Monday, April 13, 2026
Homeಸಂಪಾದಕೀಯ-ಲೇಖನಗಳುರಾಮನ ಅವತಾರ, ರಘುಕುಲಸೋಮನ ಅವತಾರ

ರಾಮನ ಅವತಾರ, ರಘುಕುಲಸೋಮನ ಅವತಾರ

-ಸನ್ಮಿತ್ರ
ಶ್ರೀ ರಾಮ ಜಯರಾಮ ಜಯಜಯರಾಮ. ಮರ್ಯಾದಾ ಪುರುಷೋತ್ತ ಮನೂ, ಪಿತೃ ವಾಕ್ಯ ಪರಿಪಾಲಕನೆಂದು ಕೀರ್ತಿ ಹೊತ್ತವನೂ ಆದ ಶ್ರೀರಾಮ ಚಂದ್ರನು ಅತುಳ ಪರಾಕ್ರಮಿ. ಆತಸಂಯಮಿ. ವೀರಾಗ್ರಣಿ. ವಿನಯದ ಗಣಿ. ಆತ ಘನಪತಿ, ಸದ್ಗುಣಗಡಣಪತಿ. ರಾಮರಾಜ್ಯವೆಂಬ ಪರಿಕಲ್ಪನೆ ಆತನಿಂದಲೇ ಹೊರವಟ್ಟಿದ್ದು. ಅವನ ದಕ್ಷ, ಪ್ರಾಮಾಣಿಕ, ಪ್ರಜಾವತ್ಸಲ ಆಡಳಿತದಲ್ಲಿ ರಾಜ್ಯ ಸುಭಿಕ್ಷ ವಾಗಿತ್ತು. ಶಾಂತಿ- ಸೌಹಾರ್ದಗಳ ನೆಲೆವೀಡಾಗಿತ್ತು. ನ್ಯಾಯ, ನೀತಿ, ಧರ್ಮ, ಸೌಜನ್ಯ,ಸೌಶೀಲ್ಯ, ಸೌಮನಸ್ಯಗಳು ಲಾಸ್ಯವಾಡುತ್ತಿದ್ದವು. ಇನ್ನು ರಾಮ ಬಾಣಕ್ಕೆ ಎದುರೇ ಇಲ್ಲ.

ಇಂಥ ಮಹಾಮಹಿಮ ಶ್ರೀರಾಮಚಂದ್ರನ ಜನದಿನವೇ ಶ್ರೀರಾಮನವಮಿ, ಚೈತ್ರ ಶುಕ್ಲ ನವಮಿಯ ದಿನ ಶ್ರೀರಾಮನು ಜನಿಸಿದ ಪರ್ವದಿನ. ಹಿಂದೂ ಕ್ಯಾಲೆಂಡರ್ ಪ್ರಕಾರ ವರ್ಷದಲ್ಲಿ ಎರಡು ಬಾರಿ ನವರಾತ್ರಿ ಬರುತ್ತದೆ. ಆಶ್ವಯುಜ ಮಾಸದಲ್ಲಿ ಶರನ್ನವರಾತ್ರಿ ಬಂದರೆ ಚೈತ್ರ ಶುಕ್ಲ ಪಾಡ್ಯಮಿಯಂದು ಪ್ರಾರಂಭವಾಗಿ ಶ್ರೀರಾಮನವಮಿಗೆ ವಸಂತ ನವರಾತ್ರಿ ಮುಕ್ತಾಯವಾಗುತ್ತದೆ. ಇದನ್ನು ಚೈತ್ರನವರಾತ್ರಿ ಎಂತಲೂ ಕರೆಯುತ್ತಾರೆ. ಉಭಯ ನವರಾತ್ರಿಗಳು ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರ ದಿನಗಳಾಗಿವೆ. ರಾಮಾಯಣ ಕಥೆಯನ್ನು ಅವಲೋಕಿಸಿದರೆ ಅದು ಕರುಣಾರಸ ಪ್ರಧಾನ ಕಾವ್ಯವಾಗಿದೆ. ರಾಮ ಕಥಾನಕವು ಕೆಡುಕಿನ ವಿರುದ್ಧ ಒಳಿತಿನ ವಿಜಯವನ್ನು ಸಂಕೇತಿಸುತ್ತದೆ. ರಾವಣ ಸಂಹಾರವು ವಾಸ್ತವವಾಗಿ ಪರಸತಿ ಬಯಕೆಯ ಸಂಹಾರವಾಗಿದೆ. ಬ್ರಾಹಣೋತ್ತಮನೂ ಅಸೀಮ ದೈವಭಕ್ತನೂ ಆದ ರಾವಣನು ತನ್ನ ಆಸುರೀ ಗುಣದಿಂದ ರಾವಣಾಸುರ ಎನ್ನಿಸಿಕೊಳ್ಳುತ್ತಾನೆ.

ವೈಕುಂಠ ದ್ವಾರಕಪಾಲಕರಾದ ಜಯವಿಜಯರು ಸನಕಸನಂದನಾದಿ ಋಷಿಗಳ ಶಾಪಕ್ಕೆ ಗುರಿಯಾಗುತ್ತಾರೆ. ಭೂಲೋಕದಲ್ಲಿ ಜನಿಸುವಂತೆ ಶಾಪಗ್ರಸ್ತರಾಗುತ್ತಾರೆ. ಆಗ ವಿಷ್ಣುವು ನನ್ನ ಶತ್ರುಗಳಾಗಿ ಮೂರು ಜನ ತಳೆಯುವಿರೋ, ಭಕ್ತರಾಗಿ ಏಳು ಜನ ತಳೆಯುವಿರೋ ಎಂದು ಕೇಳುತ್ತಾನೆ. ನಿನ್ನನ್ನು ಅಗಲಿ ಹೆಚ್ಚು ಕಾಲ ಇರಲಾರೆವು ಪ್ರಭೂ! ಶತ್ರುಗಳಾಗಿ ಮೂರೇ ಮೂರು ಜನಗಳನ್ನು ಎತ್ತಿ ಪುನಃ ಬೇಗನೆ ನಿನ್ನ ಬಳಿಗೆ ಬಂದುಬಿಡುವೆವು ಎಂದು ಜಯವಿಜಯರು ಕೋರಿ ಕೊಳ್ಳುತ್ತಾರೆ.

ಅದರಂತೆ ಕೃತಯುಗದಲ್ಲಿ ಹಿರಣ್ಯಾಕ್ಷ, ಹಿರಣ್ಯಕಶಿಪುವಾಗಿ, ತ್ರೇತಾಯುಗದಲ್ಲಿ ರಾವಣ, ಕುಂಭಕರ್ಣರಾಗಿ, ದ್ವಾಪರ ಯುಗದಲ್ಲಿ ಶಿಶು ಪಾಲ, ದಂತವಕ್ರರಾಗಿ ಜನಿಸುವರು. ತ್ರೇತಾಯುಗದಲ್ಲಿ ಅವತಾರ ನಿಮಿತ್ತ ಘಟನೆಗಳು ಜರುಗುವವು. ಮಹಾಭಕ್ತನಾಗಿದ್ದ ರಾವಣನು ಒಮೆ ಶಿವನನ್ನು ಕುರಿತು ಕಠೋರ ತಪಗೈದು ಸಾಕ್ಷಾತ್ಕರಿಸಿಕೊಂಡು ಮಾಯೆಯ ಪ್ರಭಾವಕ್ಕೊಳಗಾಗಿ ಪಾರ್ವತಿಯನ್ನೇ ಬೇಡುತ್ತಾನೆ. ಆಗ ನಾರದ ಮಹಾಮುನಿಗಳು ಬಹು ಜಾಣೆಯಿಂದ ಪಾರ್ವತಿಯನ್ನೇ ಹೋಲುತ್ತಿದ್ದ ಮಂಡೋದರಿಯನ್ನು ರಾವಣನಿಗೆ ಕಲ್ಯಾಣ ಮಾಡಿಸಿ ಬಂದಿದ್ದ ಕಂಟಕವನ್ನು ನಿವಾರಿಸು ತ್ತಾರೆ.

ಇನ್ನೊಮೆ ರಾವಣ ಆತಲಿಂಗವನ್ನೇ ಬೇಡುತ್ತಾನೆ. ಗಣಪತಿಯ ಜಾಣತನದಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ರಾವಣನು ಮಹಾಭಕ್ತನಾದರೂ ಆತನದು ಆಸುರೀ ಭಕ್ತಿ. ನಿಜವಾದ ಭಕ್ತಿ ಇತರರಿಗೆ ಒಳಿತನ್ನು ಇಚ್ಛಿಸುತ್ತದೆ. ಆಸುರೀ ಭಕ್ತಿಯಲ್ಲಿ ಸ್ವಾರ್ಥವೇ ವಿಜೃಂಭಿಸುತ್ತದೆ.ಅನ್ಯರಿಗೆ ಕೇಡನ್ನು ಬಯಸುತ್ತದೆ. ಅಂತೆಯೇ ಪರಸತಿಯಾದ ಸೀತೆಯನ್ನು ಕಂಡು ರಾವಣ ಮೋಹ ಗೊಳ್ಳುತ್ತಾನೆ. ಮಾಯೆಯು ಅವನ ದೃಷ್ಟಿಗೆ ಅಂಧಕಾರ ಕವಿಸುತ್ತದೆ. ಕಾಮಾತುರಾಣಾಂ ನಭಯಂ ನಲಜ್ಜಾ ಎಂಬಂತೆ ಕಪಟ ವೇಷಧಾರಿಯಾಗಿ ಸೀತೆಯನ್ನು ಅಪಹರಿಸುತ್ತಾನೆ.

ನಾಗಚಂದ್ರನು ತನ್ನ ರಾಮಚಂದ್ರ ಚರಿತ ಪುರಾಣ ಅಥವಾ ಪಂಪರಾಮಾಯಣದಲ್ಲಿ ರಾವಣನ್ನು ಪ್ರತಿನಾಯಕನನ್ನಾಗಿ ಚಿತ್ರಿಸಿ ಪದಪತ್ರದ ಜಲಬಿಂದುವಿನಂತೆ ಚಲಿತಮಾದುದು ಚಿತ್ತಂ ಎನ್ನುತ್ತಾನೆ. ಅಂದರೆ ರಾವಣನ ಮನಸ್ಸು ಕಮಲದ ಎಲೆಯ ಮೇಲಿನ ನೀರಿನ ಹನಿಯಂತೆ ಅಂಟಿಯೂ ಅಂಟದಂತೆ ಚಂಚಲಗೊಂಡಿತು ಎನ್ನುತ್ತಾನೆ. ಜನ್ನನ ಯಶೋಧರ ಚರಿತೆಯಲ್ಲಿ ಮನಸಿಜನ ಮಾಯೆ ವಿಧಿ ವಿಳಸನದ ನೆರಂ ಬಡಿಯೆ ಕೊಂದು ಕೂಗದೆ ನರರಂ? ಎಂಬ ವಾಕ್ಯ ಬರುತ್ತದೆ. ಅಂದರೆ ಮನಥನ ಮಾಯೆ ಅಥವಾ ಕಾಮವಿಕಾರಕ್ಕೆ ವಿಧಿವಿಲಾಸ ಎಂಬ ಭೂತವೂ ಮೆಟ್ಟಿಕೊಂಡರೆ ಮನುಷ್ಯರನ್ನು ಕೊಂದು ಅಟ್ಟಹಾಸಗೈಯದೇ ಇದ್ದೀತೇ?

ಆದ್ದರಿಂದ ರಾಮಾಯಣವು ರಾಮಕಥಾನಕದ ನೆಪದಲ್ಲಿ ಜಗತ್ತಿಗೆ ಪರದಾರಾ ಸೋದರತ್ವ ಸಿದ್ಧಾಂತವನ್ನು ಬೋಧಿಸುತ್ತದೆ. ಆಧುನಿಕ ಜಗತ್ತಿಗೆ ಶ್ರೀ ರಾಮಚಂದ್ರನ ಏಕಪತ್ನೀ ವ್ರತ, ಸೀತಾಮಾತೆಯ ಪಾತಿವ್ರತ್ಯ, ಲಕ್ಷ್ಮಣನ ಸೋದರ ಪೂಜ್ಯತೆ, ಭರತನ ಭ್ರಾತೃಪ್ರೇಮ, ಕನ್ನಡ ಕುಲಪುಂಗವನೂ, ಭಾಗವತೋ ತ್ತಮನೂ ಆದ ಹನುಮಂತನ ಅಚಲ ದಾಸ್ಯಭಕ್ತಿ, ವಿಭೀಷಣನ ಸ್ವಾಮಿನಿಷ್ಠೆ ಆದರ್ಶ ಪ್ರಾಯವಾಗಿದೆ. ಪರಸ್ತ್ರೀ ವ್ಯಾಮೋಹಕ್ಕೆ ಬಲಿಯಾದವರು ಉದ್ಧಾರವಾದ ಉದಾಹರಣೆ ಇತಿಹಾಸದಲ್ಲೇ ಇಲ್ಲ, ಪುರಾಣಗಳಲ್ಲಿಯೂ ಇಲ್ಲ.
ಪುರಂದರ ದಾಸರು ಇನ್ನೊಂದೆಡೆ

ರಾಮಮಂತ್ರವ ಜಪಿಸೋ ಹೇ ಮನುಜ
ಆ ಮಂತ್ರ ಈ ಮಂತ್ರ ನೆಚ್ಚಿ ಕೆಡಲು ಬೇಡ ಎಂದಿದ್ದಾರೆ.
ದರೋಡೆಕೋರನಾಗಿದ್ದ ರತ್ನಾಕರನು ನಾರದ ಮುನಿಗಳ ಉಪದೇಶದನ್ವಯ ಮರಾಮರಾ ಎಂದು ಜಪಿಸಿ ವಾಲೀಕಿ ಮಹರ್ಷಿಯಾದನು. ಇನ್ನು ಶ್ರೀರಾಮ ಜಯರಾಮ ಜಯಜಯರಾಮ ಎಂಬ ರಾಮತಾರಕ ಮಂತ್ರವನ್ನು ಜಪಿಸಿದರೆ ಎಂತಹ ಸತ್ಫಲ ಹೊಂದ ಬಹುದೆಂಬುದು ಊಹೆಗೂ ನಿಲುಕದ್ದು.
ಛತ್ರಪತಿ ಶಿವಾಜಿಯ ಗುರು ಆಂಜನೇಯನ ಅವತಾರಿಗಳೆಂದೇ ಖ್ಯಾತರಾದ ಸಮರ್ಥರಾಮದಾಸರು ಹದಿಮೂರು ಕೋಟಿ ಬಾರಿ ರಾಮತಾರಕ ಮಂತ್ರ ಜಪಿಸಿದ್ದಾಗಿ ತಿಳಿದು ಬರುತ್ತದೆ. ರಾಮನಾಮ ಮಹಿಮೆಯಿಂದಲೇ ಅವರು ಶಿವಾಜಿಯಂತಹ ಚಕ್ರವರ್ತಿಯನ್ನು ರೂಪಿಸಲು ಸಾಧ್ಯವಾಯಿತು.
ಇನ್ನು ಆಧುನಿಕ ಕಾಲದಲ್ಲಿ ಆಂಜನೇಯನ ಅಂಶಾವತಾರಿ ಗಳೆಂದು ಪರಿಗಣಿತರಾಗಿರುವ ಕಾಞಂಗಾಡಿನ ಆನಂದಾಶ್ರಮದ ಸ್ವಾಮೀ ರಾಮದಾಸರು ಸಹ ರಾಮತಾರಕ ಮಂತ್ರ ಪುರಶ್ಚರಣ ಮಾಡಿರುತ್ತಾರೆ.
ರಾಮ ನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ
ವಿಠ್ಠಲನಾಮ ತುಪ್ಪವ ಸುರಿದು
ಬಾಯ ಚಪ್ಪರಿಸಿರೋ
ಎಂದು ಪುರಂದರದಾಸರು ಉಪದೇಶಿಸುತ್ತಾರೆ.
ಆಶ್ರಿತರಕ್ಷಕರೆಂದೇ ಖ್ಯಾತಿವೆತ್ತಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಗುರು ಸಾರ್ವಭೌಮರೂ ಶ್ರೀ ಮೂಲರಾಮನ ಉಪಾಸಕರು ಎಂಬ ಅಂಶ ಉಲ್ಲೇಖನೀಯ.
ಶ್ರೀರಾಮನವಮಿ ಕಡು ಬೇಸಿಗೆಯಲ್ಲಿ ಬರುವ ಕಾರಣ ಅಂದು ಶ್ರೀರಾಮನಿಗೆ ಎಲ್ಲೆಲ್ಲೂ ವಿಶೇಷ ಪೂಜೆಗಳನ್ನು ನೆರವೇರಿಸಿ ಅರವಟ್ಟಿಗೆಗಳನ್ನಿರಿಸಿ ಪಾನಕ, ಮಜ್ಜಿಗೆ, ಕೋಸಂಬರಿಗಳನ್ನು ವಿತರಿಸಲಾಗುತ್ತದೆ.
ಪಾನಕ, ಮಜ್ಜಿಗೆ, ಕೋಸಂಬರಿ ಸೇವನೆ ಉದರ-ಶರೀರ ತಂಪಾಗಿಸು ವಂತೆ ರಾಮಸರಣೆಯು ನಮ ಮನೋ ಭೂಮಿಕೆಯಲ್ಲಿರ ತಕ್ಕ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಾದಿ ದೋಷಗಳನ್ನೂ ಶಮನಗೊಳಿಸಿ ಮನಸ್ಸೂ ತಂಪಾಗು ವಂತಾದರೆ ಎಷ್ಟು ಚೆನ್ನ ಅಲ್ಲವೇ?
ಶ್ರೀರಾಮ-ಜಯರಾಮ-ಜಯಜಯರಾಮ.

RELATED ARTICLES

Latest News