ಬೆಂಗಳೂರು,ಸೆ.9- ಪ್ರತಿ ವರ್ಷದಂತೆ ಈ ವರ್ಷವೂ ಶ್ರೀವಿದ್ಯಾರಣ್ಯ ಯುವಕರ ಸಂಘದ ವತಿಯಿಂದ ಸೆ.14ರಿಂದ 13ದಿನಗಳ ಕಾಲ 64ನೇ ಬೆಂಗಳೂರು ಗಣೇಶೋತ್ಸವವನ್ನು ಬಸವನಗುಡಿಯ ಎ.ಪಿ.ಎಸ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಟ್ರಸ್ಟ್ನ ನಂದೀಶ್ ಅವರು, ಗಂಗಾನದಿಯಿಂದ ಮಣ್ಣು-ಮರಳು, ಜಲವನ್ನು ತರಿಸಲಾಗಿದ್ದು,21 ಅಡಿ ಎತ್ತರದ ಅಪೂರ್ವ ಗಣೇಶ ಮೂರ್ತಿಯನ್ನು ಪರಿಸರ ಸ್ನೇಹಿ ವಸ್ತುಗಳಾದ ಬಿದಿರು, ಹುಲ್ಲು, ಮಣ್ಣನ್ನು ತರಿಸಿ,ಕಲ್ಕತ್ತಾದಿಂದ ನುರಿತ ಕಲಾವಿದರನ್ನು ಕರೆಸಿ 21 ಅಡಿ ಎತ್ತರದ ಗಣೇಶನಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪರಿಸರ ಸ್ನೇಹಿ ಆಚರಣೆಗಳೆಡಗಿನ ನಮ ನಿರಂತರ ಬದ್ದತೆಯ ಪ್ರತೀಕವಾಗಿ ಈ ಪ್ರಯತ್ನವನ್ನು ಕೈಗೊಂಡಿದ್ದು,ಬೆಂಗಳೂರಿನ ಗಣೇಶೋತ್ಸವು 15 ವರ್ಷಗಳಿಂದ ಸಂಪೂರ್ಣ ಪ್ಲಾಸ್ಟಿಕ್ಮುಕ್ತವಾಗಿ ಆಚರಿಸಿಕೊಂಡು ಬರುತ್ತಿದ್ದು, ಈ ವರ್ಷ ಶೂನ್ಯ ತ್ಯಾಜ್ಯ ಸಮರ್ಪಕ ಮರುಬಳಕೆ ಪುನರುತ್ಪಾದನೆಯತ್ತ ಮತ್ತೊಂದು ಮಹತ್ವದ ಹೆಜ್ಜೆಯನ್ನು ಇಡುತ್ತಿದೆ. ಈ ವರ್ಷ ಹೆಚ್ಚಿನ ರೀತಿಯಲ್ಲಿ ಹೂವುಗಳಿಂದ ಅಲಂಕಾರ ಮಾಡದೆ, ಹಣ್ಣು, ವಿಶೇಷ ತಿಂಡಿಗಳಿಂದ ಅಲಂಕಾರ ಮಾಡಿ ಪ್ರತಿ ದಿನ ಬರುವ ಭಕ್ತಾಧಿಗಳಿಗೆ ಪ್ರಸಾದದ ರೂಪದಲ್ಲಿ ವಿತರಿಸಲಾಗುವುದು ಎಂದರು.
ಇಲ್ಲಿಯೇ ಮಣ್ಣಿನಲ್ಲಿ ಗಣಪತಿ ಮಾಡುವಂತೆ ಕಳೆದ 2 ವರ್ಷಗಳಿಂದ ನುರಿತ ಕಲಾವಿದರಿಂದ ನಾಗರೀಕರಿಗೆ ತರಬೇತಿ ನೀಡಲಾಗುತ್ತಿದೆ. ಈ ವರ್ಷ ಬಾದಾಮಿ ಮತ್ತು ಪಟ್ಟದಕಲ್ಲು ಮಾದರಿಯಲ್ಲಿ ಬೃಹತ್ ಮಂಟಪ ನಿರ್ಮಿಸಲಾಗಿದ್ದು, ಜನರಿಗೆ ನೋಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪರಿಸರ ಮತ್ತು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಭೇಟಿ ನೀಡಿ 21 ಅಡಿ ಎತ್ತರದಲ್ಲಿ ನಿರ್ಮಿಸುತ್ತಿರುವ ಗಣಪತಿ ಪ್ರತಿಮೆಯನ್ನು ವೀಕ್ಷಿಸಿದ್ದು, ಎಲ್ಲೆಡೆಯಲ್ಲಿ ಮನೆ,ಬೀದಿ,ಪ್ರಮುಖ ನಗರದಲ್ಲಿ ನಡೆಯುವ ಗಣೇಶನ ಉತ್ಸವ ಸಂಪೂರ್ಣ ಪರಿಸರ ಸ್ನೇಹಿ, ಜೆಡಿಮಣ್ಣಿನ ಮೂರ್ತಿ ಪೂಜಿಸುವ ಮೂಲಕ ಪರಿಸರವನ್ನು ರಕ್ಷಿಸಬೇಕಾಗಿದೆ ಎಂದರು.ಟ್ರಸ್ಟಿಗಳಾದ ಸಿದ್ದರಾಜು, ಬಿ.ಮಲ್ಲಿಕಾರ್ಜುನ್, ಮರಿಯಪ್ಪ, ಕಿರಣ್ಕುಮಾರ್, ಎಚ್.ಎನ್.ದೀಪಕ್ ಸೇರಿದಂತೆ ವಿದ್ಯಾರಣ್ಯ ಯುವಕ ಸಂಘದವರು ಇದ್ದರು.
