Homeರಾಜ್ಯಪೋರ್ಟರ್‌ ಆ್ಯಪ್‌ ಮೂಲಕ ಸರಬರಾಜಾಗುತ್ತಿತ್ತು ಫಾರ್ಮ್‌ಹೌಸ್‌ನಲ್ಲಿ ತಯಾರಿಸಿದ ನಕಲಿ ಔಷಧಿ

ಪೋರ್ಟರ್‌ ಆ್ಯಪ್‌ ಮೂಲಕ ಸರಬರಾಜಾಗುತ್ತಿತ್ತು ಫಾರ್ಮ್‌ಹೌಸ್‌ನಲ್ಲಿ ತಯಾರಿಸಿದ ನಕಲಿ ಔಷಧಿ

Fake medicines manufactured in a farmhouse were being supplied through Porter app

ಬೆಂಗಳೂರು, ಆ.22- ನಕಲಿ ಔಷಧ ತಯಾರಿಕಾ ಜಾಲದ ಬಗ್ಗೆ ಆತಂಕ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಈ ಔಷಧಿಗಳನ್ನು ಪೋರ್ಟರ್‌ ಆ್ಯಪ್‌ ಮೂಲಕ ಬುಕ್‌ ಮಾಡಿ ಸರಬರಾಜು ಮಾಡಲಾಗುತ್ತಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ. ಬೆಂಗಳೂರು ಹೊರವಲಯದ ದೊಡ್ಡೇರಿ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ನಕಲಿ ಔಷಧಿಗಳನ್ನು ತಯಾರಿಸಲಾಗುತ್ತಿತ್ತು ಎಂಬ ಕರಾಳ ಜಾಲ ಬೆಳಕಿಗೆ ಬಂದಿದೆ.

ನಕಲಿ ಔಷಧಿಗಳ ತಯಾರಿಕೆಯನ್ನು ನಿಗೂಢವಾಗಿ ನಡೆಸುತ್ತಿದ್ದ ಆರೋಪಿಗಳು ಖಾಸಗಿ ಡೆಲಿವರಿ ಆ್ಯಪ್‌ ಪೋರ್ಟರ್‌ ಬಳಸುತ್ತಿದ್ದರು ಎಂಬುದು ಎಸ್‌ಐಟಿ ತನಿಖೆಯಿಂದ ಗೊತ್ತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಾವರೆಕೆರೆ ಠಾಣೆ ಪೊಲೀಸರು ಈಗಾಗಲೇ ನಾಲ್ವರನ್ನು ಬಂಧಿಸಿದ್ದಾರೆ.

ಪ್ರಕರಣದ ಪ್ರಮುಖ ಸೂತ್ರಧಾರ ಎನ್ನಲಾಗಿರುವ ಪ್ರಶಾಂತ್‌ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ತನಿಖೆ ನಡೆಸುತ್ತಿರುವ ಎಸ್‌ಐಟಿ ಆತನ ವಿರುದ್ಧ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಲು ಸಿದ್ಧತೆ ನಡೆಸುತ್ತಿದೆ.

ಬೆಂಗಳೂರಿನಲ್ಲೇ ಕುಳಿತು ಖಾಸಗಿ ಆ್ಯಪ್‌ನಲ್ಲಿ ಔಷಧಿಗಳನ್ನು ಬುಕ್‌ ಮಾಡುತ್ತಿದ್ದ ಆರೋಪಿಗಳು, ಫಾರ್ಮ್‌ಹೌಸ್‌ನಿಂದ ಔಷಧಿಗಳನ್ನು ಪಡೆದುಕೊಂಡು ಎಲ್ಲಿಗೆ ತಲುಪಿಸಬೇಕು ಎಂಬುದನ್ನು ಸೂಚಿಸುತ್ತಿದ್ದರು. ಈ ಮೂಲಕ ವಾರಕ್ಕೆ ಕನಿಷ್ಠ 100 ಬಾಟಲಿಗಳಷ್ಟು ನಕಲಿ ಔಷಧಿಗಳನ್ನು ವಿವಿಧೆಡೆಗಳಿಗೆ ರವಾನಿಸಲಾಗುತ್ತಿತ್ತು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಸ್ಥಳೀಯರಲ್ಲಿ ಮೂಡಿದ್ದ ಅನುಮಾನ

ದೊಡ್ಡೇರಿ ಗ್ರಾಮದ ಈ ಫಾರ್ಮ್‌ಹೌಸ್‌ ಕುರಿತು ಸ್ಥಳೀಯರಲ್ಲಿ ಮೊದಲಿನಿಂದಲೂ ಅನುಮಾನ ಮೂಡಿತ್ತು. ವಾರದಲ್ಲಿ ಎರಡು-ಮೂರು ಬಾರಿ ಕಾರುಗಳು ಬಂದು ಹೋಗುತ್ತಿದ್ದವು. ಫಾರ್ಮ್‌ಹೌಸ್‌ ಬಳಿ ಸ್ಥಳೀಯರು ಯಾರೂ ಹೋಗದಂತೆ ನೋಡಿಕೊಳ್ಳಲಾಗುತ್ತಿತ್ತು. ಇದಕ್ಕಾಗಿ ಕ್ರೂರ ತಳಿಯ ನಾಯಿಯನ್ನೂ ಕಟ್ಟಲಾಗಿತ್ತು ಎನ್ನಲಾಗಿದೆ.

ಇದನ್ನೆಲ್ಲ ಗಮನಿಸುತ್ತಿದ್ದ ಸ್ಥಳೀಯರು ಫಾರ್ಮ್‌ಹೌಸ್‌ನಲ್ಲಿ ಏನೋ ನಡೆಯುತ್ತಿದೆ ಎಂದು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸ್‌ ಸಿಬ್ಬಂದಿ ಸ್ಥಳ ಪರಿಶೀಲನೆಗೆ ತೆರಳಿದಾಗಲೂ ಅವರನ್ನು ಒಳಗೆ ಬಿಡದೆ ವಾಪಸ್‌ ಕಳುಹಿಸಲಾಗುತ್ತಿತ್ತು. ಇದರಿಂದ ಪೊಲೀಸರಿಗೂ ಅನುಮಾನ ಮತ್ತಷ್ಟು ಬಲವಾಗಿತ್ತು.

ತದನಂತರ ಫಾರ್ಮ್‌ಹೌಸ್‌ ಮೇಲೆ ನಿಗಾ ಇರಿಸಿದ್ದ ತಾವರೆಕೆರೆ ಠಾಣೆ ಪೊಲೀಸರು ದಿಢೀರ್‌ ದಾಳಿ ನಡೆಸಿದಾಗ ನಕಲಿ ಔಷಧ ತಯಾರಿಕಾ ಜಾಲ ಪತ್ತೆಯಾಗಿ ದಿಗ್ಭ್ರಮೆಗೊಂಡರು. ದಾಳಿ ವೇಳೆ ಐದು ಕೋಟಿಗೂ ಹೆಚ್ಚು ಮೌಲ್ಯದ ನಕಲಿ ಔಷಧಿಗಳನ್ನು ವಶಕ್ಕೆ ಪಡೆದು ಜಾಲವನ್ನು ಬಯಲಿಗೆಳೆದಿದ್ದಾರೆ. ಜಂಟಿ ಪೊಲೀಸ್‌ ಆಯುಕ್ತ ವಂಶಿಕೃಷ್ಣ ಅವರ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದ್ದು, ತನಿಖೆ ಮುಂದುವರಿದಿದೆ.

RELATED ARTICLES
spot_img

Latest News