ಟ್ ಫಾರ್ಮ್-6 ಬದಲಾವಣೆಗೆ ತನ್ನ ಅನುಮೋದನೆ ಇಲ್ಲ ಎಂದು ಸ್ಪಷ್ಟಪಡಿಸಿರುವುದು, ಮತ್ತೊಂದೆಡೆ ಚುನಾವಣಾ ಆಯೋಗ ಅದನ್ನು ದಾರಿತಪ್ಪಿಸುವ ಆರೋಪವೆಂದು ತಳ್ಳಿಹಾಕಿರುವುದು ಇವೆರಡರ ನಡುವಿನ ಕಾನೂನು ಮತ್ತು ರಾಜಕೀಯ ಸಂಘರ್ಷ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ
