ಪಾಟ್ನಾ, ಆ.27- ನೇಪಾಳ ಮತ್ತು ಟಿಬೆಟ್ ಗಡಿ ಭಾಗದಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ಅಲೆ ಗಂಡಕ್ ನದಿ ವ್ಯವಸ್ಥೆಯನ್ನು ಪ್ರವೇಶಿಸಿರುವ ಹಿನ್ನೆಲೆಯಲ್ಲಿ, ಬಿಹಾರ ಸರ್ಕಾರ ತೀವ್ರ ಮುನ್ನೆಚ್ಚರಿಕೆ ಕ್ರಮವಾಗಿ ವಾಲ್ಮೀಕಿನಗರದಲ್ಲಿರುವ ಗಂಡಕ್ ಬ್ಯಾರೇಜ್‌ನ ಎಲ್ಲಾ 36 ಗೇಟ್‌ಗಳನ್ನು ತೆರೆದಿದೆ.
ಟಿಬೆಟ್‌ನಲ್ಲಿ ಸಂಭವಿಸಿದ ಭೂಕಂಪನದಿಂದ ಹಿಮನದಿ ಸ್ಫೋಟಗೊಂಡು ಉಂಟಾದ ಭೀಕರ ಪ್ರವಾಹದಲ್ಲಿ ನೇಪಾಳದಲ್ಲಿ 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 133 ಭಾರತೀಯರು ಸೇರಿದಂತೆ 750ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಈ ದುರಂತದ ಹಿನ್ನೆಲೆಯಲ್ಲಿ ನೆರೆ ರಾಜ್ಯ ಬಿಹಾರದ ನದಿಪಾತ್ರದ ಜಿಲ್ಲೆಗಳಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿದೆ.
ರಾತ್ರಿ 11 ಗಂಟೆಯ ವೇಳೆಗೆ ಬ್ಯಾರೇಜ್‌ನಿಂದ ಸುಮಾರು 1.50 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದ್ದು, ಇದು ದಿನದ ಗರಿಷ್ಠ ಹೊರಹರಿವಾಗಿದೆ. ಸದ್ಯ ನೀರಿನ ಹರಿವು ಕ್ರಮೇಣ ಕಡಿಮೆಯಾಗುವ ನಿರೀಕ್ಷೆಯಿದೆ.
ಮುಖ್ಯಮಂತ್ರಿ ಸಾವ್ರಾಟ್ ಚೌಧರಿ ಹಾಗೂ ಮುಖ್ಯ ಕಾರ್ಯದರ್ಶಿ ಪ್ರತ್ಯಯ ಅಮತ್ ತುರ್ತು ಸಭೆ ನಡೆಸಿ, ಗಡಿ ಜಿಲ್ಲೆಗಳ ಅಧಿಕಾರಿಗಳಿಗೆ 24 ಗಂಟೆಯೂ ನಿಗಾ ವಹಿಸುವಂತೆ ಸೂಚಿಸಿದ್ದಾರೆ.ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್, ಗೋಪಾಲ್‌ಗಂಜ್, ಸರನ್, ಮುಜಫರ್‌ಪುರ, ವೈಶಾಲಿ, ಸೀತಾಮರ್ಹಿ ಹಾಗೂ ಶಿವಹರ್ ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ಘೋಷಿಸಲಾಗಿದೆ.
ಯಾವುದೇ ತುರ್ತು ಪರಿಸ್ಥಿತಿ ಎದುರಾದಲ್ಲಿ ಕಾರ್ಯಾಚರಣೆ ಕೈಗೊಳ್ಳಲು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನು ಬೆಟ್ಟಿಯಾ, ಗೋಪಾಲ್‌ಗಂಜ್ ಹಾಗೂ ಮುಜಫರ್‌ಪುರದಲ್ಲಿ ನಿಯೋಜಿಸಲಾಗಿದೆ. ಸಶಸ್ತ್ರ ಸೀಮಾ ಬಲ್ ಕೂಡ ನೆರವಿಗೆ ಸಿದ್ಧವಾಗಿದೆ.
ಜಲಸಂಪನ್ಮೂಲ ಇಲಾಖೆ ನದಿ ಪಾತ್ರದ ಒಡ್ಡುಗಳು, ತಗ್ಗು ಪ್ರದೇಶಗಳು ಹಾಗೂ ಸೇತುವೆಗಳ ಮೇಲ್ವಿಚಾರಣೆಯನ್ನು ತೀವ್ರಗೊಳಿಸಿದೆ. ಅಗತ್ಯವಿದ್ದಲ್ಲಿ ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದ್ದು, ದೋಣಿಗಳು, ಆಶ್ರಯ ತಾಣಗಳು ಹಾಗೂ ಸಮುದಾಯ ಅಡುಗೆಮನೆಗಳನ್ನು ಸಿದ್ಧಪಡಿಸಲಾಗಿದೆ. ಸಾರ್ವಜನಿಕ ಧ್ವನಿವರ್ಧಕಗಳ ಮೂಲಕ ಸಂತ್ರಸ್ತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತಿದೆ.
ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿರುವ ಮುಖ್ಯಮಂತ್ರಿ, ನೇಪಾಳದಲ್ಲಿ ಸಂಭವಿಸಿದ ಜೀವಹಾನಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಸಂಕಷ್ಟದಲ್ಲಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರದೊಂದಿಗೆ ಕೈಜೋಡಿಸಿ ಸಾಧ್ಯವಿರುವ ಎಲ್ಲ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅಧಿಕಾರಿಗಳು ಸಾರ್ವಜನಿಕರು ಆತಂಕಕ್ಕೊಳಗಾಗದೆ ಮುನ್ನೆಚ್ಚರಿಕೆ ವಹಿಸುವಂತೆ ಹಾಗೂ ಆಡಳಿತದಿಂದ ನೀಡಲಾಗುವ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.
