ನವದೆಹಲಿ, ಆ.27- ನೇಪಾಳದ ಗಡಿಗೆ ಹೊಂದಿಕೊಂಡಿರುವ ಟಿಬೆಟ್‌ನ ಪ್ರವಾಹಪೀಡಿತ ಗೈರಾಂಗ್ ಪಟ್ಟಣದಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಇಶಾ ಫೌಂಡೇಶನ್‌ನ ಕೈಲಾಸ ಯಾತ್ರೆಗೆ ತೆರಳಿದ್ದ ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬುಧವಾರ ಸಂಭವಿಸಿದ ಹಠಾತ್ ಪ್ರವಾಹದ ವೇಳೆ ಕೈಲಾಸ ಮಾನಸ ಸರೋವರ ಯಾತ್ರೆ ಮುಗಿಸಿ ವಾಪಸಾಗುತ್ತಿದ್ದ 77 ಯಾತ್ರಿಕರು ಗೈರಾಂಗ್‌ನ ವಲಸೆ ಕೇಂದ್ರದಲ್ಲಿದ್ದರು. ಈ ವೇಳೆ ಕಟ್ಟಡದೊಳಗೆ ಪ್ರವಾಹದ ನೀರು ನುಗ್ಗಿದ್ದರಿಂದ ಭಾರೀ ಅನಾಹುತ ಸಂಭವಿಸಿದೆ ಎಂದು ವರದಿಯಾಗಿದೆ.
ಪ್ರವಾಹದ ತೀವ್ರತೆಯಿಂದಾಗಿ ಸುಮಾರು 80 ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅವರ ಸ್ಥಿತಿಗತಿ ಕುರಿತು ಇದುವರೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಆಧ್ಯಾತ್ಮಿಕ ಗುರು ಹಾಗೂ ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಚೀನಾ ಸರ್ಕಾರದ ಅಧಿಕಾರಿಗಳಿಗೆ ತುರ್ತು ಮನವಿ ಮಾಡಿದ್ದಾರೆ.
ತಮ್ಮ ಅಧಿಕೃತ ಸಂದೇಶದಲ್ಲಿ ನೋವು ವ್ಯಕ್ತಪಡಿಸಿರುವ ಸದ್ಗುರು, ಗೈರಾಂಗ್‌ನ ಪ್ರವಾಹದಲ್ಲಿ ತಮ್ಮ ಗುಂಪಿನವರು ಸಿಲುಕಿರುವ ಬಗ್ಗೆ ತಿಳಿದು ತೀವ್ರ ಆಘಾತವಾಗಿದೆ. ಪ್ರವಾಹದ ಬಳಿಕ ಅವರ ಕುರಿತು ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಸಂತ್ರಸ್ತರ ಕುಟುಂಬಗಳೊಂದಿಗೆ ತಾವೂ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಗಳಲ್ಲಿ ನೆರವಾಗಲು ಅವಕಾಶ ನೀಡುವಂತೆ ಅವರು ಚೀನಾ ಅಧಿಕಾರಿಗಳನ್ನು ಕೋರಿದ್ದಾರೆ. ಸ್ಥಳೀಯ ರಕ್ಷಣಾ ಪಡೆಗಳ ಕಾರ್ಯಾಚರಣೆಗೆ ಯಾವುದೇ ರೀತಿಯ ಅಡ್ಡಿಪಡಿಸುವುದಿಲ್ಲ. ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಲು ಹಾಗೂ ಹುಡುಕಾಟ ಕಾರ್ಯದಲ್ಲಿ ಕೈಜೋಡಿಸಲು ಮಾತ್ರ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
77 ಯಾತ್ರಿಕರು, ಮೂವರು ಸ್ವಯಂಸೇವಕರು
ದುರಂತ ಸಂಭವಿಸಿದ ಸಂದರ್ಭದಲ್ಲಿ ಇಶಾ ಫೌಂಡೇಶನ್‌ನ ಕೈಲಾಸ ಮಾನಸ ಸರೋವರ ಯಾತ್ರಾ ತಂಡದ 77 ಯಾತ್ರಿಕರು ಹಾಗೂ ಮೂವರು ಸ್ವಯಂಸೇವಕರು ಸೇರಿ ಸುಮಾರು 80 ಮಂದಿ ಗೈರಾಂಗ್‌ನ ವಲಸೆ ಕೇಂದ್ರದಲ್ಲಿದ್ದರು ಎಂದು ಸದ್ಗುರು ತಿಳಿಸಿದ್ದಾರೆ.
ಕೈಲಾಸ ಯಾತ್ರೆಯಿಂದ ವಾಪಸಾಗುತ್ತಿದ್ದ ತಂಡ ಗೈರಾಂಗ್‌ನ ವಲಸೆ ಕೇಂದ್ರದಲ್ಲಿದ್ದಾಗ ಏಕಾಏಕಿ ಪ್ರವಾಹದ ನೀರು ಕಟ್ಟಡದೊಳಗೆ ನುಗ್ಗಿದೆ. ಬಳಿಕ ಸಂಪರ್ಕ ವ್ಯವಸ್ಥೆಗಳು ಕಡಿತಗೊಂಡಿದ್ದರಿಂದ ಅವರ ಸ್ಥಿತಿಗತಿ ಕುರಿತು ತಕ್ಷಣ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಲಿಲ್ಲ. ಇದರಿಂದ ಯಾತ್ರಿಕರ ಕುಟುಂಬಗಳಲ್ಲಿ ಆತಂಕ ಹೆಚ್ಚಾಗಿದೆ.
ಗೈರಾಂಗ್‌ಗೆ ತಾವೂ ಹಾಗೂ ಸ್ವಯಂಸೇವಕರ ಸಣ್ಣ ತಂಡವೊಂದೂ ತೆರಳಲು ಅವಕಾಶ ನೀಡುವಂತೆ ಸದ್ಗುರು ಚೀನಾ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗುವುದಿಲ್ಲ. ಬದಲಾಗಿ ಸ್ಥಳೀಯ ಅಧಿಕಾರಿಗಳೊಂದಿಗೆ ಕೈಜೋಡಿಸಿ ಕಾಣೆಯಾದವರನ್ನು ಪತ್ತೆಹಚ್ಚಲು ಹಾಗೂ ಅವರ ಕುಟುಂಬಗಳಿಗೆ ನೆರವಾಗಲು ಬಯಸುವುದಾಗಿ ತಿಳಿಸಿದ್ದಾರೆ.
ತಮ್ಮ ಯಾತ್ರಾ ತಂಡದ ಸದಸ್ಯರ ಕುರಿತು ಯಾವುದೇ ಖಚಿತ ಮಾಹಿತಿ ಲಭ್ಯವಾಗದಿರುವುದು ಅತ್ಯಂತ ನೋವಿನ ಸಂಗತಿ ಎಂದು ಸದ್ಗುರು ಹೇಳಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡಿರುವುದಾಗಿ ತಿಳಿಸಿರುವ ಅವರು, ರಕ್ಷಣಾ ತಂಡಗಳ ಕಾರ್ಯಕ್ಕೆ ಗೌರವ ನೀಡುವುದಾಗಿ ಹಾಗೂ ಅವರ ಕಾರ್ಯಾಚರಣೆಗೆ ಅಡ್ಡಿಯಾಗದ ರೀತಿಯಲ್ಲಿ ನೆರವು ನೀಡಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.
495 ಮಂದಿ ಸುರಕ್ಷಿತವಾಗಿ ವಾಪಸ್
ಇಶಾ ಫೌಂಡೇಶನ್‌ನ ಯಾತ್ರಾ ತಂಡಗಳಿಗೆ ಸಂಬಂಧಿಸಿದ ಲಭ್ಯ ಮಾಹಿತಿಯ ಪ್ರಕಾರ, 21 ಗುಂಪುಗಳ ಪೈಕಿ 495 ಮಂದಿ ಸುರಕ್ಷಿತವಾಗಿ ವಾಪಸಾಗಿದ್ದಾರೆ. ಇನ್ನೂ 743 ಮಂದಿ ಟಿಬೆಟ್‌ನಲ್ಲಿದ್ದು, 148 ಮಂದಿ ನೇಪಾಳದಲ್ಲಿದ್ದರು. ಆದರೆ ಗೈರಾಂಗ್‌ನ ವಲಸೆ ಕೇಂದ್ರದಲ್ಲಿದ್ದ 77 ಯಾತ್ರಿಕರ ಕುರಿತು ತಕ್ಷಣದ ಮಾಹಿತಿ ಲಭ್ಯವಾಗಿರಲಿಲ್ಲ.
ಸದ್ಯ ಚೀನಾ ಹಾಗೂ ಸ್ಥಳೀಯ ಆಡಳಿತದ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗಳು ಮುಂದುವರಿದಿವೆ. ನಾಪತ್ತೆಯಾಗಿರುವ ಯಾತ್ರಿಕರ ಸುರಕ್ಷತೆಗಾಗಿ ಕುಟುಂಬಸ್ಥರು ಆತಂಕದಿಂದ ಕಾಯುತ್ತಿದ್ದು, ರಕ್ಷಣಾ ಕಾರ್ಯಾಚರಣೆ ತ್ವರಿತಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
