Homeರಾಜ್ಯ"ಹಿಂದೂಗಳೇ ಈಗಲಾದರೂ ಎಚ್ಛೆತ್ತುಕೊಳ್ಳದಿದ್ದರೆ ಮನೆಯಲ್ಲೂ ಗಣೇಶ ಕೂರಿಸಲು ಪರ್ಮಿಷನ್ ಪಡೆಯುವ ದುಸ್ಥಿತಿ ಬರುತ್ತೆ"

“ಹಿಂದೂಗಳೇ ಈಗಲಾದರೂ ಎಚ್ಛೆತ್ತುಕೊಳ್ಳದಿದ್ದರೆ ಮನೆಯಲ್ಲೂ ಗಣೇಶ ಕೂರಿಸಲು ಪರ್ಮಿಷನ್ ಪಡೆಯುವ ದುಸ್ಥಿತಿ ಬರುತ್ತೆ”

ಬೆಂಗಳೂರು, ಸೆ. 13: ಹಿಂದೂಗಳು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ನಿಮ್ಮ ಮನೆಯಲ್ಲೂ ಗಣಪತಿ ಪ್ರತಿಷ್ಠಾಪಿಸಲು ಸರ್ಕಾರದ ಅನುಮತಿ ಪಡೆಯುವ ದುಃಸ್ಥಿತಿ ಬರಬಹುದು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಎಚ್ಚರಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಗಲಾದರೂ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮನೆಯ ಮುಂದೆ ಗಣಪತಿ ಪ್ರತಿಷ್ಠಾಪಿಸಲು ಸರ್ಕಾರದ ಅನುಮತಿ ಪಡೆಯುವ ಪರಿಸ್ಥಿತಿ ಬರಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

ತಿ. ನರಸೀಪುರದಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ವಿಧಿಸಲಾಗುತ್ತಿರುವ ನಿರ್ಬಂಧಗಳು ಹಾಗೂ ಪೊಲೀಸರ ಎಚ್ಚರಿಕೆಯ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ‘ಈ ವಿಚಾರವನ್ನು ಇಲ್ಲಿಗೇ ಬಿಡುವುದಿಲ್ಲ. ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಿ. ನರಸೀಪುರಕ್ಕೆ ತೆರಳಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತೇನೆ’ ಎಂದು ತಿಳಿಸಿದರು.

ಗಣೇಶೋತ್ಸವ ಆಚರಣೆಗೆ ಷರತ್ತು ವಿಧಿಸುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ ಅವರು, ಗಣೇಶೋತ್ಸವದ ಸಂದರ್ಭದಲ್ಲಿ ಧ್ವನಿವರ್ಧಕ ಬಳಕೆ ಸೇರಿದಂತೆ ವಿವಿಧ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ ನಿರ್ದೇಶನಗಳು ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು ಎಂದು ಹೇಳಿದರು.

ಮಸೀದಿಗಳಲ್ಲಿನ ಧ್ವನಿವರ್ಧಕ ಬಳಕೆಯ ಬಗ್ಗೆಯೂ ಸರ್ಕಾರ ಪರಿಶೀಲನೆ ನಡೆಸುತ್ತಿದೆಯೇ ಎಂದು ಪ್ರಶ್ನಿಸಿದರು.‘ಸುಪ್ರೀಂ ಕೋರ್ಟ್‌ ನಿಗದಿಪಡಿಸಿರುವ ಡೆಸಿಬಲ್‌ ಮಿತಿಯಂತೆ ಎಲ್ಲೆಡೆ ನಿಯಮ ಜಾರಿಯಾಗಬೇಕು. ಮಸೀದಿಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದೀರಾ? ಅವರಿಗೂ ಧ್ವನಿವರ್ಧಕ ಬಳಸಬಾರದು ಎಂದು ಹೇಳಿ’ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದಂತಹ ಪ್ರಕರಣಗಳಲ್ಲಿ ಒಂದು ರೀತಿಯ ನಿಲುವು ಹಾಗೂ ಗಣೇಶೋತ್ಸವದಂತಹ ಧಾರ್ಮಿಕ ಆಚರಣೆಗಳ ವಿಚಾರದಲ್ಲಿ ಮತ್ತೊಂದು ರೀತಿಯ ನಿಲುವು ತಾಳಲಾಗುತ್ತಿದೆ ಎಂದು ಆರೋಪಿಸಿದ ಆರ್‌. ಅಶೋಕ್‌, ಸರ್ಕಾರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ‘ಗೂಂಡಾ ಸರ್ಕಾರ’ ಹಾಗೂ ‘ತಾಲಿಬಾನಿ ಸರ್ಕಾರ’ ಎಂದು ಟೀಕಿಸಿದ ಅವರು, ಮತಬ್ಯಾಂಕ್‌ ರಾಜಕಾರಣಕ್ಕಾಗಿ ಗಣೇಶೋತ್ಸವಕ್ಕೆ ಷರತ್ತು ವಿಧಿಸಲಾಗುತ್ತಿದೆ. ಬ್ರಿಟಿಷರ ಆಡಳಿತದ ಅವಧಿಯಲ್ಲಿಯೂ ಗಣೇಶೋತ್ಸವ ಆಚರಿಸಲಾಗುತ್ತಿತ್ತು ಎಂದು ಹೇಳಿದರು. ಆದರೆ, ಪ್ರಸ್ತುತ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಭಯ ಮತ್ತು ನಿರ್ಬಂಧದ ವಾತಾವರಣ ಸೃಷ್ಟಿಯಾಗಿದೆ ಎಂದು ಟೀಕಿಸಿದರು.

ಇದೇ ಸಂದರ್ಭದಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಆರ್‌. ಅಶೋಕ್‌, ‘ಯಾರು ದಲಿತ ವಿರೋಧಿ ಎಂಬುದು ಈಗ ಗೊತ್ತಾಯಿತಲ್ಲ’ ಎಂದು ವ್ಯಂಗ್ಯವಾಡಿದರು.

ಸತೀಶ್‌ ಜಾರಕಿಹೊಳಿ ಅವರಿಗೆ ಚಿನ್ನದ ಗಣಿಗೆ ಸಂಬಂಧಿಸಿದಂತೆ ಪಾಲುದಾರಿಕೆ ಇದೆ ಎಂಬ ಆರೋಪ ಬೆಳಗಾವಿ ಭಾಗದವರಿಗೆ ಗೊತ್ತಿರುವ ವಿಚಾರ ಎಂದು ಹೇಳಿದ ಅವರು, ‘ಬೆಂಗಳೂರಿನಲ್ಲಿ ಕುಳಿತವರಿಗೆ ಈ ಕುರಿತು ಮಾಹಿತಿ ಇಲ್ಲ. ಇಡಿಗೆ ದೂರು ನೀಡಿದವರು ಸತೀಶ್‌ ಜಾರಕಿಹೊಳಿ ಅವರ ಸುತ್ತಮುತ್ತ ಇರುವವರೇ ಆಗಿರಬಹುದು. ಮೊದಲು ಬೆಳಗಾವಿಯಲ್ಲಿ ಅಂತಹ ವ್ಯಕ್ತಿಗಳನ್ನು ಹುಡುಕಬೇಕು. ನಂತರ ಬೆಂಗಳೂರಿನಲ್ಲಿ ಹುಡುಕಬೇಕು’ ಎಂದು ಹೇಳಿದರು.

‘ಈ ಕುರಿತು ಯಾರು ಮೊದಲು ಬ್ರೇಕಿಂಗ್‌ ಸುದ್ದಿ ನೀಡಿದರು ಮತ್ತು ಕ್ಷಣಕ್ಷಣದ ಮಾಹಿತಿಯನ್ನು ಯಾರು ನೀಡಿದರು ಎಂಬುದನ್ನು ಪತ್ತೆಹಚ್ಚಿದರೆ ದೂರು ನೀಡಿದವರ ಬಗ್ಗೆ ಸುಳಿವು ಸಿಗಬಹುದು. ಆದರೆ ಜಾತಿಗೂ ಭ್ರಷ್ಟಾಚಾರಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

RELATED ARTICLES
spot_img

Latest News