ಭುಜ್, ಆ.26- ಗುಜರಾತ್ನ ಭಾವನಗರದಲ್ಲಿ ಕಳ್ಳಭಟ್ಟಿ ಮದ್ಯ ಸೇವಿಸಿ 13 ಮಂದಿ ಮೃತಪಟ್ಟ ಘಟನೆ ನಡೆದ ಕೆಲವೇ ದಿನಗಳ ಬಳಿಕ, ಕಛ್ ಜಿಲ್ಲೆಯಲ್ಲಿ ಪೊಲೀಸರು ನಕಲಿ ಮದ್ಯ ತಯಾರಿಕಾ ಘಟಕವೊಂದನ್ನು ಪತ್ತೆಹಚ್ಚಿದ್ದಾರೆ. ಕಾರ್ಯಾಚರಣೆ ವೇಳೆ ಜನಪ್ರಿಯ ಭಾರತೀಯ ನಿರ್ಮಿತ ವಿದೇಶಿ ಮದ್ಯ (ಐಎಂಎಫ್ಎಲ್) ಬ್ರ್ಯಾಂಡ್ಗಳ ಹೆಸರಿರುವ ಸುಮಾರು 10 ಸಾವಿರ ಖಾಲಿ ಹಾಗೂ ತುಂಬಿದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರನ್ನು ಮುಂಬೈ ನಿವಾಸಿ ಹಿತೇಶ್ ಬಮಣಿಯಾ ಹಾಗೂ ಉತ್ತರ ಪ್ರದೇಶದ ಮಥುರಾ ನಿವಾಸಿ ವಿಜೇಂದ್ರ ಜಾಟ್ ಎಂದು ಗುರುತಿಸಲಾಗಿದೆ. ಗುಜರಾತ್ ಮದ್ಯ ನಿಷೇಧಿತ ರಾಜ್ಯವಾಗಿದ್ದು, ಇಲ್ಲಿ ಮದ್ಯದ ತಯಾರಿಕೆ, ಮಾರಾಟ ಮತ್ತು ಸೇವನೆಯನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದೆ.
ಕಾರ್ಯಾಚರಣೆ ಕುರಿತು ಬಾರ್ಡರ್ ರೇಂಜ್ ಪೊಲೀಸ್ ಮಹಾನಿರೀಕ್ಷಕ ಚಿರಾಗ್ ಕೊರಾಡಿಯಾ ಮಾತನಾಡಿ, ಕಛ್ ಜಿಲ್ಲೆಯ ಆದಿಪುರದಲ್ಲಿರುವ ತಾತ್ಕಾಲಿಕ ಕಾರ್ಖಾನೆಯ ಮೇಲೆ ದಾಳಿ ನಡೆಸಿ ಸುಮಾರು 9,400 ಖಾಲಿ ಬಾಟಲಿಗಳು ಹಾಗೂ 180 ಮಿಲಿ ಮದ್ಯ ತುಂಬಿದ್ದ 600 ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಸುಮಾರು 600 ಲೀಟರ್ ರಾಸಾಯನಿಕಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಭಾವನಗರ ಜಿಲ್ಲೆಯಲ್ಲಿ ಜನಪ್ರಿಯ ಐಎಂಎಫ್ಎಲ್ ಬ್ರ್ಯಾಂಡ್ನ ಹೆಸರಿರುವ ಬಾಟಲಿಗಳಲ್ಲಿ ತುಂಬಿದ್ದ ನಕಲಿ ಮದ್ಯ ಸೇವಿಸಿ 13 ಮಂದಿ ಮೃತಪಟ್ಟಿದ್ದರು. ಮೆಥನಾಲ್ ಎಂಬ ಅತ್ಯಂತ ವಿಷಕಾರಿ ರಾಸಾಯನಿಕ ಹೊಂದಿದ್ದ ಮದ್ಯವನ್ನು ಬ್ರ್ಯಾಂಡೆಡ್ ಮದ್ಯದ ಬಾಟಲಿಗಳಲ್ಲಿ ತುಂಬಿ ಮಾರಾಟ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮದ್ಯವನ್ನು ಒಟ್ಟು 67 ಮಂದಿ ಸೇವಿಸಿದ್ದರು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 27 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳ್ಳಭಟ್ಟಿ ಮದ್ಯ ಹಾಗೂ ಜೂಜಾಟ ಸೇರಿದಂತೆ ಅಕ್ರಮ ಚಟುವಟಿಕೆಗಳ ಮೇಲೆ ರಾಜ್ಯಾದ್ಯಂತ ನಿಗಾ ವಹಿಸುವ ಗುಜರಾತ್ ಪೊಲೀಸರ ವಿಶೇಷ ಘಟಕವಾದ ಸ್ಟೇಟ್ ಮಾನಿಟರಿಂಗ್ ಸೆಲ್ (ಎಸ್ಎಂಸಿ), ಭಾವನಗರ ಕಳ್ಳಭಟ್ಟಿ ಮದ್ಯ ದುರಂತದ ಕುರಿತು ಹಲವು ರಾಜ್ಯಗಳನ್ನು ಒಳಗೊಂಡ ತನಿಖೆ ನಡೆಸುತ್ತಿದೆ. ಮೆಥನಾಲ್ ಹಾಗೂ ಇತರ ರಾಸಾಯನಿಕಗಳ ಮೂಲ, ಅವುಗಳನ್ನು ಸಾಗಿಸಿದವರು ಹಾಗೂ ನಕಲಿ ಮದ್ಯ ತಯಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುಗಳನ್ನು ಖರೀದಿಸಿ ಸಾಗಿಸುವಲ್ಲಿ ಭಾಗಿಯಾಗಿರುವವರ ಬಗ್ಗೆಯೂ ಎಸ್ಎಂಸಿ ತನಿಖೆ ನಡೆಸುತ್ತಿದೆ.
