ಬೆಂಗಳೂರು,ಆ.24- ನಕಲಿ ಔಷಧ ದಂಧೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಎಸ್ಐಟಿ ಅಧಿಕಾರಿಗಳು ಆರೋಪಿಗಳಿಂದ ಔಷಧಿ ಪಡೆದಿರುವ ಮೆಡಿಕಲ್ ಸ್ಟೋರ್ನ ಮಾಲೀಕರುಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ನಗರದ ಹೊರವಲಯದ ಬೆಂಗಳೂರು ದಕ್ಷಿಣ ತಾಲ್ಲೂಕಿನ ಸಿ.ಕೆ ತಾಂಡ್ಯದ ಫಾರ್ಮ್ಹೌಸ್ನಲ್ಲಿ ನಡೆಯುತ್ತಿದ್ದ ನಕಲಿ ಔಷಧಗಳ ದಂಧೆ ಬಯಲಾದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಎಸ್ಐಟಿ ರಚನೆಯಾದ ನಂತರ ಸಭೆಗಳನ್ನು ನಡೆಸಿದ ಅಧಿಕಾರಿಗಳು ಈ ದಂಧೆಯ ಆರೋಪಿಗಳಿಂದ ಔಷಧಿ ಖರೀದಿ ಮಾಡಿರುವ ಮೆಡಿಕಲ್ ಸ್ಟೋರ್ನ ಮಾಲೀಕರುಗಳನ್ನು ಪತ್ತೆ ಮಾಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ನಗರದ ಚಾಮರಾಜಪೇಟೆ ಮತ್ತು ಕಮರ್ಷಿಲ್ಸ್ಟ್ರೀಟ್ನ ಕೆಲವು ಮೆಡಿಕಲ್ ಸ್ಟೋರ್ಗಳ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿ ಕೆಲವು ಔಷಧಿಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲಿಸುತ್ತಿದ್ದಾರೆ.
ಕೆಲವು ಮೆಡಿಕಲ್ ಸ್ಟೋರ್ ಮಾಲೀಕರು ಈ ಆರೋಪಿಗಳಿಂದ ಎಷ್ಟು ವರ್ಷದಿಂದ ನಕಲಿ ಔಷಧಿಗಳನ್ನು ಖರೀದಿಸುತ್ತಿದ್ದರು. ಯಾವ ,ಯಾವ ಮಾದರಿಯ ಔಷಧಿಗಳನ್ನು ಎಷ್ಟು ,ಎಷ್ಟು ಬೆಲೆಗೆ ಕೊಂಡುಕೊಳ್ಳುತ್ತಿದ್ದರು ಎಂಬ ಮಾಹಿತಿಯನ್ನು ಸಹ ಎಸ್ಐಟಿ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.
ಫಾರ್ಮ್ಹೌಸ್ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ತಾವರೆಕೆರೆ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.ಪ್ರಮುಖ ಆರೋಪಿ ಪ್ರಶಾಂತ್ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಅವರ ಪತ್ನಿಯನ್ನು ವಿಚಾರಣೆ ಮಾಡಿದಾಗ ವಿದೇಶದ ವಿಮಾನ ನಿಲ್ದಾಣದ ಕಸ್ಟಮ್ಸೌ ಅಧಿಕಾರಿಗಳು ಬಂಧಿಸಿರುವುದು ತಿಳಿದು ಬಂದಿದೆ.
ಅಜರ್ಬೈಜಾನ್ ರಾಷ್ಟ್ರದಿಂದ ಕಡಿಮೆ ಬೆಲೆಯ ಔಷಧಿಗಳನ್ನು ಕರ್ನಾಟಕಕ್ಕೆ ತರುವಾಗ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸೌ ಅಧಿಕಾರಿಗಳು ತಪಾಸಣೆ ನಡೆಸಿದಾಗ ಪ್ರಶಾಂತ್ ಹಾಗೂ ಆತನ ಇಬ್ಬರು ಸಹಚರರು ಸಿಕ್ಕಿಬಿದ್ದಿದ್ದಾರೆ. ಈ ಮಾಹಿತಿ ಆಧಾರದ ಮೇಲೆ ಎಸ್ಐಟಿ ಅಧಿಕಾರಿಗಳು ಪ್ರಶಾಂತನನ್ನು ವಶಕ್ಕೆ ಪಡೆಯಲು ಇಂಟರ್ಪೋಲ್ ನೆರವು ಪಡೆಯಲಿದ್ದಾರೆ. ಈ ಬಗ್ಗೆ ಪ್ರಕ್ರಿಯೆಗಳು ನಡೆಯುತ್ತಿವೆ.
