Homeರಾಜ್ಯಪಾರ್ಕಿಂಗ್‌ ಶುಲ್ಕ ಪ್ರಸ್ತಾವ ಮರುಪರಿಶೀಲಿಸಿ : ಸಿಎಂಗೆ ರಾಮಲಿಂಗಾರೆಡ್ಡಿ ಮನವಿ

ಪಾರ್ಕಿಂಗ್‌ ಶುಲ್ಕ ಪ್ರಸ್ತಾವ ಮರುಪರಿಶೀಲಿಸಿ : ಸಿಎಂಗೆ ರಾಮಲಿಂಗಾರೆಡ್ಡಿ ಮನವಿ

Reconsider parking fee proposal: Ramalinga Reddy appeals to CM

ಬೆಂಗಳೂರು, ಆ.25- ಬೆಂಗಳೂರಿನಲ್ಲಿ ರಸ್ತೆ ಬದಿ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಪ್ರಸ್ತಾಪಿಸಲಾಗಿರುವ ಹೊಸ ನಿಯಮಗಳು ಹಾಗೂ ವಾರ್ಷಿಕ 15 ಸಾವಿರದಿಂದ 25 ಸಾವಿರ ರೂ.ವರೆಗೆ ಪಾರ್ಕಿಂಗ್‌ ಶುಲ್ಕ ವಿಧಿಸುವ ಪ್ರಸ್ತಾವನೆಯನ್ನು ಮರುಪರಿಶೀಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿರುವ ಅವರು, ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಬದಿ ಪಾರ್ಕಿಂಗ್‌ನಿಂದ ಉಂಟಾಗುತ್ತಿರುವ ಸಂಚಾರ ಸಮಸ್ಯೆಯನ್ನು ನಿಯಂತ್ರಿಸುವ ಅಗತ್ಯವಿದೆ. ಆದರೆ, ಈ ಸಂದರ್ಭದಲ್ಲಿ ಸಾಮಾನ್ಯ ನಾಗರಿಕರ ಆರ್ಥಿಕ ಪರಿಸ್ಥಿತಿಯನ್ನೂ ಪರಿಗಣಿಸುವುದು ಅತ್ಯಗತ್ಯ ಎಂದು ತಿಳಿಸಿದ್ದಾರೆ.

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ, ಅಡುಗೆ ಅನಿಲ, ಪೆಟ್ರೋಲ್‌, ಡೀಸೆಲ್‌, ಜಿಎಸ್‌ಟಿ ಹಾಗೂ ಟೋಲ್‌ ಸೇರಿದಂತೆ ವಿವಿಧ ವೆಚ್ಚಗಳ ಹೆಚ್ಚಳದಿಂದ ಮಧ್ಯಮ ವರ್ಗ ಮತ್ತು ಸಾಮಾನ್ಯ ಕುಟುಂಬಗಳು ಆರ್ಥಿಕ ಒತ್ತಡ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ವಾಹನ ಹೊಂದಿರುವವರಿಗೆ ಹೆಚ್ಚುವರಿಯಾಗಿ ವಾರ್ಷಿಕ 15 ಸಾವಿರದಿಂದ 25 ಸಾವಿರ ರೂ.ವರೆಗೆ ಪಾರ್ಕಿಂಗ್‌ ಶುಲ್ಕ ವಿಧಿಸುವುದು ಮತ್ತೊಂದು ಆರ್ಥಿಕ ಹೊರೆಯಾಗುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಸರ್ಕಾರ ಸಾಮಾನ್ಯ ಜನರ ಜೀವನಮಟ್ಟ ಸುಧಾರಿಸಲು ವಿವಿಧ ಜನಪರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಹೀಗಾಗಿ ನಗರ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳ ಮೇಲೆ ಮತ್ತೊಂದು ಅನಿವಾರ್ಯ ಆರ್ಥಿಕ ಹೊರೆ ಬೀಳದಂತೆ ಎಚ್ಚರಿಕೆ ವಹಿಸುವುದು ಸೂಕ್ತ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಬೆಂಗಳೂರು ನಗರದ ಹಳೆಯ ಕಟ್ಟಡಗಳು ಹಾಗೂ ಹಳೆಯ ವಸತಿ ಪ್ರದೇಶಗಳಲ್ಲಿ ಇಂದಿನ ವಾಹನಗಳ ಸಂಖ್ಯೆಗೆ ಅನುಗುಣವಾಗಿ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸುವುದು ಬಹುತೇಕ ಸಂದರ್ಭಗಳಲ್ಲಿ ಸಾಧ್ಯವಾಗುತ್ತಿಲ್ಲ. ಮಧ್ಯಮ ವರ್ಗದ ಅನೇಕ ಕುಟುಂಬಗಳು ಅಪಾರ್ಟ್‌ಮೆಂಟ್‌ಗಳು ಅಥವಾ ಸೀಮಿತ ಜಾಗದ ಮನೆಗಳಲ್ಲಿ ವಾಸಿಸುತ್ತಿದ್ದು, ವಾಹನಗಳನ್ನು ಮನೆಯೊಳಗೆ ನಿಲ್ಲಿಸಲು ಅಗತ್ಯ ಜಾಗದ ಕೊರತೆ ಎದುರಿಸುತ್ತಿವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಹೊಸ ಕಟ್ಟಡಗಳ ನಿರ್ಮಾಣ ನಿಯಮಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡುತ್ತಿರುವುದನ್ನು ಸ್ವಾಗತಿಸಿರುವ ಅವರು, ಈಗಾಗಲೇ ನಿರ್ಮಾಣಗೊಂಡಿರುವ ಹಳೆಯ ಕಟ್ಟಡಗಳಿಗೆ ಇದೇ ಮಾನದಂಡಗಳನ್ನು ಅನ್ವಯಿಸುವುದು ಕಷ್ಟಕರವಾಗಿದೆ ಎಂದಿದ್ದಾರೆ.

ಅಕ್ರಮ ಹಾಗೂ ದೀರ್ಘಾವಧಿಯ ರಸ್ತೆ ಬದಿ ಪಾರ್ಕಿಂಗ್‌ ನಿಯಂತ್ರಿಸುವ ಅಗತ್ಯವಿದೆ. ಆದರೆ, ನಿಯಮಿತವಾಗಿ ವಾಹನ ಬಳಸುವ ಹಾಗೂ ತಮ್ಮ ಕಟ್ಟಡದೊಳಗೆ ಪಾರ್ಕಿಂಗ್‌ ಸೌಲಭ್ಯ ಹೊಂದಿರದ ಸಾಮಾನ್ಯ ಕುಟುಂಬಗಳಿಗೆ ವಿನಾಯಿತಿ ನೀಡುವ ಬಗ್ಗೆಯೂ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.

ಸಾರ್ವಜನಿಕ ಹಿತದೃಷ್ಟಿಯಿಂದ ಬೆಂಗಳೂರಿನ ಶಾಸಕರು, ಸಂಘ-ಸಂಸ್ಥೆಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂದು ರಾಮಲಿಂಗಾರೆಡ್ಡಿ ಮುಖ್ಯಮಂತ್ರಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

RELATED ARTICLES
spot_img

Latest News