Homeಆರೋಗ್ಯ / ಜೀವನಶೈಲಿವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಏನು..? ಆಚರಣೆ ಹೇಗೆ..?

ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಏನು..? ಆಚರಣೆ ಹೇಗೆ..?

ಯಾವುದಾದರೂ ವ್ರತ ಮಾಡುತ್ತೇವೆ ಎಂದರೆ ಮೊದಲು ಆ ದೇವತೆಯ ಮಹಿಮೆಯನ್ನು ಸ್ವಲ್ಪ ಮಟ್ಟಿಗಾದರೂ ಅರ್ಥೈಸಿಕೊಂಡು ಮಾಡಿದರೆ ಆ ವ್ರತದ ಫಲವು ನಮಗೆ ಸಿಗುತ್ತದೆ. ವರಮಹಾಲಕ್ಷ್ಮಿ ವ್ರತವೆಂದರೆ ಜಗಜ್ಜನನಿಯಾದ ಲಕ್ಷ್ಮೀ ದೇವಿಯ ಪೂಜೆ. ಆಕೆಯ ಬಗ್ಗೆ ಎಷ್ಟು ಹೇಳಿದರೂ ಅದು ಸ್ವಲ್ಪ ಮಾತ್ರವೇ ಆಗುತ್ತದೆ.

ಪರಮಾತ್ಮ ಮತ್ತು ಲಕ್ಷ್ಮೀ ದೇವಿ ಇಬ್ಬರೂ ಅಕ್ಷರ ಪುರುಷರು. ಅಕ್ಷರ ಪುರುಷರು ಎಂದರೆ ನಿತ್ಯಮುಕ್ತರು, ದೇಹನಾಶವಿಲ್ಲದವರು. ಬ್ರಹ್ಮ ದೇವರಿಂದ ತೃಣಜೀವರ ಪರ್ಯಂತ ಎಲ್ಲರೂ ಕ್ಷರ ಪುರುಷರು. ಅಂದರೆ ದೇಹನಾಶವುಳ್ಳವರು. ಆದರೆ ಜಗಜ್ಜನನಿಯಾದ ಮಹಾಲಕ್ಷ್ಮಿಗೆ ದೇಹನಾಶವಿಲ್ಲ. ಆ ಮಹಾತಾಯಿ ಪರಮಾತ್ಮನಿಗೆ ದೇಶತಃ, ಕಾಲತಃ ಸಮಳು. ಗುಣದಲ್ಲಿ ಪರಮಾತ್ಮನ ಅಧೀನಳು.

ಆದ್ದರಿಂದ ಅವಳು ಪರಮಾತ್ಮನಿಗೆ ಸಮಾನ ಎಂದು ಅನಿಸಿಕೊಂಡಿದ್ದಾಳೆ. ಅಚಿಂತ್ಯಾತೀತ ಗುಣವುಳ್ಳ ಪರಮಾತ್ಮನ ಸೇವೆಯನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲ. ಛತ್ರ, ಚಾಮರ, ವ್ಯಜನ, ಪರ್ಯಂಕ ಎಲ್ಲವೂ ತಾನೇ ಆಗಿ ಪರಮಾತ್ಮನ ಸೇವೆಯನ್ನು ಪೂರ್ಣವಾಗಿ ಮಾಡಿ ಆನಂದ ಹೊಂದುತ್ತಾಳೆ.

ಪ್ರಳಯ ಕಾಲದಲ್ಲಿ ಎಲ್ಲವೂ ನಾಶವಾದರೂ ಲಕ್ಷ್ಮೀದೇವಿಯು ಮಾತ್ರ ಜಲವಾಗಿ, ಆಲದೆಲೆಯಾಗಿ, ಕತ್ತಲಾಗಿ, ಹಲವು ಆಭರಣಗಳಾಗಿ ಪರಮಾತ್ಮನ ಜೊತೆಯಲ್ಲೇ ಶ್ರೀ, ಭೂ ಮತ್ತು ದುರ್ಗಾ ಎಂಬ ಮೂರು ರೂಪಗಳಿಂದ ಪರಮಾತ್ಮನ ಸೇವೆಯನ್ನು ಮಾಡುತ್ತಾಳೆ. ಜಗಜ್ಜನನಿಯಾದ ಶ್ರೀ ಮಹಾಲಕ್ಷ್ಮಿಯ ಪೂಜೆ ಮಾಡಬೇಕಾದರೆ ನಮಗೆ ಇವೆಲ್ಲದರ ಬಗ್ಗೆ ಸ್ವಲ್ಪವಾದರೂ ಜ್ಞಾನವಿರಬೇಕು.

ವರಮಹಾಲಕ್ಷ್ಮಿ ವ್ರತದ ಮಹತ್ವ

ಶ್ರಾವಣ ಮಾಸದ ಶುಕ್ಲ ಪಕ್ಷದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ವ್ರತವಾಗಿರುತ್ತದೆ. ಈ ವ್ರತ ಮಾಡಬೇಕಾದರೆ ತುಳಸಿ ಬೃಂದಾವನದ ಹತ್ತಿರ ಯಮುನಾ ಪೂಜೆಯನ್ನು ಮಾಡಬೇಕು. ಯಾವುದೇ ವ್ರತವನ್ನು ನದೀತೀರದಲ್ಲಿಯೇ ಆಚರಿಸುವುದು ಉತ್ತಮ. ಆದರೆ ಈಗಿನ ದೇಶ-ಕಾಲ ಪರಿಸ್ಥಿತಿಯಲ್ಲಿ ನದೀತೀರದಲ್ಲಿ ಮಾಡುವುದು ಅಸಾಧ್ಯವೆಂದು ತಿಳಿದು, ‘ಯನ್ಮೂಲೇ ಸರ್ವತೀರ್ಥಾನಿ, ಯನ್ಮಧ್ಯೇ ಸರ್ವದೇವತಾ’ ಎಂಬಂತೆ ಸಕಲ ತೀರ್ಥಗಳ ಸನ್ನಿಧಾನವುಳ್ಳ ತುಳಸಿ ಬೃಂದಾವನದ ಸಮೀಪ ಯಮುನಾ ಕಲಶವನ್ನು ಸ್ಥಾಪಿಸಿ, ಗಂಗಾ, ಯಮುನಾ, ಗೋದಾವರಿ ಮೊದಲಾದ ನದಿ ದೇವತೆಗಳನ್ನು ಆವಾಹಿಸಿ ಷೋಡಶೋಪಚಾರ ಪೂಜೆಯನ್ನು ಮಾಡಬೇಕು.

ನಂತರ ಪೀಠಪೂಜೆ ಮಾಡಿ ಅದರಲ್ಲಿ ಲಕ್ಷ್ಮೀನಾರಾಯಣರನ್ನು ಪ್ರತಿಷ್ಠಾಪಿಸಬೇಕು. ನಂತರ ನವದಾರ ಸ್ಥಾಪನೆ ಮಾಡಬೇಕು. ದಾರದಲ್ಲಿ 9 ಅಥವಾ 12 ಗ್ರಂಥಿಗಳನ್ನು ಮಾಡಿ, ಆ ಗ್ರಂಥಿಗಳಲ್ಲಿ ಲಕ್ಷ್ಮೀನಾರಾಯಣರ ನಾಮದಿಂದ ಪೂಜಿಸಬೇಕು.

ನಂತರ ಷೋಡಶೋಪಚಾರ ಪೂಜೆಯನ್ನು ಮಾಡಿ, ಪರಿಮಳ ಪತ್ರಪುಷ್ಪಗಳಿಂದ ಅರ್ಚನೆಯನ್ನು ಮಾಡಿ, ಕಲಶಕ್ಕೆ ಅರಿಶಿಣ, ಕುಂಕುಮ, ಅಕ್ಷತೆಗಳಿಂದ ಪೂಜಿಸಿ, ಸೌಭಾಗ್ಯದ್ರವ್ಯಗಳನ್ನು ಅರ್ಪಿಸಿ, ಕುಂಕುಮಾರ್ಚನೆಯನ್ನು ಮಾಡಿ, ಧೂಪ, ದೀಪ ಮಾಡಿ ಯಥಾಶಕ್ತಿ ಪಂಚಭಕ್ಷ್ಯಗಳನ್ನು ನಿವೇದಿಸಬೇಕು.

ನಂತರ ಮಂಗಳಾರತಿಯನ್ನು ಮಾಡಿ ಪ್ರದಕ್ಷಿಣೆ, ನಮಸ್ಕಾರಗಳನ್ನು ಮಾಡಬೇಕು. ಹಾಡುಗಳನ್ನು ಹೇಳಿ ಆರತಿ ಮಾಡಬೇಕು. ನಂತರ ಒಂದು ದಾರವನ್ನು ಲಕ್ಷ್ಮೀದೇವಿಗೆ ಸಮರ್ಪಿಸಿ ಮುತ್ತೈದೆಯರೆಲ್ಲ ದಾರವನ್ನು ಕಟ್ಟಿಕೊಳ್ಳಬೇಕು. ವಾಯನದಾನ ಮತ್ತು ಮರದ ಬಾಗಿನವನ್ನು ಕೊಟ್ಟು ವ್ರತ ಸಮರ್ಪಣೆಯನ್ನು ಮಾಡಬೇಕು. ಈ ವ್ರತವೂ ಸ್ತ್ರೀಯರ ಸೌಭಾಗ್ಯಕ್ಕೆ ಮೂಲವಾದ್ದರಿಂದ ಪ್ರತಿಯೊಬ್ಬ ಮುತ್ತೈದೆಯರೂ ಆಚರಿಸಲೇಬೇಕು.

ಕಲಶದ ವಿಚಾರ

ಒಂದು ತಂಬಿಗೆಯಲ್ಲಿ ಪಂಚಫಲಗಳನ್ನು ಮತ್ತು ಮಂಗಳದ್ರವ್ಯಗಳನ್ನು ಹಾಕಿ, ಅದರ ಮೇಲೆ ಅಲಂಕರಿಸಿದ ತೆಂಗಿನಕಾಯಿಯನ್ನು ಇಡಬೇಕು. ಕೆಲವರು ತೆಂಗಿನಕಾಯಿಗೆ ಮುಖವಾಡವನ್ನು ಇಟ್ಟು ಅಲಂಕಾರ ಮಾಡುತ್ತಾರೆ. ಮತ್ತೆ ಕೆಲವರು ತೆಂಗಿನಕಾಯಿಗೆ ಅರಿಶಿಣ, ಕುಂಕುಮ ಹಚ್ಚಿ ತಿಲಕವಿಟ್ಟು ಪೂಜಿಸುತ್ತಾರೆ. ಇದು ಅವರವರ ಸಂಪ್ರದಾಯದಂತೆ ಮಾಡುವುದು ಸೂಕ್ತ.

ನಾವು ಏನೇ ಪೂಜೆ ಮಾಡಿದರೂ ಪರಮಾತ್ಮ, ಲಕ್ಷ್ಮೀ, ವಾಯುದೇವರು ಮತ್ತು ತತ್ತ್ವಾಭಿಮಾನಿ ದೇವತೆಗಳ ಮೂಲಕ ಮಾಡಿಸುತ್ತಾನೆ. ‘ನಾನು ಮಾಡಿದೆ’ ಎನ್ನದೆ, ‘ನಿನ್ನ ಪೂಜೆ ನೀನೇ ಮಾಡಿಸಿದೆ’ ಎಂಬ ಭಾವದಿಂದ ಮಾಡಿದರೆ ಪರಮಾತ್ಮನ ಅನುಗ್ರಹವಾಗಿ ಮೋಕ್ಷಕ್ಕೆ ಕಾರಣೀಭೂತವಾಗುತ್ತದೆ.

ಹೇಮಮಾಲಿನಿ ಶ್ರೀಧರಾಚಾರ್
ಪ್ರಕಾಶನಗರ.

RELATED ARTICLES
spot_img

Latest News