Homeರಾಜ್ಯ"14 ವರ್ಷಗಳಿಂದ ಕರಾವಳಿಯಲ್ಲಿ ಹೆಚ್ಚು ಬಿಜೆಪಿ ಶಾಸಕರೇ ಗೆದ್ದಿದ್ದರೂ ಅಭಿವೃದ್ಧಿ ಏಕೆ ಸಾಧ್ಯವಾಗಿಲ್ಲ..?"

“14 ವರ್ಷಗಳಿಂದ ಕರಾವಳಿಯಲ್ಲಿ ಹೆಚ್ಚು ಬಿಜೆಪಿ ಶಾಸಕರೇ ಗೆದ್ದಿದ್ದರೂ ಅಭಿವೃದ್ಧಿ ಏಕೆ ಸಾಧ್ಯವಾಗಿಲ್ಲ..?”

ಮಂಗಳೂರು, ಸೆ.18- ಕಳೆದ 14 ವರ್ಷಗಳಿಂದಲೂ ಬಿಜೆಪಿಯ ಹೆಚ್ಚು ಜನ ಶಾಸಕರು ಗೆಲ್ಲುತ್ತಿದ್ದಾರೆ. ಆದರೂ ಕರಾವಳಿಯಲ್ಲಿ ಸಮಗ್ರ ಅಭಿವೃದ್ಧಿ ಏಕೆ ಸಾಧ್ಯವಾಗಿಲ್ಲ ಎಂದು ಅಬಕಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಪ್ರಶ್ನಿಸಿದ್ದಾರೆ.

ತಮ್ಮ ವಿಡಿಯೋ ಸಂದೇಶದಲ್ಲಿ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಕರಾವಳಿ ಕರ್ನಾಟಕದ ಮಂಗಳೂರಿನ ಪ್ರಜಾ ಸೌಧದಲ್ಲಿ ಕರ್ನಾಟಕ ಸಚಿವ ಸಂಪುಟ ಸಭೆ ಇದೇ ಮೊದಲ ಬಾರಿಗೆ ನಡೆದಿದೆ. ಇದು ಕೇವಲ ಸ್ಥಳ ಬದಲಾವಣೆಯಲ್ಲ, ಇದು ನಮ್ಮ ಆರ್ಥಿಕ ದಿಕ್ಕನ್ನು ಸೂಚಿಸುವ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದಿದ್ದಾರೆ.

ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಮಗ್ರ ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿ 2026 ಅನ್ನು ರೂಪಿಸುತ್ತಿದ್ದೇವೆ. ಬಿಜೆಪಿಯು ಮಂಗಳೂರನ್ನು ವಿಭಜಿಸಲು ಅವಕಾಶ ಹುಡುಕುತ್ತಿರುವ ಈ ಸಮಯದಲ್ಲಿ, ನಾವು ಮಂಗಳೂರು ಬೆಳೆಯಲು, ಸಮೃದ್ಧವಾಗಲು ಮತ್ತು ಕರ್ನಾಟಕವನ್ನು ಮುನ್ನಡೆಸುವ ನಗರವನ್ನಾಗಿಸಲು ಅವಕಾಶಗಳನ್ನು ಸೃಷ್ಟಿಸುತ್ತಿದ್ದೇವೆ ಎಂದರು.

ಸಿಟೀಸ್‌‍ ಇಂಡೆಕ್‌್ಸ 2026ರಲ್ಲಿ ಮಂಗಳೂರು ಅಗ್ರಸ್ಥಾನ ಪಡೆದ ನಗರವಾಗಿ ಹೊರಹೊಮಿದೆ. ಮಂಗಳೂರು ಭಾರತದ ಅತ್ಯಂತ ಭರವಸೆಯುಳ್ಳ ನಾನ್‌-ಮೆಟ್ರೋ ನಗರವಾಗಿದೆ. ನಾವು ಇದನ್ನು ಇನ್ನಷ್ಟು ಉತ್ತಮಪಡಿಸಬೇಕು ಮತ್ತು ಮಂಗಳೂರಿನಲ್ಲಿ ಹೊಸ ಮೆಟ್ರೋ ಸಿಟಿಯನ್ನು ನಿರ್ಮಿಸಬೇಕು ಎಂಬ ಗುರಿಯಿದೆ ಎಂದರು.

ಮಂಗಳೂರಿಗೆ ಅಗ್ರ ಸ್ಥಾನ ಕಲ್ಪಿಸುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬಿಯಾಂಡ್‌ ಬೆಂಗಳೂರು ಕನಸಿಗೆ ಈ ಸಂಪುಟ ಸಭೆ ಮುನ್ನುಡಿಯಾಗಿದೆ. ಇಷ್ಟು ದೊಡ್ಡ ರಾಜ್ಯಕ್ಕೆ ಒಂದಕ್ಕಿಂತ ಹೆಚ್ಚು ಎಂಜಿನ್‌ಗಳ (ಅಭಿವೃದ್ಧಿ ಕೇಂದ್ರಗಳ) ಅಗತ್ಯವಿದೆ. ವಾಯು, ರಸ್ತೆ, ರೈಲು ಮತ್ತು ಸಮುದ್ರ ಸಂಪರ್ಕ, ಬಂದರು, ವಿಶ್ವವಿದ್ಯಾನಿಲಯ, ಆರೋಗ್ಯ ಮತ್ತು ಶಿಕ್ಷಣದ ಭದ್ರ ಬುನಾದಿ ಹಾಗೂ ಈಗ ರಾಷ್ಟ್ರೀಯ ಮಟ್ಟದ ಶ್ರೇಯಾಂಕವನ್ನು ಹೊಂದಿರುವ ಮಂಗಳೂರು, ರಾಜ್ಯವನ್ನು ಮುನ್ನಡೆಸುವ ಮತ್ತೊಂದು ಪ್ರಮುಖ ಶಕ್ತಿಯಾಗಬಲ್ಲದು ಎಂಬುದು ಸ್ಪಷ್ಟ ಎಂದರು.

ಕರಾವಳಿ ಪ್ರದೇಶವು ಇಂದು ನಿರೀಕ್ಷೆಯಂತೆ ತನ್ನ ಅರ್ಹತೆಗೆ ತಕ್ಕಂತಹ ಸ್ಥಾನಮಾನವನ್ನು ಪಡೆದಿದೆ. ಇಂದಿನ ಸಚಿವ ಸಂಪುಟ ಸಭೆಯು ಕರಾವಳಿ ಕರ್ನಾಟಕದ ವಿಷಯಗಳ ಕುರಿತು ನಿರ್ಧಾರ ಕೈಗೊಳ್ಳುವ ಉದ್ದೇಶವನ್ನು ಹೊಂದಿದೆ. ಮಂಗಳೂರಿನಂತಹ ನಗರಗಳ ಬೆಳವಣಿಗೆಗೆ ಉತ್ತೇಜನ ನೀಡುವ ಮೂಲಕ ನಾವು ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಮನ್ನಣೆ ನೀಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

ಸಮಾಜದಲ್ಲಿ ಮತ್ತು ಜನರ ಮನಸ್ಸಿನಲ್ಲಿ ಗೊಂದಲ ಮೂಡಿಸುವ ಮೂಲಕ ಬಿಜೆಪಿಯು ತನ್ನ ಸಮಯವನ್ನು ವ್ಯರ್ಥ ಮಾಡಲಿ, ಆದರೆ ನಾವು ಮಾತ್ರ ಕರಾವಳಿ ಕರ್ನಾಟಕದ ಜನರ ಅಭಿವೃದ್ಧಿ ಮತ್ತು ಪ್ರಗತಿಯತ್ತ ಗಮನಹರಿಸುತ್ತೇವೆ. ವಿಮಾನ ನಿಲ್ದಾಣ ವಿಸ್ತರಣೆ, ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವುದು ಮತ್ತು ಕರ್ನಾಟಕದ ಮಧ್ಯಭಾಗದೊಂದಿಗೆ ಸಂಪರ್ಕ ಹೆಚ್ಚಿಸಲು ಕೊಂಕಣ ರೈಲ್ವೆಯನ್ನು ಸುಧಾರಿಸುವುದು ಮುಂತಾದ ಬೇಡಿಕೆಗಳ ಬಗ್ಗೆ ಕೇಂದ್ರ ಮಟ್ಟದಲ್ಲಿ ಬಿಜೆಪಿ ಸಂಸದರು ಚರ್ಚಿಸದಿರುವುದು ದುರದೃಷ್ಟಕರ ಎಂದರು.

ಸಂಪುಟ ಸಭೆಗೂ ಮುನ್ನ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವರು ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಲಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು.ಅವರಿಗೆ ಕರಾವಳಿಯು ಜನರನ್ನು ವಿಭಜಿಸುವ ವೇದಿಕೆಯಾದರೆ, ನಮಗೆ ಅದು ಅಭಿವೃದ್ಧಿಯ ಎಂಜಿನ್‌ ಆಗಿದೆ ಎಂದು ಪ್ರತಿಪಾದಿಸಿದರು.ಸಚಿವ ಸಂಪುಟ ಸಭೆಯ ಹಿಂದೆ ರಾಜಕೀಯ ಉದ್ದೇಶಗಳಿಲ್ಲ ಎಂದು ಸ್ಪಷ್ಟ ಪಡಿಸಿದರು.

RELATED ARTICLES
spot_img

Latest News