ನ್ಯೂಯಾರ್ಕ್, ಸೆ.15- ಹಳಿಯ ಮೇಲೆ ಕುಳಿತಿದ್ದವರ ಮೇಲೆ ರೈಲು ಹರಿದ ಪರಿಣಾಮ ಭಾರತೀಯ ಮೂಲದ ಯುವತಿ ಹಾಗೂ ಆಕೆಯ ನೇಪಾಳಿ ಸ್ನೇಹಿತ ಮೃತಪಟ್ಟಿರುವ ಘಟನೆ ನ್ಯೂಯಾರ್ಕ್‌ನ ಸಬ್‌ವೇ ರೈಲು ನಿಲ್ದಾಣದಲ್ಲಿ ನಡೆದಿದೆ. ನ್ಯೂಜೆರ್ಸಿಯ ಡೇಟನ್ ನಿವಾಸಿ ಮಲೈಕಾ ಚಿತ್ರೆ ಮತ್ತು ಸೇರೆವಿಲ್ಲೆ ನಿವಾಸಿ ನವಂ ಕೌಲ್ ಮೃತ ದುರ್ದೈವಿಗಳು.
ಇಬ್ಬರೂ ಸ್ಪ್ರಿಂಗ್ ಸ್ಟ್ರೀಟ್ ಸಬ್‌ವೇ ನಿಲ್ದಾಣದ ರೈಲ್ವೆ ಹಳಿಯ ಮೇಲೆ ಕುಳಿತಿದ್ದಾಗ ರೈಲು ಡಿಕ್ಕಿ ಹೊಡೆದಿದೆ. ಘಟನೆಗೆ ಕೆಲ ಕ್ಷಣಗಳ ಮೊದಲು ಇಬ್ಬರೂ ಹಳಿಯ ಮೇಲೆ ಕುಳಿತಿರುವ ದೃಶ್ಯವನ್ನು ದಾರಿಹೋಕರೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಮಲೈಕಾ ಚಿತ್ರೆ ನಗುತ್ತಾ ಕೌಲ್ ಅವರನ್ನು ತಮ್ಮತ್ತ ಎಳೆಯುತ್ತಿದ್ದುದನ್ನು ರೈಲು ಚಾಲಕಿ ಗಮನಿಸಿದ್ದಾಗಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇಬ್ಬರಲ್ಲಿ ಒಬ್ಬರು ಮೊದಲು ಹಳಿಗೆ ಬಿದ್ದಿದ್ದಾರೆ ಅಥವಾ ಇಳಿದಿದ್ದಾರೆ. ಅವರನ್ನು ರಕ್ಷಿಸಲು ಮತ್ತೊಬ್ಬರು ಹಳಿಗೆ ಇಳಿದಿರಬಹುದು ಎಂದು ಶಂಕಿಸಲಾಗಿದೆ.
ಹಳಿಯ ಮೇಲೆ ಇಬ್ಬರೂ ಕುಳಿತಿರುವುದನ್ನು ಕಂಡು ರೈಲು ಚಾಲಕಿ ತುರ್ತು ಬ್ರೇಕ್ ಹಾಕಲು ಯತ್ನಿಸಿದರಾದರೂ, ಅಷ್ಟರಲ್ಲೇ ರೈಲು ಅವರ ಮೇಲೆ ಹರಿದುಹೋಗಿದೆ.ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಘಟನೆಯ ಬಳಿಕ ರೈಲಿನಲ್ಲಿದ್ದ ಸುಮಾರು 100 ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ಅವರು ಮದ್ಯದ ಅಮಲಿನಲ್ಲಿದ್ದರೇ ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ. ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲವಾದರೂ, ಪೊಲೀಸರು ಆತ್ಮಹತ್ಯೆಯ ಸಾಧ್ಯತೆಯನ್ನೂ ತಳ್ಳಿಹಾಕಿಲ್ಲ.
ಮಲೈಕಾ ಚಿತ್ರೆ ಅಕಾಡಿಯಾ ಫಾರ್ಮಾಸ್ಯುಟಿಕಲ್ಸ್‌ನಲ್ಲಿ ಕಾರ್ಯಾಚರಣೆ ತಜ್ಞೆಯಾಗಿ ಹಾಗೂ ನವಂ ಕೌಲ್ ಬ್ಲೂಮ್‌ಬರ್ಗ್‌ನಲ್ಲಿ ಹಣಕಾಸು ದತ್ತಾಂಶ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಬ್ಬರೂ ರಟ್ಜರ್ಸ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾಗಿದ್ದರು. ನವಂ ಕೌಲ್ ಸ್ನೇಹಪರ, ಆಕರ್ಷಕ ವ್ಯಕ್ತಿತ್ವದ ಯುವಕನಾಗಿದ್ದು, ಮೂರು ದಶಕಗಳ ಹಿಂದೆ ಅವರ ಕುಟುಂಬ ನೇಪಾಳದಿಂದ ಅಮೆರಿಕಕ್ಕೆ ವಲಸೆ ಬಂದಿತ್ತು ಎಂದು ಸ್ನೇಹಿತರು ತಿಳಿಸಿದ್ದಾರೆ.
ಮಲೈಕಾ ಚಿತ್ರೆ ಕೂಡ ಓದಿನಲ್ಲಿ ಬುದ್ಧಿವಂತೆಯಾಗಿದ್ದು, ಎಲ್ಲರೊಂದಿಗೆ ಬೆರೆಯುತ್ತಿದ್ದ ಹುಡುಗಿ ಎಂದು ನೆರೆಹೊರೆಯವರು ಸ್ಮರಿಸಿದ್ದಾರೆ. ಇಬ್ಬರ ಸಾವು ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ಆಘಾತ ತಂದಿದ್ದು, ಪೊಲೀಸರ ತನಿಖೆ ಮುಂದುವರಿದಿದೆ.
