ಮೈಸೂರು,ಸೆ.10- ದಸರಾ ಮಹೋತ್ಸವಕ್ಕೆ ಆಗಮಿಸಿರುವ ಗಜಪಡೆಯ ಮಾವುತರು ಮತ್ತು ಕಾವಾಡಿಗಳ ಮಕ್ಕಳಿಗೆ ಕಲಿಕೆಯ ಅಂತರ ನಿವಾರಿಸಲು ಹಾಗೂ ಅವರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಅರಮನೆ ಆವರಣದಲ್ಲಿ ತಾತ್ಕಾಲಿಕ ಶಾಲೆಯನ್ನು ಆರಂಭಿಸಲಾಗಿದೆ.
ಜಿಲ್ಲಾ ಉಪನಿರ್ದೇಶಕ ಡಿ. ಉದಯ ಕುಮಾರ್ ಅವರು ಶಾಲೆಗೆ ಅಧಿಕೃತವಾಗಿ ಚಾಲನೆ ನೀಡಿ, ಪೋಷಕರು ಮತ್ತು ಮಕ್ಕಳಿಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು.ಮಕ್ಕಳಿಗೆ ಬರವಣಿಗೆ ಸಾಮಗ್ರಿಗಳು ಮತ್ತು ಸಿಹಿ ಹಂಚಿ, ಶಾಲೆಗೆ ನಿರಂತರವಾಗಿ ಬರುವಂತೆ ಕರೆ ನೀಡಲಾಯಿತು.
ದಸರಾ ಮುಗಿಸಿ ಗಜಪಡೆ ಹಿಂತಿರುಗುವವರೆಗೂ ಪ್ರತಿನಿತ್ಯ ಶಾಲೆ ನಡೆಯಲಿದ್ದು, ಅಕ್ಷಯ ಪಾತ್ರೆ ಫೌಂಡೇಶನ್ ವತಿಯಿಂದ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಶೋಭಾ, ಕೃಷ್ಣ, ಎಂ.ಬಿ. ಶ್ರೀಕಂಠಸ್ವಾಮಿ, ಪ್ರಭುಗೌಡ, ರೇಷಾ ಹಾಗೂ ವಲಯದ ಅನುಪಾಲನಾಧಿಕಾರಿಗಳು ಉಪಸ್ಥಿತರಿದ್ದರು.
