Homeಬೆಂಗಳೂರುತ್ವರಿತವಾಗಿ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಮಹೇಶ್ವರ್‌ರಾವ್‌ ಕಟ್ಟುನಿಟ್ಟಿನ ಸೂಚನೆ

ತ್ವರಿತವಾಗಿ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಮಹೇಶ್ವರ್‌ರಾವ್‌ ಕಟ್ಟುನಿಟ್ಟಿನ ಸೂಚನೆ

ಬೆಂಗಳೂರು, ಸೆ.9- ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಿ, ಅಪಘಾತಗಳಿಗೆ ಅವಕಾಶವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ನಡೆದ ವರ್ಚುವಲ್‌ ಸಭೆಯಲ್ಲಿ ಮಾತನಾಡಿದ ಅವರು, ನಗರದ ಪ್ರಮುಖ ರಸ್ತೆಗಳಲ್ಲಿ ಈಗಾಗಲೇ ಗುರುತಿಸಿರುವ ರಸ್ತೆ ಗುಂಡಿಗಳನ್ನು ಕೂಡಲೇ ಮುಚ್ಚಬೇಕು ಎಂದು ನಿರ್ದೇಶಿಸಿದರು.

ಗುಂಡಿಗಳನ್ನು ಮುಚ್ಚಿರುವ ಕುರಿತು ವಿಭಾಗವಾರು ಪಟ್ಟಿ ಸಿದ್ಧಪಡಿಸಿ ವರದಿ ಸಲ್ಲಿಸಬೇಕು. ರಸ್ತೆ ಗುಂಡಿಗಳಿಂದ ಯಾವುದೇ ಅಪಘಾತ ಸಂಭವಿಸದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಪಾಲಿಕೆವಾರು ರಸ್ತೆ ಗುಂಡಿ ಮುಚ್ಚುವ ಯಂತ್ರಗಳನ್ನು ಖರೀದಿಸಿ, ಗುಂಡಿ ಮುಚ್ಚುವ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಬೇಕು. ಮಳೆಯ ಸಂದರ್ಭದಲ್ಲಿ ಎಕೋಫಿಕ್‌್ಸ ಬಳಸಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಕೈಗೊಳ್ಳಬೇಕು.

ಪ್ರಮುಖ ರಸ್ತೆಗಳಷ್ಟೇ ಅಲ್ಲದೆ ವಾರ್ಡ್‌ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನೂ ಆದ್ಯತೆಯ ಮೇರೆಗೆ ಮುಚ್ಚಬೇಕು ಎಂದು ತಿಳಿಸಿದರು.ರಸ್ತೆ ಗುಂಡಿ ಮುಚ್ಚುವ ಕಾರ್ಯದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ನಗರ ಪಾಲಿಕೆಗಳ ಹಿರಿಯ ಅಧಿಕಾರಿಗಳು ಖುದ್ದಾಗಿ ರಸ್ತೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಮಹೇಶ್ವರ್‌ ರಾವ್‌ ಸೂಚಿಸಿದರು.

1.84 ಲಕ್ಷ ಮೆಟ್ರಿಕ್‌ ಟನ್‌ ಸಿಡಿ ತ್ಯಾಜ್ಯ ತೆರವು:ನಗರದಾದ್ಯಂತ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನದಡಿ ಇದುವರೆಗೆ 1.84 ಲಕ್ಷ ಮೆಟ್ರಿಕ್‌ ಟನ್‌ ನಿರ್ಮಾಣ ಮತ್ತು ನೆಲಸಮ ತ್ಯಾಜ್ಯ (ಸಿಡಿ ವೇಸ್ಟ್‌‍) ತೆರವುಗೊಳಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.ಇನ್ನೂ ತ್ಯಾಜ್ಯ ತೆರವುಗೊಳಿಸಬೇಕಿರುವ ಪ್ರದೇಶಗಳನ್ನು ಗುರುತಿಸಿ ಕೂಡಲೇ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ತ್ಯಾಜ್ಯ ತೆರವುಗೊಳಿಸಿರುವ ಸ್ಥಳಗಳಲ್ಲಿ ಪಿಪಿಪಿ ಮಾದರಿಯಲ್ಲಿ ಸುಂದರೀಕರಣ ಕಾರ್ಯ ಕೈಗೊಳ್ಳುವಂತೆ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.

ಖಾಲಿ ನಿವೇಶನಗಳಿಗೆ ನೋಟಿಸ್‌‍:
ಐದು ನಗರ ಪಾಲಿಕೆಗಳ ವ್ಯಾಪ್ತಿಯ ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು ಎಂದು ಸೂಚಿಸಿದ ಮಹೇಶ್ವರ್‌ ರಾವ್‌‍, ಸ್ವಚ್ಛತೆ ಮಾಡದ ನಿವೇಶನಗಳ ಮಾಲೀಕರಿಗೆ ನೋಟಿಸ್‌‍ ನೀಡಿ 7 ದಿನಗಳ ಕಾಲಾವಕಾಶ ನೀಡುವಂತೆ ನಿರ್ದೇಶಿಸಿದರು.

ನಿಗದಿತ ಅವಧಿಯೊಳಗೆ ಸ್ವಚ್ಛತಾ ಕಾರ್ಯ ಕೈಗೊಳ್ಳದಿದ್ದರೆ, ಪಾಲಿಕೆಯೇ ಸ್ಥಳವನ್ನು ಸ್ವಚ್ಛಗೊಳಿಸಿ ಅದಕ್ಕೆ ತಗಲುವ ವೆಚ್ಚವನ್ನು ಆಸ್ತಿ ತೆರಿಗೆಯಲ್ಲಿ ಸೇರ್ಪಡೆಗೊಳಿಸಿ ವಸೂಲಿ ಮಾಡಬೇಕು ಎಂದು ತಿಳಿಸಿದರು.ಬಿಡಾಡಿ ವಾಹನಗಳ ತೆರವಿಗೂ ಸೂಚನೆನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಲಾಗಿರುವ ಬಿಡಾಡಿ ವಾಹನಗಳ ತೆರವು ಕಾರ್ಯಾಚರಣೆಯನ್ನು ಮತ್ತಷ್ಟು ಸಕ್ರಿಯಗೊಳಿಸಬೇಕು ಎಂದು ಮಹೇಶ್ವರ್‌ ರಾವ್‌ ಸೂಚಿಸಿದರು.ಇನ್ನೂ ಯಾವೆಲ್ಲೆಡೆ ಬಿಡಾಡಿ ವಾಹನಗಳಿವೆ ಎಂಬುದನ್ನು ಪರಿಶೀಲಿಸಿ, ನಿಯಮಾನುಸಾರ ನೋಟಿಸ್‌‍ ಅಂಟಿಸಿ ಅವುಗಳನ್ನು ಡಂಪಿಂಗ್‌ ಯಾರ್ಡ್‌ಗೆ ಸ್ಥಳಾಂತರಿಸಬೇಕು.

ನಿಗದಿತ ಅವಧಿಯಲ್ಲಿ ವಾಹನಗಳ ಮಾಲೀಕರು ಹಾಜರಾಗದಿದ್ದರೆ ನಿಯಮಾನುಸಾರ ಹರಾಜು ಪ್ರಕ್ರಿಯೆ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.ಸಭೆಯಲ್ಲಿ ಐದು ನಗರ ಪಾಲಿಕೆಗಳ ಆಯುಕ್ತರು, ವಿಶೇಷ ಆಯುಕ್ತರು, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಒ ಕರೀಗೌಡ, ಅಪರ ಆಯುಕ್ತರು, ಪ್ರಧಾನ ಹಾಗೂ ಮುಖ್ಯ ಅಭಿಯಂತರರು, ಅಧೀಕ್ಷಕ ಅಭಿಯಂತರರು, ಸಂಚಾರಿ ಪೊಲೀಸ್‌‍ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
spot_img

Latest News