ಮಂಗಳೂರು, ಸೆ.18- ಪಕ್ಷದಿಂದ ಅನುಕೂಲ ಹಾಗೂ ಅವಕಾಶ ಪಡೆದುಕೊಂಡವರು, ಪಕ್ಷವನ್ನು ಕಟ್ಟುವ ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕು ಎಂದು ಪೌರಾಡಳಿತ ಸಚಿವ ಹೆಚ್.ಸಿ.ಬಾಲಕೃಷ್ಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಷ್ಟೇ ಅಲ್ಲ, ಯಾವುದೇ ನಾಯಕರು ದುರ್ಬಲರಾದರೂ ಅದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂದರು.ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಯಾರೇ ದುರ್ಬಲರಾದರೂ ಕಾಂಗ್ರೆಸ್ ಪಕ್ಷಕ್ಕೆ ತೊಂದರೆಯಾಗುತ್ತದೆ. ಎಲ್ಲ ನಾಯಕರು ತಮದೇ ಆದ ನಾಯಕತ್ವವನ್ನು ಬೆಳೆಸಿಕೊಂಡಿದ್ದಾರೆ ಎಂದು ಹೇಳಿದರು.
ಕೆ.ಎನ್.ರಾಜಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಸಿದ್ದರಾಮಯ್ಯ ಅವರು ದುರ್ಬಲರಾಗುತ್ತಿದ್ದಾರೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪಕ್ಷದಿಂದ ಅನುಕೂಲ ಹಾಗೂ ಅವಕಾಶ ಪಡೆದವರು ಪಕ್ಷ ಸಂಘಟನೆಗೆ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಪುನರುಚ್ಚರಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿನ್ನೆ ಮಂಗಳೂರಿನಲ್ಲಿ ಶಾಸಕರಿಗೆ ನೀಡಿದ ಔತಣಕೂಟದಲ್ಲಿ ಯಾವುದೇ ವಿಶೇಷತೆ ಇರಲಿಲ್ಲ. ಎಲ್ಲರೊಂದಿಗೆ ಸೌಹಾರ್ದಯುತವಾಗಿ ಬೆರೆಯಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ಹೇಳಿದರು.
ಕರಾವಳಿ ಪ್ರದೇಶದ ಅಭಿವೃದ್ಧಿಗೆ ಮುಖ್ಯಮಂತ್ರಿ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ. ನಮ್ಮ ಪಕ್ಷದ ಶಾಸಕರಷ್ಟೇ ಅಲ್ಲದೆ, ವಿರೋಧ ಪಕ್ಷದ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ ಎಂದು ಬಾಲಕೃಷ್ಣ ತಿಳಿಸಿದರು.
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿರುವುದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಈ ಹಿಂದೆ ಇಲ್ಲಿ ಕಾಂಗ್ರೆಸ್ ನಿಂದ ಹೆಚ್ಚಿನ ಶಾಸಕರು ಆಯ್ಕೆಯಾಗಿದ್ದರು. ಕಾಲ ಬದಲಾದಂತೆ ರಾಜಕೀಯದಲ್ಲಿ ಕೆಲವು ಏರಿಳಿತಗಳು ಆಗುತ್ತವೆ. ಈಗ ಕಾಂಗ್ರೆಸ್ಗೆ ಅವಕಾಶ ಒದಗಿದೆ ಎಂದು ಅವರು ಹೇಳಿದರು.
