Homeರಾಜ್ಯಚಿಕ್ಕಮಗಳೂರಲ್ಲಿ ಡಾಲ್ಡಾ, ರಾಸಾಯನಿಕ ಬಳಸಿ ನಕಲಿ ನಾಟಿ ತುಪ್ಪ ದಂಧೆ

ಚಿಕ್ಕಮಗಳೂರಲ್ಲಿ ಡಾಲ್ಡಾ, ರಾಸಾಯನಿಕ ಬಳಸಿ ನಕಲಿ ನಾಟಿ ತುಪ್ಪ ದಂಧೆ

ಚಿಕ್ಕಮಗಳೂರು, ಆ.31- ನಗರದ ಮಾರ್ಕೆಟ್‌ ರಸ್ತೆಯ ಮನೆಯೊಂದರಲ್ಲಿ ಡಾಲ್ಡಾ ಹಾಗೂ ವಿವಿಧ ರಾಸಾಯನಿಕ ಪದಾರ್ಥಗಳನ್ನು ಬಳಸಿ ನಕಲಿ ತುಪ್ಪ ತಯಾರಿಸಿ, ‘ನಾಟಿ ತುಪ್ಪ’ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ನಗರ ಠಾಣೆ ಪೊಲೀಸರು ಜಂಟಿ ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 30 ಕೆ.ಜಿಗೂ ಅಧಿಕ ನಕಲಿ ತುಪ್ಪ ಪತ್ತೆಯಾಗಿದೆ. ಅಧಿಕಾರಿಗಳು ತುಪ್ಪದ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸುವುದು ಸೇರಿದಂತೆ ಮುಂದಿನ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಅಧಿಕಾರಿಗಳು ದಾಳಿ ನಡೆಸಲು ಆಗಮಿಸುತ್ತಿದ್ದಂತೆ ದಂಧೆ ನಡೆಸುತ್ತಿದ್ದವರು ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬಳ್ಳಾರಿ ಮೂಲದ ಒಂದೇ ತಂಡ ಚಿಕ್ಕಮಗಳೂರು ನಗರದಲ್ಲಿ ನಿರಂತರವಾಗಿ ನಕಲಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಈ ಹಿಂದೆ ಕಳೆದ ವಾರವೂ ನಗರದ ಮತ್ತೊಂದು ಪಾಳುಬಿದ್ದ ಮನೆಯೊಂದರ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ನಕಲಿ ತುಪ್ಪ ತಯಾರಿಕೆಗೆ ಬಳಸುತ್ತಿದ್ದ ವಿವಿಧ ವಸ್ತುಗಳು ಪತ್ತೆಯಾಗಿದ್ದವು ಎನ್ನಲಾಗಿದೆ.

ನಕಲಿ ತುಪ್ಪವನ್ನು ತಯಾರಿಸಿ ‘ನಾಟಿ ತುಪ್ಪ’ ಎಂದು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಜಾಲದ ಕುರಿತು ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಘಟನೆ ಚಿಕ್ಕಮಗಳೂರು ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES
spot_img

Latest News