ಬೆಂಗಳೂರು- ಕರ್ನಾಟಕದಲ್ಲಿ ನಡೆದ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಜ್ಯದ ಕರಡು ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಕರಡು ಪಟ್ಟಿಯ ವಿವರಗಳನ್ನು ಪ್ರಕಟಿಸಿದರು.ರಾಜ್ಯದಲ್ಲಿ SIR ಆರಂಭಕ್ಕೂ ಮುನ್ನ ಒಟ್ಟು 5,54,32,314 ಮತದಾರರು ಇದ್ದರು. ಪರಿಷ್ಕರಣೆಯ ಬಳಿಕ ಕರಡು ಪಟ್ಟಿಯಲ್ಲಿ 4,46,80,151 ಮತದಾರರು ಉಳಿದಿದ್ದಾರೆ.ಈ ಪೈಕಿ 4,46,35,975 ಮತದಾರರ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಅನ್ಬುಕುಮಾರ್ ತಿಳಿಸಿದರು.
ಕರಡು ಪಟ್ಟಿಯಲ್ಲಿ 2,22,01,727 ಪುರುಷರು, 2,24,75,553 ಮಹಿಳೆಯರು ಹಾಗೂ 2,871 ತೃತೀಯ ಲಿಂಗಿ ಮತದಾರರು ಇದ್ದಾರೆ.18ರಿಂದ 19 ವರ್ಷದೊಳಗಿನ 3,70,341 ಯುವ ಮತದಾರರು ಪಟ್ಟಿಯಲ್ಲಿದ್ದಾರೆ. 20ರಿಂದ 29 ವರ್ಷದೊಳಗಿನ 83,87,880 ಮಂದಿ, 85 ವರ್ಷ ಮೇಲ್ಪಟ್ಟ 3,92,302 ಮಂದಿ, 951 ಎನ್ಆರ್ಐ ಮತದಾರರು, 44,176 ಸೇವಾ ಮತದಾರರು ಹಾಗೂ 5,55,691 ವಿಶೇಷಚೇತನ ಮತದಾರರು ಪಟ್ಟಿಯಲ್ಲಿದ್ದಾರೆ.
1.07 ಕೋಟಿ ಮತದಾರರ ಹೆಸರು ಕೈಬಿಟ್ಟು SIR ವೇಳೆ ಎನ್ಯುಮರೇಷನ್ ಫಾರ್ಮ್ ಸಲ್ಲಿಸದ 1,07,96,339 ಮತದಾರರನ್ನು ASDIDO ವರ್ಗಕ್ಕೆ ಸೇರಿಸಲಾಗಿದೆ.ಇವರ ಪೈಕಿ 65,45,679 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 16,39,864 ಮಂದಿ ಮೃತಪಟ್ಟವರು, 15,17,042 ಮಂದಿ SIR ಪ್ರಕ್ರಿಯೆಯಲ್ಲಿ ಗೈರಾದವರು, 7,09,870 ಮಂದಿ ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ಡ್ಯೂಪ್ಲಿಕೇಟ್ ಮತದಾರರು ಹಾಗೂ 3,83,884 ಮಂದಿ ಇತರೆ ವರ್ಗಕ್ಕೆ ಸೇರಿದವರು ಎಂದು ಆಯೋಗ ಮಾಹಿತಿ ನೀಡಿದರು.
43.81 ಲಕ್ಷ ಮಂದಿಗೆ ನೋಟಿಸ್
SIR ಸಂದರ್ಭದಲ್ಲಿ ದಾಖಲೆಗಳು ಹಾಗೂ ಮ್ಯಾಪಿಂಗ್ನಲ್ಲಿ ವ್ಯತ್ಯಾಸ ಕಂಡುಬಂದಿರುವ 43,81,335 ಮತದಾರರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಲಿದೆ ಎಂದು ಅನ್ಬುಕುಮಾರ್ ತಿಳಿಸಿದರು. ಇವರಲ್ಲಿ 20,35,835 ಮಂದಿಗೆ ವ್ಯತ್ಯಾಸದ ಕಾರಣಕ್ಕೆ ಹಾಗೂ 23,45,500 ಮಂದಿಗೆ ಮ್ಯಾಪಿಂಗ್ ಆಗದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗುತ್ತಿದೆ.ರಾಜ್ಯದಾದ್ಯಂತ 3 ಸಾವಿರಕ್ಕೂ ಹೆಚ್ಚು ERO ಮತ್ತು AROಗಳನ್ನು ಈ ಪ್ರಕ್ರಿಯೆಗೆ ನಿಯೋಜಿಸಲಾಗುತ್ತಿದೆ.
ನೋಟಿಸ್ ಪ್ರಕ್ರಿಯೆಯನ್ನು ಅಕ್ಟೋಬರ್ 22ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.ನೋಟಿಸ್ ಪಡೆದ ಮತದಾರರು ಏಳು ದಿನಗಳೊಳಗೆ ನಿಗದಿತ ದಿನ ಮತ್ತು ಸ್ಥಳದಲ್ಲಿ ಚುನಾವಣಾಧಿಕಾರಿಗಳ ಮುಂದೆ ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಮತಗಟ್ಟೆ ಅಥವಾ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ವಿಚಾರಣೆ ನಡೆಯಲಿದೆ.
ಒಂದು ಬಾರಿ ಹಾಜರಾಗದಿದ್ದರೆ ಎರಡನೇ ಬಾರಿ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಲಾಗುತ್ತದೆ.ನೋಟಿಸ್ ಅನ್ನು ಮೊಬೈಲ್ ಸಂದೇಶದ ಮೂಲಕ ಕಳುಹಿಸುವುದಿಲ್ಲ.ಸಾಧ್ಯವಾದಷ್ಟು ಮತದಾರರ ಮನೆಗೆ ತೆರಳಿ ಖುದ್ದಾಗಿ ನೋಟಿಸ್ ನೀಡಲಾಗುತ್ತದೆ. ನೋಟಿಸ್ನಲ್ಲಿ ಮತದಾರರ ದಾಖಲೆ ಪರಿಶೀಲನೆಗೆ ಕಾರಣವನ್ನೂ ಉಲ್ಲೇಖಿಸಲಾಗುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಹೆಚ್ಚಿನ ನೋಟಿಸ್
ಮ್ಯಾಪಿಂಗ್ ಸಮಸ್ಯೆ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬಂದಿದೆ. ಬೆಂಗಳೂರು ನಗರದಲ್ಲಿ ಒಟ್ಟು 9,46,037 ಮಂದಿಗೆ ನೋಟಿಸ್ ನೀಡಲಾಗುತ್ತಿದೆ. ಜಿಬಿಎ ಉತ್ತರ ವಲಯದಲ್ಲಿ 6,13,004, ಜಿಬಿಎ ಕೇಂದ್ರದಲ್ಲಿ 4,29,372 ಹಾಗೂ ದಕ್ಷಿಣ ವಲಯದಲ್ಲಿ 4,17,631 ಮತದಾರರು ನೋಟಿಸ್ ಪಟ್ಟಿಯಲ್ಲಿದ್ದಾರೆ.ಇದೇ ವೇಳೆ ಮಂಡ್ಯದಲ್ಲಿ 1,50,269, ದಕ್ಷಿಣ ಕನ್ನಡದಲ್ಲಿ 1,50,155, ಕೋಲಾರದಲ್ಲಿ 1,42,197, ಮೈಸೂರಿನಲ್ಲಿ 1,28,138, ತುಮಕೂರಿನಲ್ಲಿ 1,11,887 ಹಾಗೂ ಉಡುಪಿಯಲ್ಲಿ 97,705 ಮತದಾರರಿಗೆ ನೋಟಿಸ್ ನೀಡಲಾಗುತ್ತಿದೆ.
ಸೆಪ್ಟೆಂಬರ್ 23ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 23ರವರೆಗೆ ಆಕ್ಷೇಪಣೆ ಮತ್ತು ಹಕ್ಕು ಸಲ್ಲಿಸಲು ಅವಕಾಶ ನೀಡಲಾಗಿದೆ. ಹೆಸರು ಸೇರ್ಪಡೆಗೆ ಫಾರ್ಮ್-6, ಹೆಸರು ಅಥವಾ ಇತರ ವಿವರಗಳ ತಿದ್ದುಪಡಿಗೆ ಫಾರ್ಮ್-8 ಸೇರಿದಂತೆ ನಿಗದಿತ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.ಜೂನ್ 6ರಿಂದ ಆಗಸ್ಟ್ 23ರವರೆಗೆ ವಿವಿಧ ಅರ್ಜಿಗಳಿಗಾಗಿ ಒಟ್ಟು 14,67,929 ಮಂದಿ ಫಾರ್ಮ್ಗಳನ್ನು ಪಡೆದಿದ್ದಾರೆ. ಇದರಲ್ಲಿ ಫಾರ್ಮ್-6 ಅನ್ನು 4,73,354 ಮಂದಿ, ಫಾರ್ಮ್-6A ಅನ್ನು 3,880 ಮಂದಿ, ಫಾರ್ಮ್-7 ಅನ್ನು 67,307 ಮಂದಿ ಹಾಗೂ ಫಾರ್ಮ್-8 ಅನ್ನು 9,23,388 ಮಂದಿ ಪಡೆದಿದ್ದಾರೆ.SIR ಕರಡು ಪಟ್ಟಿಯಲ್ಲಿ ಹೆಸರು ಇಲ್ಲದಿರುವ ಅರ್ಹ ಮತದಾರರು ಸೆಪ್ಟೆಂಬರ್ 23ರೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಪರಿಶೀಲನೆ ಮತ್ತು ಆಕ್ಷೇಪಣೆಗಳ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದರು.
