ಬೆಂಗಳೂರು, ಸೆ.1- ನಿಗಮ ಮಂಡಳಿಗಳಲ್ಲಿ ಎರಡೂವರೆ ವರ್ಷ ಅಧಿಕಾರ ಪೂರ್ಣಗೊಳಿಸಿರುವ ಅಧ್ಯಕ್ಷರು, ನಿರ್ದೇಶಕರು ತಮ ಸ್ಥಾನಗಳಿಗೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಕಚೇರಿ ಸೂಚನೆ ನೀಡಿದೆ.
ಮುಂದಿನ ವಾರದಿಂದ 70ಕ್ಕೂ ಹೆಚ್ಚು ನಿಗಮ ಮಂಡಳಿಗಳಿಗೆ ಹೊಸ ನೇಮಕಾತಿಗಳು ಆರಂಭಿ ಸಲು ನಿರ್ಧರಿಸಲಾಗಿದೆ. ಹೀಗಾಗಿ ಹಾಲಿ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಲಾಗಿದ್ದು, ಒಂದು ವೇಳೆ ರಾಜೀನಾಮೆ ನೀಡದೇ ಇದ್ದರೆ, ಈ ವಾರದ ಬಳಿಕ ಹಿಂದಿನ ನೇಮಕಾತಿಗಳು ರದ್ದುಗೊಳ್ಳುತ್ತವೆ ಎಂಬ ಸಂದೇಶ ನೀಡಲಾಗಿದೆ.
ನಿಗಮ ಮಂಡಳಿಗಳಲ್ಲಿಯಾದರೂ ಸ್ಥಾನ ಗಿಟ್ಟಿಸಬೇಕೆಂದು ಸಚಿವ ಸ್ಥಾನ ವಂಚಿತ ಶಾಸಕರು ಲಾಬಿ ನಡೆಸುತ್ತಿದ್ದಾರೆ. ಕೆಲವು ಹೊಸ ಶಾಸಕರು ದೆಹಲಿಯಾತ್ರೆ ಕೈಗೊಂಡು ವರಿಷ್ಠರನ್ನು ಭೇಟಿ ಮಾಡಿ ಸ್ಥಾನಮಾನಕ್ಕಾಗಿ ಬೇಡಿಕೆ ಮುಂದಿಟ್ಟು ಬಂದಿದ್ದಾರೆ. ಅಂತಹ ಶಾಸಕರಿಗೆ ಅವಕಾಶ ಕಲ್ಪಿಸಲು ಮುಖ್ಯಮಂತ್ರಿಯವರು ಕೂಡ ಆಸಕ್ತಿ ತೋರಿಸಿದ್ದಾರೆ. ಕರಡು ಪಟ್ಟಿಯನ್ನು ದೆಹಲಿ ನಾಯಕರಿಗೆ ಸಲ್ಲಿಸಿ, ಅಂಗೀಕಾರ ಪಡೆದಿಕೊಂಡು ಬಂದಿದ್ದಾರೆ ಎನ್ನಲಾಗಿದೆ.
ಅಧಿಕೃತ ನೇಮಕಾತಿಗಳು ಆರಂಭಗೊಳ್ಳುವ ಮುನ್ನ ಹಾಲಿ ಅಧ್ಯಕ್ಷರು ರಾಜೀನಾಮೆ ನೀಡಬೇಕಿದೆ. ಅದಕ್ಕಾಗಿ ಗೌರವಯುತವಾಗಿ ಹುದ್ದೆ ತೊರೆಯುವಂತೆ ಹಾಲಿ ಅಧ್ಯಕ್ಷರಿಗೆ ನಿರ್ದೇಶನ ನೀಡಲಾಗಿದೆ.
ತೆರವಾಗುವ ನಿಗಮ ಮಂಡಳಿಗಳ ಪೈಕಿ ಪ್ರಮುಖವಾದ 20 ಸಂಸ್ಥೆಗಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸಲು ನಿರ್ಧಾರಗಳಾಗಿವೆ. ಬಾಕಿಯಿರುವ ಒಂದು ವರ್ಷ ಎಂಟು ತಿಂಗಳಿಗಾದರೂ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಅಧಿಕಾರ ನೀಡಬೇಕೆಂದು ಡಿ.ಕೆ.ಶಿವಕುಮಾರ್ ನಿರಂತರ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ನಿಗಮ-ಮಂಡಳಿಗಳಿಗೆ ಅಧ್ಯಕ್ಷರು ಮತ್ತು ನಿರ್ದೇಶಕರುಗಳ ನೇಮಕಾತಿಯಾಗಬೇಕೆಂದು ಹಲವಾರು ಬಾರಿ ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದರು. ಮುಖ್ಯಮಂತ್ರಿಯಾದ ಬಳಿಕ ಕೂಡ ಆರಂಭದಲ್ಲಿ ಈ ವಿಚಾರವಾಗಿ ಹಲವಾರು ಬಾರಿ ಧ್ವನಿ ಎತ್ತಿದ್ದರು. ಆದರೆ ಕಾಲಾನಂತರ ಮೌನಕ್ಕೆ ಶರಣಾಗಿದ್ದಾರೆ. ಮುಖ್ಯಮಂತ್ರಿಯವರ ಈ ಮೌನ, ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ.
ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸಿದವರು ಸರ್ಕಾರದಲ್ಲಿ ಅವಕಾಶಗಳು ಸಿಗುತ್ತವೆ ಎಂದು ಚಾತಕಪಕ್ಷಿಗಳಂತೆ ಕಾದುಕುಳಿತಿದ್ದರು. ಆದರೆ ಶಾಸಕರಾದವರಿಗೆ ಸಚಿವರಾಗುವುದೇ ಬಹುಮುಖ್ಯ ಎಂಬಂತೆ ಕಳೆದ ಮೂರು ವರ್ಷಗಳಿಂದಲೂ ಕಾಂಗ್ರೆಸ್‌ನಲ್ಲಿ ಬೆಳವಣಿಗೆಗಳಾಗಿವೆ. ಬಹುತೇಕ ನಿಗಮ-ಮಂಡಳಿಗಳ ಸದಸ್ಯರನ್ನು ಹಾಗೂ ನಿರ್ದೇಶಕರನ್ನು ನೇಮಿಸಲೇ ಇಲ್ಲ. ಹಿರಿಯ ನಾಯಕರಾದ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದ ಸಮಿತಿ ನೀಡಿದ ವರದಿ ಕೂಡ ವ್ಯರ್ಥವಾಗಿದೆ. ಈಗ ಸರ್ಕಾರದ ಅವಧಿ ಇಳಿಮುಖವಾಗುತ್ತಿರುವ ಸಂದರ್ಭದಲ್ಲಿ ಕಾರ್ಯಕರ್ತರನ್ನು ನೆನಪಿಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳಿವೆ.
ನಗರ ಹಾಗೂ ಗ್ರಾಮೀಣ ಭಾಗದ ಚುನಾವಣೆಗಳು ಸಮೀಪಿಸುತ್ತಿದ್ದು ಒಂದು ವೇಳೆ ನೇಮಕಾತಿಯಾಗದೇ ಇದ್ದರೆ, ಕಾರ್ಯಕರ್ತರು ಚುನಾವಣೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ಪಟ್ಟು ಹಿಡಿಯಬಹುದು ಎಂಬ ಆತಂಕ ಸರ್ಕಾರವನ್ನು ಕಾಡುತ್ತಿದೆ. ಈ ಕಾರಣಕ್ಕೆ ನೇಮಕಾತಿಗಳ ಪ್ರಕ್ರಿಯೆಗಳಿಗೆ ಚಾಲನೆ ನೀಡಿ, ಮುಖಂಡರಿಗೆ ಮತ್ತು ಕಾರ್ಯಕರ್ತರ ಮೂಗಿಗೆ ತುಪ್ಪ ಸವರಲು ಸರ್ಕಾರ ಮುಂದಾಗಿದೆ.
