Homeಸಂಪಾದಕೀಯ-ಲೇಖನಗಳುಗಾಂಧಿವಾದಿ ಚಿಂತನೆಯ ಅಪರೂಪದ ಸಾಧಕ ಜಿ.ನಾರಾಯಣ

ಗಾಂಧಿವಾದಿ ಚಿಂತನೆಯ ಅಪರೂಪದ ಸಾಧಕ ಜಿ.ನಾರಾಯಣ

  • ಜಾಣಗೆರೆ ವೆಂಕಟರಾಮಯ್ಯ
    ಕನ್ನಡ ನಾಡು-ನುಡಿ, ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಾರ್ವಜನಿಕ ಬದುಕಿಗೆ ಅಪಾರ ಕೊಡುಗೆ ನೀಡಿದ ಮಹನೀಯ ಜಿ. ನಾರಾಯಣ. ಗಾಂಧೀಜಿಯವರಿಂದ ಪ್ರಭಾವಿತ ರಾದವರ ಸಂಖ್ಯೆ ಸಹಸ್ರಾರು. ಕನ್ನಡ ನಾಡಿಗೂ ಗಾಂಧೀಜಿ ಕಾಂಗ್ರೆಸ್‌‍ ಅಧಿವೇಶನ ಹಾಗೂ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಹಲವು ಬಾರಿ ಆಗಮಿಸಿದ್ದರು. ಆಗ ಅನೇಕರು ಅವರನ್ನು ಭೇಟಿಯಾಗಿ, ಅವರ ಚಿಂತನೆ, ಆದರ್ಶ ಮತ್ತು ಹೋರಾಟದ ಮಾರ್ಗದಿಂದ ಪ್ರಭಾವಿತರಾಗಿ ಅವರ ಅನುಯಾಯಿಗಳಾದರು. ಅಂತಹ ಅಪರೂಪದ ವ್ಯಕ್ತಿಗಳಲ್ಲಿ ಜಿ. ನಾರಾಯಣ ಕೂಡ ಒಬ್ಬರು. 1944ರಲ್ಲಿ ಮುಂಬೈನ ಬಿರ್ಲಾ ಭವನದಲ್ಲಿ ಮೊದಲ ಬಾರಿಗೆ ಮಹಾತ್ಮ ಗಾಂಧೀಜಿಯವರನ್ನು ಕಂಡ ಜಿ. ನಾರಾಯಣ ಅವರು, ಅಂದಿನಿಂದಲೇ ಗಾಂಧೀಜಿಯವರ ಚಿಂತನೆ ಮತ್ತು ಆದರ್ಶಗಳ ಪ್ರಭಾವಕ್ಕೆ ಒಳಗಾದರು. ತಮ ಜೀವನದುದ್ದಕ್ಕೂ ಗಾಂಧಿವಾದಿ ಮೌಲ್ಯಗಳನ್ನು ಅಳವಡಿಸಿಕೊಂಡ ಅವರು, ಕನ್ನಡ ನಾಡು-ನುಡಿ, ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ ಮತ್ತು ಸಾರ್ವಜನಿಕ ಸೇವೆಯ ಕ್ಷೇತ್ರಗಳಲ್ಲಿ ಅಳಿಸಲಾಗದ ಹೆಜ್ಜೆಗುರುತುಗಳನ್ನು ಮೂಡಿಸಿದರು.
  • ಬಾಲ್ಯ ಮತ್ತು ಸ್ವಾತಂತ್ರ್ಯ ಹೋರಾಟ:
    ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ದೇಶಹಳ್ಳಿ ಗ್ರಾಮದಲ್ಲಿ 1923ರ ಸೆಪ್ಟೆಂಬರ್‌ 2ರಂದು ಜಿ. ನಾರಾಯಣ ಜನಿಸಿದರು. ಗಿರಿಗೌಡ ಮತ್ತು ಸಣ್ಣಮ್ಮ ದಂಪತಿಯ ಪುತ್ರರಾಗಿದ್ದ ಅವರು, ಪ್ರಾಥಮಿಕ ಶಿಕ್ಷಣವನ್ನು ದೇಶಹಳ್ಳಿಯಲ್ಲಿ ಹಾಗೂ ಪ್ರೌಢಶಿಕ್ಷಣವನ್ನು ಮದ್ದೂರಿನಲ್ಲಿ ಪಡೆದರು. ನಂತರ ಚನ್ನಪಟ್ಟಣದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ ಅವರು, 1940ರಲ್ಲಿ ಶಿಕ್ಷಣಕ್ಕೆ ವಿದಾಯ ಹೇಳಿದರು.
    ಶಿವಪುರದಲ್ಲಿ ನಡೆದ ಕಾಂಗ್ರೆಸ್‌‍ ಅಧಿವೇಶನದಲ್ಲಿ ಭಾಗವಹಿಸುವ ಅವಕಾಶ ಅವರಿಗೆ ದೊರೆಯಿತು. ಅಲ್ಲಿ ಟಿ. ಸಿದ್ದಲಿಂಗಯ್ಯ ಹಾಗೂ ಎಚ್‌.ಕೆ. ವೀರಣ್ಣಗೌಡರ ಪರಿಚಯವಾಗಿ, ಅವರ ಆಪ್ತ ಶಿಷ್ಯರಾಗಿ ರೂಪುಗೊಂಡರು.
    1942ರಲ್ಲಿ ಬೆಳಗಾವಿ ಜಿಲ್ಲೆಯ ಹುಡಲಿಯ ಜಮನಾಲಾಲ್‌ ಖಾದಿ ವಿದ್ಯಾಲಯಕ್ಕೆ ಪ್ರವೇಶ ಪಡೆದ ಜಿ. ನಾರಾಯಣ ಅವರು ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಈ ಕಾರಣದಿಂದ ಬಂಧನಕ್ಕೊಳಗಾಗಿ ಬೆಳಗಾವಿ ಜೈಲಿನಲ್ಲಿ ಮೂರು ತಿಂಗಳ ಕಠಿಣ ಕಾರಾಗೃಹವಾಸ ಅನುಭವಿಸಿದರು. ಆಗ ಅವರಿಗೆ ಇನ್ನೂ 20 ವರ್ಷವೂ ಆಗಿರಲಿಲ್ಲ. ಜೈಲಿನಿಂದ ಬಿಡುಗಡೆಯಾದ ಬಳಿಕ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಳ್ಳುವ ಅವರ ಆಸಕ್ತಿ ಮತ್ತಷ್ಟು ಗಟ್ಟಿಯಾಯಿತು.
    • ವಯಸ್ಕರ ಶಿಕ್ಷಣದತ್ತ ಆಸಕ್ತಿ :
      ಸಾಮಾಜಿಕ ಸೇವೆಯ ಭಾಗವಾಗಿ ತಮ ಊರಿನಲ್ಲಿ ವಯಸ್ಕರ ಶಿಕ್ಷಣ ತರಗತಿಗಳನ್ನು ಆರಂಭಿಸಿದ ಜಿ. ನಾರಾಯಣ, ಅಕ್ಷರ ನೀವು ಕಲಿಯಿರಿ ಎಂಬ ಉಪಯುಕ್ತ ಪ್ರಚಾರ ಕೈಪಿಡಿಯನ್ನೂ ರಚಿಸಿದರು. ವಯಸ್ಕರನ್ನು ಅಕ್ಷರಸ್ಥರನ್ನಾಗಿ ಮಾಡಿ, ಅವರಲ್ಲಿ ಲೋಕಜ್ಞಾನವನ್ನು ಹೆಚ್ಚಿಸುವುದು ಅವರಿಗೆ ಅತ್ಯಂತ ಪ್ರಿಯವಾದ ಕಾರ್ಯವಾಗಿತ್ತು. ಗಾಂಧೀಜಿಯವರ ಆಶಯದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣದ ಬೆಳಕು ತಲುಪಬೇಕು ಎಂಬ ಉದ್ದೇಶದಿಂದ ಅವರು ನಿರಂತರವಾಗಿ ಶ್ರಮಿಸಿದರು.
    • ಪತ್ರಿಕೋದ್ಯಮ ಮತ್ತು ಸಾಹಿತ್ಯ ಸೇವೆ :
      1946ರಲ್ಲಿ ಮೈಸೂರು ಪ್ರಾಂತ ಕಾಂಗ್ರೆಸ್‌‍ ಕಚೇರಿಗೆ ಸೇರಿದ ಜಿ. ನಾರಾಯಣ ಅವರಿಗೆ ಕನ್ನಡ ನಾಡಿನ ಪ್ರಮುಖ ರಾಜಕೀಯ ಮುಖಂಡರ ಪರಿಚಯವಾಯಿತು. ಅಲ್ಲಿಂದ ಅವರ ಸಾಮಾಜಿಕ ಮತ್ತು ಸಾರ್ವಜನಿಕ ಸಂಪರ್ಕ ವಿಸ್ತರಿಸಿತು. ನಂತರ ವಾರ್ತಾ ಪತ್ರಿಕೆ ಹಾಗೂ ಮುದ್ರಣಾಲಯದ ವ್ಯವಸ್ಥಾಪಕರಾಗಿ ಕೆಲಸ ಮಾಡುವ ಅವಕಾಶ ದೊರೆಯಿತು. ಚಿತ್ರಗುಪ್ತ ಪತ್ರಿಕೆಯ ಹೊಣೆಗಾರಿಕೆಯನ್ನೂ ಅವರು ನಿರ್ವಹಿಸಿದರು.
      1950ರಲ್ಲಿ ಅವರು ಸ್ವತಂತ್ರ ಮುದ್ರಣಾಲಯವನ್ನು ಆರಂಭಿಸಿದರು. ಅದೇ ಅವಧಿಯಲ್ಲಿ ವಿನೋದ ಮಾಸಪತ್ರಿಕೆ ಯನ್ನೂ ಪ್ರಾರಂಭಿಸಿದರು. ಇದರ ಮೂಲಕ ರಾಜ್ಯದ ವಿವಿಧ ಭಾಗಗಳ ಸಾಹಿತಿಗಳೊಂದಿಗೆ ಸಂಪರ್ಕ ಬೆಳೆಸಿಕೊಂಡರು. ಅನೇಕ ಪ್ರತಿಭಾವಂತ ಬರಹಗಾರರನ್ನು ಪತ್ರಿಕೆಗೆ ಬರೆಯಲು ಪ್ರೇರೇಪಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೂ ಮಹತ್ವದ ಕೊಡುಗೆ ನೀಡಿದರು.
    • ಬೆಂಗಳೂರು ಮೇಯರ್‌ ಆಗಿ ಸೇವೆ:
      1956ರಲ್ಲಿ ಯಶೋದಮ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜಿ. ನಾರಾಯಣ ಅವರು, ಅದೇ ವರ್ಷ ಬೆಂಗಳೂರಿನ ನಗರಸಭೆಗೆ ಚಾಮರಾಜಪೇಟೆ ವಾರ್ಡ್‌ನಿಂದ ಆಯ್ಕೆಯಾದರು. ಆರೋಗ್ಯ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ ಅವರು, ನಂತರ ಮತ್ತೊಮ್ಮೆ ಗೆಲುವು ಸಾಧಿಸಿದರು.1964ರಲ್ಲಿ ಬೆಂಗಳೂರು ಮೇಯರ್‌ ಆಗಿ ಆಯ್ಕೆಯಾದ ಜಿ. ನಾರಾಯಣ ಅವರು ನಗರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದರು. ರಸ್ತೆ ಸುಧಾರಣೆ, ಕಾಮಗಾರಿ ಕಾರ್ಯಕ್ರಮಗಳು, ಕಾವೇರಿ ನೀರು ಸರಬರಾಜು ಯೋಜನೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿದರು. ನಗರಸಭೆ ಕಚೇರಿ ಮುಂಭಾಗದಲ್ಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪ್ರತಿಮೆ ಸ್ಥಾಪನೆ, ಗಣ್ಯರಿಗೆ ಸನಾನ ಹಾಗೂ ನಗರಾಭಿವೃದ್ಧಿಗೆ ಸಂಬಂಧಿಸಿದ ಬೃಹತ್‌ ಯೋಜನೆಗಳನ್ನು ಕಾರ್ಯ ಗತಗೊಳಿಸಲು ಮುಂದಾದರು.
    • ಕನ್ನಡ ರಾಜ್ಯೋತ್ಸವಕ್ಕೆ ಹೊಸ ರೂಪ:
      1967ರಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಹೊಸ ರೂಪ ನೀಡಲು ಪ್ರಯತ್ನಿಸಿದ ಅವರು, ಕನ್ನಡ ರಾಜ್ಯೋತ್ಸವ ಸಾಹಿತ್ಯ ಪ್ರಚಾರ ಸಮಿತಿಯನ್ನು ರಚಿಸಿ ಅದರ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
      1969ರಲ್ಲಿ ಕನ್ನಡಿಗರ ಹೆಮೆಯ ಸಂಸ್ಥೆ ಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದರು. ಪರಿಷತ್ತನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ತ್ರೈವಾರ್ಷಿಕ ಯೋಜನೆಯನ್ನು ರೂಪಿಸಿದರು ಹಾಗೂ ಜಿಲ್ಲಾ ಸಮಿತಿಗಳನ್ನು ಸ್ಥಾಪಿಸಿದರು.
      ಪರಿಷತ್ತಿನ ಸುವರ್ಣ ಮಹೋತ್ಸವವನ್ನು ಯಶಸ್ವಿಯಾಗಿ ಆಚರಿಸಿದ ಅವರು, ಅದೇ ವರ್ಷ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡ ನಡೆಸಿದರು. ನಂತರ ಜಿಲ್ಲಾ ಸಾಹಿತ್ಯ ಸಮೇಳನಗಳನ್ನೂ ಪರಿಣಾಮ ಕಾರಿಯಾಗಿ ಸಂಘಟಿಸಿದರು.
    • ಸಾಹಿತ್ಯ ಮತ್ತು ಸಂಸ್ಕೃತಿಗೆ ಅಪೂರ್ವ ಕೊಡುಗೆ:
      1972ರಲ್ಲಿ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರಿನ ಹಿನ್ನೆಲೆಯಲ್ಲೇ ಅಂತಾರಾಷ್ಟ್ರೀಯ ಪುಸ್ತಕ ವರ್ಷಾಚರಣೆಗೆ ವಿಶೇಷ ಒತ್ತು ನೀಡಿದರು. ಪ್ರಾಚೀನ ಕಾವ್ಯಗಳ ಕನ್ನಡಾನುವಾದಕ್ಕೆ ಉತ್ತೇಜನ ನೀಡಿದ ಅವರು, ಪುಸ್ತಕ ದಾನ ಚಳವಳಿಯನ್ನೂ ಆರಂಭಿಸಿದರು. ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೊದಲ ಬಾರಿಗೆ ಮಹಿಳಾ ಸಾಹಿತಿ ಜಯದೇವಿ ತಾಯಿ ಲಿಗಾಡೆ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಹೊಸ ಮಾದರಿಯನ್ನು ನಿರ್ಮಿಸಿದರು.
    • 1975ರಲ್ಲಿ ಉದಯೋನುಖ ಲೇಖಕರಿಗೆ ತರಬೇತಿ ನೀಡುವ ಉದ್ದೇಶದಿಂದ ಧಾರವಾಡದಲ್ಲಿ 15 ದಿನಗಳ ಲೇಖಕರ ತರಬೇತಿ ಶಿಬಿರವನ್ನು ಆಯೋಜಿಸಿದರು. ಈ ಪ್ರಯೋಗ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪೂರ್ವವಾದ ಹೆಜ್ಜೆಯಾಗಿ ಪರಿಣಮಿಸಿತು.
    • 1976ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಾಸನಶಾಸ್ತ್ರ ತರಗತಿಗಳನ್ನು ಆರಂಭಿಸಿದ ಅವರು, ಕನ್ನಡ ನಿಘಂಟು ದ ಎರಡನೇ ಸಂಪುಟದ ಬಿಡುಗಡೆಗೂ ಕಾರಣರಾದರು. ಲೇಖಕರ ಶಿಬಿರ, ಜಿಲ್ಲಾ ಮತ್ತು ರಾಜ್ಯಮಟ್ಟದ ಜಾನಪದ ಕಲಾ ಮಹೋತ್ಸವಗಳು ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನಗಳ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.
    • 1977ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವವನ್ನು ಆಚರಿಸಿ, ಅದರ ಸರಣಾರ್ಥ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸಿದರು. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಜಾನಪದ ಕಲೆಗಳು ಕುರಿತ ಸಾಕ್ಷ್ಯಚಿತ್ರಗಳನ್ನೂ ನಿರ್ಮಿಸಿ ಬಿಡುಗಡೆ ಮಾಡಿದರು.
    • 1978ರಲ್ಲಿ ದೇಶದ ರಾಜಧಾನಿ ದೆಹಲಿಯಲ್ಲಿ 50ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ಬಳಿಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದಿಂದ ನಿವೃತ್ತರಾದರು.
    • ಕನ್ನಡದ ಸೇವೆಯಲ್ಲಿ ನಿರಂತರ ಬದುಕು:
      ನಂತರವೂ ಜಿ. ನಾರಾಯಣ ಅವರ ಸಾರ್ವಜನಿಕ ಮತ್ತು ಸಾಂಸ್ಕೃತಿಕ ಸೇವೆ ನಿಲ್ಲಲಿಲ್ಲ. 1980ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ನೇಮಕಗೊಂಡರು. 1983ರಲ್ಲೂ ಇದೇ ಅಕಾಡೆಮಿಯೊಂದಿಗೆ ತಮ ಸೇವೆ ಮುಂದುವರಿಸಿದರು.
    • 1985ರಲ್ಲಿ ಕನ್ನಡ ಕಾವಲು ಮತ್ತು ಗಡಿ ಸಲಹಾ ಸಮಿತಿಯ ಸದಸ್ಯರಾಗಿ ನೇಮಕಗೊಂಡ ಅವರು, ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯ ಕಾರ್ಯಸುಧಾರಣೆಗೆ ಸಂಬಂಧಿಸಿದ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಕರ್ನಾಟಕ ಪತ್ರಿಕಾ ಅಕಾಡೆಮಿಯ ಅಧ್ಯಕ್ಷರಾಗಿಯೂ ತಮ ಕರ್ತವ್ಯ ನಿರ್ವಹಿಸಿದರು.
    • 1992ರಲ್ಲಿ ಸರ್ಕಾರ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಿಸಿತು. ಈ ಹುದ್ದೆಯಲ್ಲಿ ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ವ್ಯಾಪಕವಾಗಿ ನಡೆಸಿದ ಅವರು, ಪ್ರಾಧಿಕಾರಕ್ಕೆ ಹೊಸ ಚೈತನ್ಯ ಮತ್ತು ಸಂಕಲ್ಪಶಕ್ತಿಯನ್ನು ತುಂಬಿದರು.
    • 1993ರಲ್ಲಿ ಬೆಂಗಳೂರು ನಗರ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮೇಳನದ ಅಧ್ಯಕ್ಷರಾಗುವ ಗೌರವಕ್ಕೂ ಪಾತ್ರರಾದರು.
    • ಪ್ರಶಸ್ತಿ, ಗೌರವ ಮತ್ತು ಸಾಹಿತ್ಯ ಕೃತಿಗಳು:
      ಅವರ ಅಪೂರ್ವ ಸಾಧನೆಗಳಿಗೆ ಒಂದರ ನಂತರ ಒಂದರಂತೆ ಹಲವು ಪ್ರಶಸ್ತಿ ಮತ್ತು ಗೌರವಗಳು ಸಂದವು. ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ, ಕನ್ನಡಜ್ಯೋತಿ ಪ್ರಶಸ್ತಿ, ಶಾಂತವೇರಿ ಗೋಪಾಲಗೌಡ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ, ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌‍, ಉದಯಭಾನು ವಿದ್ಯಾರತ್ನ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಅವರ ಮುಡಿಗೇರಿದವು. ಅಕ್ಷರ ನೀವು ಕಲಿಯಿರಿ, ರಾಷ್ಟ್ರೀಯ ಪದಗಳು, ನಾವು ಮತ್ತು ನಮವರು, ಮಲೇರಿಯಾ ಹಾವಳಿ, ಹೆಚ್ಚು ಬೆಳೆ ಬೆಳೆಯಿರಿ, ಚಿಂತನೆ ಲಹರಿ ಸೇರಿದಂತೆ ಹಲವು ಕೃತಿಗಳನ್ನು ರಚಿಸಿರುವುದು ಅವರ ಸಾಹಿತ್ಯಾಸಕ್ತಿಗೆ ಸಾಕ್ಷಿಯಾಗಿದೆ.
    • ಸರಳತೆಯೇ ಅವರ ಬದುಕಿನ ಶಕ್ತಿ:
      ಕನ್ನಡ ನಾಡಿನ ಅಪರೂಪದ ಸಾಧಕರಾದ ಜಿ. ನಾರಾಯಣ ಅವರು ಮೇರು ವ್ಯಕ್ತಿತ್ವದ, ಶುದ್ಧಹಸ್ತದ ಮತ್ತು ನಿಷ್ಕಳಂಕ ಮನಸ್ಸಿನ ಮಹಾನ್‌ ಗಾಂಧಿವಾದಿಯಾಗಿದ್ದರು. ತಮ ಜೀವನದುದ್ದಕ್ಕೂ ಖಾದಿ ಧರಿಸುವ ಸಂಕಲ್ಪವನ್ನು ಪಾಲಿಸಿದ ಅವರ ಸರಳತೆ ಎಲ್ಲರಿಗೂ ಮಾದರಿಯಾಗಿತ್ತು. ಅಧಿಕಾರ ಮತ್ತು ಸ್ಥಾನಮಾನವನ್ನು ಎಂದಿಗೂ ಸ್ವಾರ್ಥಕ್ಕಾಗಿ ಬಳಸದೆ, ನಿಸ್ಪಹರಾಗಿ ಕರ್ತವ್ಯ ನಿರ್ವಹಿಸಿದ ಅವರು ಗಾಂಧೀಜಿಯವರ ಆದರ್ಶಗಳನ್ನು ತಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು.
  • ಅಪಾರ ಸೇವೆ ಸಲ್ಲಿಸಿದ ಜಿ. ನಾರಾಯಣ ಅವರು 2011ರ ನವೆಂಬರ್‌ 20ರಂದು ಇಹಲೋಕ ತ್ಯಜಿಸಿದರೂ, ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ ಮತ್ತು ಸಾರ್ವಜನಿಕ ಜೀವನಕ್ಕೆ ಅವರು ನೀಡಿದ ಕೊಡುಗೆ ಅವರನ್ನು ಶಾಶ್ವತವಾಗಿ ಜೀವಂತವಾಗಿರಿಸಿದೆ. ಗಾಂಧಿವಾದಿ ಚಿಂತನೆ, ಸರಳ ಜೀವನ, ನಿಸ್ವಾರ್ಥ ಸೇವೆ ಮತ್ತು ಕನ್ನಡದ ಮೇಲಿನ ಅಪಾರ ಪ್ರೀತಿಯ ಮೂಲಕ ಜಿ. ನಾರಾಯಣ ಅವರು ಕನ್ನಡ ನಾಡಿಗೆ ಬಿಟ್ಟುಹೋಗಿರುವ ಪರಂಪರೆ ಎಂದೆಂದಿಗೂ ಪ್ರೇರಣೆಯಾಗಿ ಉಳಿಯಲಿದೆ.
RELATED ARTICLES
spot_img

Latest News