ಮೈಸೂರು, ಆ.27- ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಮೊದಲ ಹಂತದ ಗಜಪಡೆ ನಗರದ ಅರಣ್ಯಭವನ ತಲುಪಿದ್ದು, ನಾಳೆ ಅರಮನೆ ಪ್ರವೇಶಿಸಲಿದೆ.ಹುಣಸೂರು ತಾಲ್ಲೂಕಿನ ವೀರನಹೊಸಳ್ಳಿ ಗೇಟ್‌ನಿಂದ ನಿನ್ನೆ ಅದ್ದೂರಿಯಾಗಿ ಗಜಪಯಣಕ್ಕೆ ಚಾಲನೆ ನೀಡಲಾಗಿತ್ತು. ಸಂಜೆ ವೇಳೆಗೆ ಆನೆಗಳು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿ, ಅರಣ್ಯಭವನದಲ್ಲಿ ವಿಶ್ರಾಂತಿ ಪಡೆದವು.
ನಾಳೆ ಬೆಳಿಗ್ಗೆ 10 ಗಂಟೆಗೆ ಮಹೇಂದ್ರ, ಧನಂಜಯ, ಏಕಲವ್ಯ, ಗೋಪಿ, ಶ್ರೀರಾಮ, ಪ್ರಶಾಂತ, ಶ್ರೀಕಂಠ, ಲಕ್ಷ್ಮಿ ಹಾಗೂ ಕಾವೇರಿ ಆನೆಗಳು ಅರಮನೆ ಪ್ರವೇಶಿಸಲಿವೆ. ಆನೆಗಳ ಸ್ವಾಗತಕ್ಕೆ ಜಿಲ್ಲಾಡಳಿತ, ಅರಮನೆ ಆಡಳಿತ ಹಾಗೂ ಅರಣ್ಯ ಇಲಾಖೆ ವತಿಯಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಗಜಪಡೆಗಳಿಗೆ ಪೂಜೆ ಸಲ್ಲಿಸಿ ಅದ್ದೂರಿಯಾಗಿ ಸ್ವಾಗತಿಸಲಾಗುವುದು.
ಅರಮನೆ ಪ್ರವೇಶದ ಬಳಿಕ ಆನೆಗಳಿಗೆ ವಿಶೇಷ ಆರೈಕೆ ನೀಡಲಾಗುವುದಲ್ಲದೆ, ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಅಗತ್ಯವಾದ ತರಬೇತಿಯನ್ನೂ ನೀಡಲಾಗುವುದು.
ಸುಗ್ರೀವನ ಬದಲು ಶ್ರೀಕಂಠ
ದುಬಾರೆ ಸಾಕಾನೆ ಶಿಬಿರದ ಸುಗ್ರೀವ ಆನೆಯು ಕೊಡಗಿನಲ್ಲಿ ನಡೆದ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರಿಂದ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಸುಗ್ರೀವನ ಬದಲಿಗೆ ಮತ್ತಿಗೂಡು ಶಿಬಿರದ ಶ್ರೀಕಂಠನನ್ನು ಮೊದಲ ತಂಡಕ್ಕೆ ಆಯ್ಕೆ ಮಾಡಿ ಮೈಸೂರಿಗೆ ಕರೆತರಲಾಗಿದೆ. ಎರಡನೇ ಹಂತದಲ್ಲಿ ಸುಗ್ರೀವ ಮೈಸೂರಿಗೆ ಆಗಮಿಸಲಿದ್ದಾನೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಸತತ ಆರು ಬಾರಿ ಚಿನ್ನದ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದ ಅಭಿಮನ್ಯು ನಿವೃತ್ತಿಯಾದ ಹಿನ್ನೆಲೆಯಲ್ಲಿ, ನಿನ್ನೆ ವೀರನಹೊಸಳ್ಳಿಯಲ್ಲಿ ಅದ್ದೂರಿಯಾಗಿ ಬೀಳ್ಕೊಡಲಾಯಿತು. ಈ ಬಾರಿ ಚಿನ್ನದ ಅಂಬಾರಿ ಹೊರುವ ಅದೃಷ್ಟ ಯಾವ ಆನೆಗೆ ಒಲಿಯಲಿದೆ ಎಂಬುದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ. ಆನೆಗಳಿಗೆ ತಾಲೀಮು ನೀಡಿದ ಬಳಿಕ ಚಿನ್ನದ ಅಂಬಾರಿ ಹೊರುವ ಆನೆ ಹಾಗೂ ಅದರ ಸಾರಥಿಯನ್ನು ಅಂತಿಮವಾಗಿ ನಿರ್ಧರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
