Homeರಾಷ್ಟ್ರೀಯ7 ವರ್ಷಗಳ ಬಳಿಕ ಭಾರತಕ್ಕೆ ಕ್ಸಿ ಜಿನ್‌ಪಿಂಗ್, ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ ಸಾಧ್ಯತೆ

7 ವರ್ಷಗಳ ಬಳಿಕ ಭಾರತಕ್ಕೆ ಕ್ಸಿ ಜಿನ್‌ಪಿಂಗ್, ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ ಸಾಧ್ಯತೆ

ನವದೆಹಲಿ, ಸೆ.10- ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆ ಸಂಘರ್ಷದ ಬಳಿಕ ಭಾರತ-ಚೀನಾ ಸಂಬಂಧದಲ್ಲಿದ್ದ ಬಿರುಕುಗಳು ಕ್ರಮೇಣ ತಗ್ಗುತ್ತಿರುವ ಬೆನ್ನಲ್ಲೇ, ಏಳು ವರ್ಷಗಳ ದೀರ್ಘ ವಿರಾಮದ ಬಳಿಕ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತಕ್ಕೆ ಭೇಟಿ ನೀಡಲಿದ್ದಾರೆ.

ನವದೆಹಲಿಯ ಭಾರತ ಮಂಟಪದಲ್ಲಿ ಸೆ.12 ಮತ್ತು 13ರಂದು ನಡೆಯಲಿರುವ 18ನೇ ಬ್ರಿಕ್ಸ್ ಶೃಂಗಸಭೆಗೆ ಭಾರತ ಆತಿಥ್ಯ ವಹಿಸಿದೆ. ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಕ್ಸಿ ಜಿನ್‌ಪಿಂಗ್ ಶನಿವಾರ ದೆಹಲಿಗೆ ಆಗಮಿಸಲಿದ್ದು, ಸಭೆಯ ಮೊದಲ ದಿನವೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ಸಿ ಜಿನ್‌ಪಿಂಗ್ ನಡುವೆ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆ ನಡೆಯುವ ಸಾಧ್ಯತೆಯಿದೆ.

2020ರ ಜೂನ್‌ನಲ್ಲಿ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಭೀಕರ ಸಂಘರ್ಷದಲ್ಲಿ ಭಾರತೀಯ ಯೋಧರು ಹುತಾತ್ಮರಾದ ಬಳಿಕ ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಹಾಗೂ ವ್ಯಾಪಾರ ಸಂಬಂಧಗಳು ತೀವ್ರವಾಗಿ ಹದಗೆಟ್ಟಿದ್ದವು.

ಇದರ ಬೆನ್ನಲ್ಲೇ ಭಾರತ ಸರ್ಕಾರ ಚೀನಾದ ನೇರ ಹೂಡಿಕೆಗಳ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸುವುದರ ಜತೆಗೆ ಹಲವು ಚೀನಾ ಮೂಲದ ಮೊಬೈಲ್ ಆ್ಯಪ್‌ಗಳನ್ನು ನಿಷೇಧಿಸಿತ್ತು. 2020ರಿಂದ 2024ರವರೆಗಿನ ಅವಧಿ ದ್ವಿಪಕ್ಷೀಯ ಸಂಬಂಧಗಳ ಅತ್ಯಂತ ಕಠಿಣ ಹಂತವಾಗಿತ್ತು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಇತ್ತೀಚೆಗೆ ಹೇಳಿದ್ದರು.

ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆ ಮರುಸ್ಥಾಪನೆಯಾದರೆ ಮಾತ್ರ ದ್ವಿಪಕ್ಷೀಯ ಸಂಬಂಧಗಳು ಸಹಜ ಸ್ಥಿತಿಗೆ ಮರಳಲು ಸಾಧ್ಯ ಎಂಬ ಸ್ಪಷ್ಟ ಸಂದೇಶವನ್ನು ಭಾರತ ನೀಡಿತ್ತು. ಇತ್ತೀಚಿನ ತಿಂಗಳುಗಳಲ್ಲಿ ಗಡಿ ಗಸ್ತು ಹಾಗೂ ಉದ್ವಿಗ್ನತೆ ನಿವಾರಣೆಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ನಡೆದ ರಾಜತಾಂತ್ರಿಕ ಮತ್ತು ಸೇನಾ ಮಟ್ಟದ ಮಾತುಕತೆಗಳು ಫಲಪ್ರದವಾಗಿದ್ದು, ಸಂಬಂಧ ಸುಧಾರಣೆಗೆ ನಾಂದಿ ಹಾಡಿವೆ.

2019ರ ಅಕ್ಟೋಬರ್‌ನಲ್ಲಿ ಕ್ಸಿ ಜಿನ್‌ಪಿಂಗ್ ಭಾರತಕ್ಕೆ ಭೇಟಿ ನೀಡಿ, ತಮಿಳುನಾಡಿನ ಐತಿಹಾಸಿಕ ಕರಾವಳಿ ಪಟ್ಟಣ ಮಹಾಬಲಿಪುರಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಎರಡನೇ ಅನೌಪಚಾರಿಕ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಬಳಿಕ ಗಾಲ್ವಾನ್ ಸಂಘರ್ಷ ಸೇರಿದಂತೆ ಹಲವು ಬೆಳವಣಿಗೆಗಳಿಂದಾಗಿ ಅವರ ಭಾರತ ಭೇಟಿ ಸ್ಥಗಿತಗೊಂಡಿತ್ತು.

ಅರುಣಾಚಲ ಪ್ರದೇಶದ ವಿವಿಧ ಪ್ರದೇಶಗಳಿಗೆ ಮರುನಾಮಕರಣ ಮಾಡಲು ಚೀನಾ ನಡೆಸುತ್ತಿರುವ ಪ್ರಯತ್ನಗಳನ್ನು ಭಾರತ ಬಲವಾಗಿ ತಿರಸ್ಕರಿಸುತ್ತಾ ಬಂದಿದೆ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂಬ ತನ್ನ ನಿಲುವನ್ನು ಭಾರತ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ದೆಹಲಿಯಲ್ಲಿ ನಡೆಯಲಿರುವ ಶೃಂಗಸಭೆಯ ವೇಳೆ ಗಡಿ ಶಾಂತಿ, ಆರ್ಥಿಕ ಸಹಕಾರ, ಕೃತಕ ಬುದ್ಧಿಮತ್ತೆ (ಎಐ) ಹಾಗೂ ಉದಯೋನ್ಮುಖ ತಂತ್ರಜ್ಞಾನಗಳ ವಿನಿಮಯ ಸೇರಿದಂತೆ ಹಲವು ವಿಷಯಗಳ ಕುರಿತು ಉಭಯ ನಾಯಕರು ಚರ್ಚಿಸುವ ನಿರೀಕ್ಷೆಯಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕುತೂಹಲ ಮೂಡಿಸಿರುವ ಕ್ಸಿ ಜಿನ್‌ಪಿಂಗ್ ಅವರ ಭಾರತ ಭೇಟಿ, ಏಷ್ಯಾದ ಎರಡು ಪ್ರಮುಖ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಹೊಸ ದಿಕ್ಕು ನೀಡುವ ಸಾಧ್ಯತೆಯಿದೆ.

RELATED ARTICLES
spot_img

Latest News