Homeಬೆಂಗಳೂರುಗ್ರೇಟರ್‌ ಬೆಂಗಳೂರು ರಚನೆಯಾಗಿ ಒಂದು ವರ್ಷ : ನಿರೀಕ್ಷಿತ ಫಲಿತಾಂಶ ಇನ್ನು ಬಂದಿಲ್ಲ

ಗ್ರೇಟರ್‌ ಬೆಂಗಳೂರು ರಚನೆಯಾಗಿ ಒಂದು ವರ್ಷ : ನಿರೀಕ್ಷಿತ ಫಲಿತಾಂಶ ಇನ್ನು ಬಂದಿಲ್ಲ

  • ರಮೇಶ್ ಪಾಳ್ಯ

ಬೆಂಗಳೂರು, ಸೆ.1- ಬಿಬಿಎಂಪಿ ರದ್ದುಗೊಂಡ ನಂತರ ರಚನೆಯಾಗಿರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ನಾಳೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ. ನಗರವನ್ನು ಅಭಿವೃದ್ಧಿಯ ಹೊಸ ಹಾದಿಗೆ ಕೊಂಡೊಯ್ಯುವ ಉದ್ದೇಶದಿಂದ ಬಿಬಿಎಂಪಿಯನ್ನು ಐದು ನಗರ ಪಾಲಿಕೆಗಳಾಗಿ ವಿಭಜಿಸಿ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚಿಸಿ ನಾಳೆಗೆ ಸರಿಯಾಗಿ ಒಂದು ವರ್ಷ ಪೂರ್ಣಗೊಳ್ಳಲಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿ ಜಾರಿಗೆ ಬಂದ ಜಿಬಿಎ, ಹೊಸ ಆಡಳಿತ ವ್ಯವಸ್ಥೆಗೆ ನಾಂದಿ ಹಾಡಿದ್ದರೂ, ಒಂದು ವರ್ಷದ ಬಳಿಕ ನಿರೀಕ್ಷಿತ ಫಲ ನೀಡಿದೆಯೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಕಳೆದ 2025ರ ಸೆಪ್ಟೆಂಬರ್‌ 2ರಂದು ಅಧಿಕೃತವಾಗಿ ಜಾರಿಗೆ ಬಂದ ಜಿಬಿಎ, ಬಿಬಿಎಂಪಿ ಯುಗಕ್ಕೆ ತೆರೆ ಎಳೆದು ಬೆಂಗಳೂರಿನ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದಿತು. ಬಿಬಿಎಂಪಿಯ ಬದಲಿಗೆ ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಕೇಂದ್ರ ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದವು. ಐದು ಪಾಲಿಕೆಗಳಿಗೆ ಆಯುಕ್ತರು, ಹೆಚ್ಚುವರಿ ಆಯುಕ್ತರು ಸೇರಿದಂತೆ ಅಧಿಕಾರಿಗಳನ್ನು ನೇಮಕ ಮಾಡಲಾಯಿತು.

ಪ್ರತಿ ಪಾಲಿಕೆಗೆ ತಲಾ ಎರಡು ವಲಯಗಳನ್ನು ರಚಿಸಲಾಯಿತು.ಇದರ ಜತೆಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ 87 ಪದನಿಮಿತ್ತ ಸದಸ್ಯರನ್ನು ಒಳಗೊಂಡ ಜಿಬಿಎ ಪ್ರಾಧಿಕಾರ ರಚನೆಯಾಯಿತು. ಒಂದೇ ಜಿಬಿಎಯಡಿ ಐದು ನಗರ ಪಾಲಿಕೆಗಳ ಮೂಲಕ ನಗರದ ಆಡಳಿತವನ್ನು ವಿಕೇಂದ್ರೀಕರಿಸಿ, ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ತ್ವರಿತ ಪರಿಹಾರ ನೀಡುವುದು ಸರ್ಕಾರದ ಪ್ರಮುಖ ಉದ್ದೇಶವಾಗಿತ್ತು.
ಆದರೆ, ಒಂದು ವರ್ಷ ಕಳೆದರೂ ಬೆಂಗಳೂರಿನ ಮೂಲ ಸಮಸ್ಯೆಗಳಿಗೆ ಪೂರ್ಣ ವಿರಾಮ ಬಿದ್ದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.ಬಿಬಿಎಂಪಿಯಿಂದ ಜಿಬಿಎವರೆಗೆ..:ಬೆಂಗಳೂರಿನ ಸ್ಥಳೀಯ ಆಡಳಿತದ ಇತಿಹಾಸವೂ ಸಾಕಷ್ಟು ಬದಲಾವಣೆ ಕಂಡಿದೆ.

1949 ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಗರಸಭೆ ಸ್ಥಾಪನೆ
1949 ರಿಂದ 1995ರವರೆಗೆ ನಗರಸಭೆ ಆಡಳಿತ
1996 ಬೆಂಗಳೂರು ಮಹಾನಗರ ಪಾಲಿಕೆ ರಚನೆ
1996-2006 ಬಿಎಂಪಿ ಆಡಳಿತ
2010 ವ್ಯಾಪ್ತಿ ವಿಸ್ತರಣೆ ಬಳಿಕ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ರಚನೆ2010-2025ರವರೆಗೆ ಬಿಬಿಎಂಪಿ ಆಡಳಿತ
2025ರ ಸೆ.2 ರಿಂದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ ಹಾಗೂ ಐದು ನಗರ ಪಾಲಿಕೆಗಳ ರಚನೆ.
ಬಿಬಿಎಂಪಿಯ ಕೊನೆಯ ಮೇಯರ್‌ ಆಗಿ 2019- 20ರಲ್ಲಿ ಬಿಜೆಪಿಯ ಎಂ. ಗೌತಮ್‌ ಕುಮಾರ್‌ ಕಾರ್ಯನಿರ್ವಹಿಸಿದ್ದರು.

ಐದು ಪಾಲಿಕೆ ರಚನೆಯಾದರೆ ಅಧಿಕಾರಿಗಳು ಜನರ ಕೈಗೆ ಸುಲಭವಾಗಿ ಸಿಗುತ್ತಾರೆ. ಸ್ಥಳೀಯ ಮಟ್ಟದಲ್ಲೇ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆಡಳಿತ ವೇಗ ಪಡೆಯುತ್ತದೆ ಎಂಬ ನಿರೀಕ್ಷೆ ಇತ್ತು.ಆದರೆ ಈಗ ಅದಕ್ಕೆ ವಿರುದ್ಧವಾದ ಚಿತ್ರಣ ಕಂಡುಬರುತ್ತಿದೆ ಎಂಬುದು ಪ್ರತಿಪಕ್ಷಗಳ ಆರೋಪ. ಅಧಿಕಾರಿಗಳ ಸಂಖ್ಯೆ ಹೆಚ್ಚಾದರೂ ಸಾರ್ವಜನಿಕರಿಗೆ ಅಧಿಕಾರಿಗಳು ಸುಲಭವಾಗಿ ಲಭ್ಯವಾಗುತ್ತಿಲ್ಲ. ಕೆಲವು ಕಡೆ ಆಯುಕ್ತರ ಸೂಚನೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ.

ಐದು ಪಾಲಿಕೆಗಳಿಗೆ ಅಗತ್ಯ ಸಿಬ್ಬಂದಿ ಇನ್ನೂ ಸಂಪೂರ್ಣವಾಗಿ ನೇಮಕವಾಗಿಲ್ಲ. ಇದರಿಂದ ಆಡಳಿತ ಯಂತ್ರವೇ ಸಂಪೂರ್ಣ ವೇಗ ಪಡೆದುಕೊಂಡಿಲ್ಲ ಎನ್ನಲಾಗುತ್ತಿದೆ. ಹಣಕಾಸಿನ ಮುಗ್ಗಟ್ಟು:ಜಿಬಿಎ ರಚನೆಯಾಗಿ ಒಂದು ವರ್ಷದಲ್ಲೇ ಕೆಲವು ನಗರ ಪಾಲಿಕೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ ಎಂಬ ಆರೋಪವೂ ಕೇಳಿಬಂದಿದೆ. ನೌಕರರಿಗೆ ವೇತನ ನೀಡುವುದಕ್ಕೂ ಆರ್ಥಿಕ ಒತ್ತಡ ಎದುರಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಬಿಎಂಪಿ ಇದ್ದ ಸಂದರ್ಭದಲ್ಲಿ ದೊಡ್ಡ ಮಟ್ಟದ ವಾರ್ಷಿಕ ಬಜೆಟ್‌ ಮಂಡಿಸಲಾಗುತ್ತಿತ್ತು. ಆದರೆ ಇದೀಗ ಐದು ಪಾಲಿಕೆಗಳು ಪ್ರತ್ಯೇಕವಾಗಿ ಸಾವಿರಾರು ಕೋಟಿ ರೂಪಾಯಿ ಗಾತ್ರದ ಬಜೆಟ್‌ಗಳನ್ನು ಮಂಡಿಸಿವೆ. ಆದಾಯದ ಮೂಲಗಳು ಅದಕ್ಕೆ ತಕ್ಕಂತೆ ಹೆಚ್ಚಾಗದಿದ್ದರೆ ಇವು ಆದಾಯವಿಲ್ಲದ ಬಜೆಟ್‌‍ಗಳಾಗುವ ಅಪಾಯವಿದೆ ಎಂಬ ಟೀಕೆ ವ್ಯಕ್ತವಾಗಿದೆ.

ಇನ್ನು ಜಿಬಿಎಗೆ ಪ್ರತ್ಯೇಕವಾಗಿ ಸಮರ್ಪಕ ಅನುದಾನ ಸಿಗುತ್ತಿಲ್ಲ ಎಂಬ ಆರೋಪವೂ ಇದೆ. ಅನುದಾನದ ಕೊರತೆಯ ನಡುವೆಯೇ ಪ್ರಾಧಿಕಾರ ಕಾರ್ಯನಿರ್ವಹಿಸುವಂತಾಗಿದೆ. ಜಿಬಿಎ ಯೋಜನೆಗಳು ಎಲ್ಲಿವೆ?ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಸುರಂಗ ರಸ್ತೆ, ಹೆಚ್ಚುವರಿ ಫ್ಲೈಓವರ್‌ಗಳು ಸೇರಿದಂತೆ ಹಲವು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಜಿಬಿಎ ಮುಂದಿಟ್ಟಿತ್ತು.ಆದರೆ, ಒಂದು ವರ್ಷ ಕಳೆದರೂ ಈ ಯೋಜನೆಗಳ ಪೈಕಿ ಬಹುತೇಕವು ಅನುಷ್ಠಾನದ ಹಂತಕ್ಕೆ ತಲುಪಿಲ್ಲ ಎಂಬ ಟೀಕೆ ಇದೆ.

ಯೋಜನೆಗಳ ಘೋಷಣೆ ಮಾತ್ರ ಸಾಕೇ? ಕಾಮಗಾರಿಗಳು ಯಾವಾಗ ಆರಂಭವಾಗುತ್ತವೆ ಎಂಬ ಪ್ರಶ್ನೆ ಬೆಂಗಳೂರಿಗರ ಮುಂದಿದೆ. ಇ-ಖಾತಾ, ಬಿ-ಖಾತಾದಿಂದ ಎ-ಖಾತಾ… ನಿರೀಕ್ಷಿತ ವೇಗವಿಲ್ಲ?:ಐದು ಪಾಲಿಕೆಗಳ ರಚನೆಯ ನಂತರ ಇ-ಖಾತಾ ವಿತರಣೆ ಹಾಗೂ ಬಿ-ಖಾತಾ ಆಸ್ತಿಗಳನ್ನು ಎ-ಖಾತಾಗೆ ಪರಿವರ್ತಿಸುವ ಪ್ರಕ್ರಿಯೆಗೆ ವೇಗ ನೀಡುವ ಪ್ರಯತ್ನ ನಡೆಯಿತು.ಆದರೆ, ನಿರೀಕ್ಷಿಸಿದಷ್ಟು ವೇಗದಲ್ಲಿ ಈ ಪ್ರಕ್ರಿಯೆ ಸಾಗುತ್ತಿಲ್ಲ ಎಂಬ ಅಸಮಾಧಾನ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.

ದಾಖಲೆಗಳ ಪರಿಶೀಲನೆ, ಅರ್ಜಿ ವಿಲೇವಾರಿ ಸೇರಿದಂತೆ ಹಲವು ಹಂತಗಳಲ್ಲಿ ವಿಳಂಬದ ಆರೋಪ ಕೇಳಿಬರುತ್ತಿದೆ.ಕಸದ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಬೆಂಗಳೂರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ತ್ಯಾಜ್ಯ ನಿರ್ವಹಣೆ ಕೂಡ ಒಂದು. ಐದು ಪಾಲಿಕೆಗಳ ರಚನೆಯಿಂದ ಸ್ಥಳೀಯ ಮಟ್ಟದಲ್ಲಿ ಕಸ ವಿಲೇವಾರಿ ವ್ಯವಸ್ಥೆ ಸುಧಾರಿಸುತ್ತದೆ ಎಂಬ ನಿರೀಕ್ಷೆ ಇತ್ತು.ಆದರೆ ನಗರದ ಹಲವು ಭಾಗಗಳಲ್ಲಿ ಕಸದ ಸಮಸ್ಯೆ ಮುಂದುವರಿದಿದೆ. ಕಟ್ಟಡ ತ್ಯಾಜ್ಯ, ರಸ್ತೆ ಬದಿ ಕಸ, ತ್ಯಾಜ್ಯ ವಿಂಗಡಣೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಇನ್ನೂ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂಬ ಆರೋಪವಿದೆ.

ಕಚೇರಿಯೂ ಇಲ್ಲ… ಮೇಯರ್‌ಗೂ ಕಟ್ಟಡವಿಲ್ಲ!:ಐದು ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದು ಒಂದು ವರ್ಷವಾದರೂ ಕೆಲವು ಪಾಲಿಕೆಗಳಿಗೆ ಅಗತ್ಯ ಮೂಲಸೌಕರ್ಯ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿಲ್ಲ.ಮೇಯರ್‌ಗಳಿಗೆ ಪ್ರತ್ಯೇಕ ಕಟ್ಟಡ ನಿರ್ಮಾಣವಾಗಿಲ್ಲ. ಅಧಿಕಾರಿಗಳಿಗೆ ಸಮರ್ಪಕ ಕಚೇರಿ ವ್ಯವಸ್ಥೆಯೂ ಇಲ್ಲ ಎಂಬ ಟೀಕೆ ಕೇಳಿಬರುತ್ತಿದೆ.ಹೀಗಿರುವಾಗ ಹೊಸ ಆಡಳಿತ ವ್ಯವಸ್ಥೆಯಿಂದ ಜನರಿಗೆ ಯಾವ ರೀತಿಯ ಸುಧಾರಿತ ಸೇವೆ ದೊರೆಯಲಿದೆ ಎಂಬ ಪ್ರಶ್ನೆ ಎದುರಾಗಿದೆ.

ಚುನಾವಣೆ ಯಾವಾಗ?ಜಿಬಿಎ ವ್ಯವಸ್ಥೆ ಜಾರಿಗೆ ಬಂದರೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಇನ್ನೂ ನಡೆದಿಲ್ಲ. ಜನರಿಂದ ನೇರವಾಗಿ ಆಯ್ಕೆಯಾದ ಮೇಯರ್‌ಗಳು, ಸದಸ್ಯರು ಇಲ್ಲದೆ ಅಧಿಕಾರಿಗಳ ಮೂಲಕವೇ ವ್ಯವಸ್ಥೆ ಮುಂದುವರಿಯುತ್ತಿದೆ.ಇದರಿಂದ ಜನಪ್ರತಿನಿಧಿಗಳ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ನೇರವಾಗಿ ಆಡಳಿತಕ್ಕೆ ತಲುಪಿಸುವ ವ್ಯವಸ್ಥೆ ದುರ್ಬಲವಾಗಿದೆ ಎಂಬ ಆರೋಪವೂ ಇದೆ. ಎರಡು ಪಾಲಿಕೆ ಸಾಕೇ?ಐದು ನಗರ ಪಾಲಿಕೆಗಳ ರಚನೆಗೆ ಸರ್ಕಾರದ ಸ್ವಪಕ್ಷೀಯ ಶಾಸಕರಲ್ಲೇ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಐದರ ಬದಲು ಎರಡು ಪಾಲಿಕೆಗಳ ವ್ಯವಸ್ಥೆ ಸಾಕು ಎಂದು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿರುವುದು ಚರ್ಚೆಗೆ ಕಾರಣವಾಗಿದೆ.ಹೀಗಾಗಿ ಜಿಬಿಎ ರಚನೆಯ ಮೂಲ ಉದ್ದೇಶವೇ ಸರಿಯೇ ಎಂಬ ಚರ್ಚೆಯೂ ಮತ್ತೆ ಮುನ್ನೆಲೆಗೆ ಬಂದಿದೆ.

ವಾರಕ್ಕೆ ಎರಡು ಸಭೆ.ಆದೇಶಗಳು ಮಾತ್ರ!ಬೆಂಗಳೂರು ಉಸ್ತುವಾರಿ ಸಚಿವರು ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಸೂಚಿಸುತ್ತಿದ್ದಾರೆ. ಆದರೆ ಸಭೆಗಳಲ್ಲಿ ನೀಡುವ ಸೂಚನೆಗಳು ನೆಲಮಟ್ಟದಲ್ಲಿ ಎಷ್ಟರ ಮಟ್ಟಿಗೆ ಅನುಷ್ಠಾನವಾಗುತ್ತಿವೆ ಎಂಬುದು ಪ್ರಶ್ನೆಯಾಗಿದೆ.ಆದೇಶ ನೀಡುವುದಕ್ಕೂ, ಅದನ್ನು ಕಾರ್ಯರೂಪಕ್ಕೆ ತರುವುದಕ್ಕೂ ನಡುವೆ ಅಂತರವಿದೆ ಎಂಬ ಟೀಕೆ ಕೇಳಿಬರುತ್ತಿದೆ.

ಆಡಳಿತ ವ್ಯವಸ್ಥೆ ಸರಳವಾಯಿತೇ… ಸಂಕೀರ್ಣವಾಯಿತೇ?ಬಿಬಿಎಂಪಿ ಇದ್ದಾಗ ಒಂದೇ ಆಡಳಿತ ವ್ಯವಸ್ಥೆ ಇತ್ತು. ಈಗ ಜಿಬಿಎ, ಐದು ನಗರ ಪಾಲಿಕೆ, ವಲಯಗಳು, ವಿವಿಧ ಹಂತದ ಅಧಿಕಾರಿಗಳು ಎಂಬಂತೆ ಆಡಳಿತ ವ್ಯವಸ್ಥೆ ವಿಸ್ತರಿಸಿದೆ.ಅಧಿಕಾರ ವಿಕೇಂದ್ರೀಕರಣದ ಬದಲು ಆಡಳಿತ ವ್ಯವಸ್ಥೆಯೇ ಹೆಚ್ಚಾಗಿ ಸಂಕೀರ್ಣವಾಗಿದೆ. ಅಧಿಕಾರಿಗಳ ಸಂಖ್ಯೆ ಹೆಚ್ಚಿರುವುದರಿಂದ ವೇತನ ಸೇರಿದಂತೆ ಆಡಳಿತ ವೆಚ್ಚವೂ ಹೆಚ್ಚಾಗಿದೆ ಎಂಬುದು ಪ್ರತಿಪಕ್ಷಗಳ ಆರೋಪ.ಜಿಬಿಎ ಮುಖ್ಯ ಆಯುಕ್ತರ ಗಮನಕ್ಕೆ ಬಾರದೆ ಕೆಲವು ಕಾಮಗಾರಿಗಳು ಮತ್ತು ಡಿಸಿ ಬಿಲ್‌ಗಳ ಪ್ರಕ್ರಿಯೆಗಳು ನಡೆಯುತ್ತಿವೆ ಎಂಬ ಆರೋಪವೂ ಕೇಳಿಬರುತ್ತಿದ್ದು, ಐದು ಪಾಲಿಕೆಗಳು ಜಿಬಿಎ ಅಡಿಯಲ್ಲಿ ನಿಜವಾಗಿಯೂ ಎಷ್ಟರ ಮಟ್ಟಿಗೆ ಏಕೀಕೃತವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬ ಪ್ರಶ್ನೆ ಮೂಡಿದೆ.

ಒಂದು ವರ್ಷ…ಲೆಕ್ಕಾಚಾರ ಏನು?ಬೆಂಗಳೂರು ಅಭಿವೃದ್ಧಿಗಾಗಿ ಬಿಬಿಎಂಪಿಯನ್ನು ವಿಭಜಿಸಿ ಜಿಬಿಎ ರಚಿಸಿ ಒಂದು ವರ್ಷ ಪೂರ್ಣಗೊಳ್ಳುತ್ತಿದೆ.ಆದರೆ ಪ್ರಶ್ನೆಗಳು ಮಾತ್ರ ಇನ್ನೂ ಉಳಿದಿವೆ:ಐದು ಪಾಲಿಕೆಗಳಿಂದ ಆಡಳಿತ ನಿಜವಾಗಿಯೂ ಸರಳವಾಗಿದೆಯೇ?ಜನರ ಕೈಗೆ ಆಯುಕ್ತರು, ಅಧಿಕಾರಿಗಳು ಸಿಗುತ್ತಿದ್ದಾರೆಯೇ?ಕಸದ ಸಮಸ್ಯೆ ಬಗೆಹರಿದಿದೆಯೇ?ಮೂಲಸೌಕರ್ಯ ಅಭಿವೃದ್ಧಿಗೆ ವೇಗ ಸಿಕ್ಕಿದೆಯೇ?ಜಿಬಿಎ ಘೋಷಿಸಿದ ಪ್ರಮುಖ ಯೋಜನೆಗಳು ಎಲ್ಲಿ?ಪಾಲಿಕೆಗಳ ಆರ್ಥಿಕ ಸ್ಥಿತಿ ಸುಧಾರಿಸಲಿದೆಯೇ?ಸಿಬ್ಬಂದಿ ಕೊರತೆ ಯಾವಾಗ ನೀಗಲಿದೆ?ಜಿಬಿಎಗೆ ಸಮರ್ಪಕ ಅನುದಾನ ಯಾವಾಗ?ಸ್ಥಳೀಯ ಸಂಸ್ಥೆಗಳ ಚುನಾವಣೆ ಯಾವಾಗ?ಐದು ಪಾಲಿಕೆಗಳ ಬದಲಿಗೆ ಎರಡು ಪಾಲಿಕೆಗಳ ಬೇಡಿಕೆ ಏಕೆ?ಹೀಗಾಗಿ, ಬಿಬಿಎಂಪಿಗೆ ಪರ್ಯಾಯವಾಗಿ ಜಿಬಿಎ ಕೆಲಸ ಮಾಡುತ್ತಿದೆಯೇ ಐದು ಪಾಲಿಕೆ ಎಂಬ ಸರ್ಕಾರದ ಪ್ರಯೋಗ ಒಂದು ವರ್ಷ ಪೂರೈಸಿರುವ ಹೊತ್ತಿನಲ್ಲಿ, ಇದು ಪಾಸ್‌‍ ಆಗಿದೆಯೇ ಅಥವಾ ಪೇಲ್‌ ಆಗಿದೆಯೇ ಎಂಬ ಚರ್ಚೆ ತೀವ್ರವಾಗಿದೆ.

RELATED ARTICLES
spot_img

Latest News