ಮೈಸೂರು,ಸೆ.10- ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯ ವೇಳೆ ಕನ್ನಡ ಚಲನಚಿತ್ರ ರಂಗದ ಪ್ರಖ್ಯಾತ ಕಲಾವಿದರು ಭಾಗಿಯಾಗಲಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ಜಿ ಲಕ್ಷೀಕಾಂತ ರೆಡ್ಡಿ ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಚಲನಚಿತ್ರ ರಂಗದ ಪದಾಧಿಕಾರಿಗಳ ಜೊತೆ ಹಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಸಿಎಂ ಡಿ.ಕೆ.ಶಿವಕುಮಾರ್ ಅವರ ಆಶಯದಂತೆ ಸಿನಿ ಕಲಾವಿದರು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಅಂಬಾರಿ ಬಸ್ನಲ್ಲಿ ಜಂಬೂ ಸವಾರಿಯ ದಿನ ಅರಮನೆ ಆವರಣದಿಂದ ಕೆ ಆರ್ ಸರ್ಕಲ್ವರೆಗೆ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲಾಗುವುದು. ನಂತರ ಕಲಾವಿದರು ಹಾಗೂ ಕ್ರೀಡಾಪಟುಗಳನ್ನು ಕೆ ಆರ್ ಸರ್ಕಲ್ನಿಂದ ಕರೆದುಕೊಂಡು ಬಂದು ಅರಮನೆ ಗ್ಯಾಲರಿಯಲ್ಲಿ ಬಿಡಲಾಗುವುದು ಎಂದು ಮಾಹಿತಿ ನೀಡಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಡಾ.ಜಯಮಾಲಾ ಮಾತನಾಡಿ, ಮೈಸೂರು ದಸರಾಕ್ಕಾಗಿ ಚಲನಚಿತ್ರ ರಂಗವು 93 ವರ್ಷಗಳಿಂದ ನಡೆದು ಬಂದ ಹಾದಿ ಕುರಿತ ಮಾಹಿತಿಯನ್ನು ಹೊತ್ತ ಸ್ತಬ್ಧ ಚಿತ್ರವನ್ನು ನಿರ್ಮಾಣ ಮಾಡಲಾಗುವುದು. ಈ ಸ್ತಬ್ಧ ಚಿತ್ರದಲ್ಲಿ 30 ಪ್ರಖ್ಯಾತ ಕನ್ನಡ ಚಲನ ಚಿತ್ರನಟ-ನಟಿಯರು ಮೆರವಣಿಗೆಯಲ್ಲಿ ಸಾಗುವರು. ನಂತರ ಅರಮನೆ ಆವರಣದ ಗ್ಯಾಲರಿಯಲ್ಲಿ ಬಂದು ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳುವರು ಎಂದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಆಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಸಿನಿ ರಂಗದ ಕಲಾವಿದರನ್ನು ಕರೆಸಿ ದಸರಾ ಮಹೋತ್ಸವದಲ್ಲಿ ಸನಾನ ಕಾರ್ಯಕ್ರಮವನ್ನು ಏರ್ಪಡಿಸಬೇಕು. ಕರ್ನಾಟಕ ಚಲನಚಿತ್ರ ರಂಗ ನಡೆದು ಬಂದ ಹಾದಿಯ ಕುರಿತು ಪ್ರದರ್ಶನ ಏರ್ಪಡಿಸಬೇಕು ಎಂದು ಮನವಿ ಮಾಡಿದರು.
ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷರಾದ ರಾಕ್ ಲೈನ್ ವೆಂಕಟೇಶ್ ಮಾತನಾಡಿ, ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಲಾವಿದರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಐಆರ್ಡಿ ನಿರ್ದೇಶಕರಾದ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಲ್ಲಿಕಾರ್ಜುನ ಬಾಲದಂಡಿ, ಚಲನಚಿತ್ರ ಮಂಡಳಿಯ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
