ಬೆಂಗಳೂರು, ಆ.31- ಪೂರ್ವ ವಲಯದ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಅವರು ಇಂದು ಪೊಲೀಸ್ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಮಂಡ್ಯ ಜಿಲ್ಲೆಯವರಾದ ರವಿಕಾಂತೇಗೌಡ ಅವರು 1997ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿ, ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡಿವೈಎಸ್‌ಪಿಯಾಗಿ ವೃತ್ತಿಜೀವನ ಆರಂಭಿಸಿದ್ದರು. ನಂತರ ನಂಜನಗೂಡು ಉಪವಿಭಾಗದಲ್ಲಿಯೂ ಸೇವೆ ಸಲ್ಲಿಸಿದ್ದರು.
ಹುಬ್ಬಳ್ಳಿ-ಧಾರವಾಡ ಹಾಗೂ ಮೈಸೂರು ನಗರದಲ್ಲಿ ಡಿಸಿಪಿಯಾಗಿ, ದಕ್ಷಿಣ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಬೆಂಗಳೂರು ನಗರದ ಮೂರು ವಿಭಾಗಗಳಲ್ಲಿ ಡಿಸಿಪಿಯಾಗಿ ಸೇವೆ ಸಲ್ಲಿಸಿದ ಬಳಿಕ ಡಿಐಜಿಯಾಗಿ ಬಡ್ತಿ ಪಡೆದು, ಬೆಂಗಳೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿಯೂ ಕಾರ್ಯನಿರ್ವಹಿಸಿದ್ದರು.
ಐಜಿಪಿಯಾಗಿ ಬಡ್ತಿ ಪಡೆದ ಬಳಿಕ ಪೊಲೀಸ್ ಪ್ರಧಾನ ಕಚೇರಿ ಹಾಗೂ ಕೇಂದ್ರ ವಲಯದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಪ್ರಸ್ತುತ ಪೂರ್ವ ವಲಯದ ಐಜಿಪಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ರವಿಕಾಂತೇಗೌಡ ಅವರಿಗೆ ಮುಖ್ಯಮಂತ್ರಿ ಪದಕ ಹಾಗೂ ರಾಷ್ಟ್ರಪತಿ ಪದಕ ನೀಡಿ ಗೌರವಿಸಲಾಗಿದೆ. ಇಂದು ದಾವಣಗೆರೆ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಕವಾಯತಿನಲ್ಲಿ ವಂದನೆ ಸ್ವೀಕರಿಸಿದ ಬಳಿಕ ರವಿಕಾಂತೇಗೌಡ ಅವರು ಮಾತನಾಡಿದರು.
