Homeರಾಜ್ಯಕೆಪಿಎಸ್‌‍ಸಿ ಅಕ್ರಮ : ಖುದ್ದು ಪ್ರಶ್ನೆ ಬರೆದು ಓಎಂಆರ್‌ ತಿದ್ದುತ್ತಿದ್ದ ಜ್ಞಾನೇಂದ್ರ..!

ಕೆಪಿಎಸ್‌‍ಸಿ ಅಕ್ರಮ : ಖುದ್ದು ಪ್ರಶ್ನೆ ಬರೆದು ಓಎಂಆರ್‌ ತಿದ್ದುತ್ತಿದ್ದ ಜ್ಞಾನೇಂದ್ರ..!

ಬೆಂಗಳೂರು,ಸೆ.2- ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನಡೆದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಕೋಟ್ಯಂತರ ರೂ.ಗಳ ಅಕ್ರಮದ ತನಿಖೆಯಲ್ಲಿ 400 ಹುದ್ದೆಗಳ ಭಾರಿ ಅಕ್ರಮದ ಇಡೀ ಜಾಲವು ಅತ್ಯಂತ ವ್ಯವಸ್ಥಿತವಾಗಿ, ಚಲನಚಿತ್ರದ ದೃಶ್ಯಗಳಂತೆ (ಫಿಲಿ ಸ್ಟೈಲ್‌) ಕಾರ್ಯನಿರ್ವಹಿಸಿರುವುದು ಅಪರಾಧ ತನಿಖಾ ದಳದ ತನಿಖೆಯಿಂದ ಹೊರಬಿದ್ದಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕೆಪಿಎಸ್‌‍ಸಿ ಮಾಜಿ ಪರೀಕ್ಷಾ ನಿಯಂತ್ರಕ ಹಾಗೂ ಐಎಎಸ್‌‍ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಗಂಗಾವರ್‌ ಮತ್ತು ಪ್ರಮುಖ ಮಧ್ಯವರ್ತಿ ಬಸವರಾಜ್‌ ಕನ್ನಾಳೆ ಅವರನ್ನು ಈಗಾಗಲೇ ಸಿಐಡಿ ಅಧಿಕಾರಿಗಳು ಬಂಧಿಸಿದ್ದು, ತನಿಖೆಯಲ್ಲಿ ಸ್ಪೋಟಕ ಮಾಹಿತಿಗಳು ಬಹಿರಂಗಗೊಂಡಿವೆ.

ಮೂರು ಹಂತ: ಮೊದಲ ಹಂತ -ಪ್ರಶ್ನೆ ಪತ್ರಿಕೆ ಸೋರಿಕೆ: ಪರೀಕ್ಷೆಗೂ ಮುಂಚಿತವಾಗಿ ಸಿದ್ಧಪಡಿಸುತ್ತಿದ್ದ 5 ಮಾದರಿ ಪ್ರಶ್ನೆ ಪತ್ರಿಕೆಗಳ ಪೈಕಿ ಅಂತಿಮಗೊಳ್ಳುತ್ತಿದ್ದ ಪ್ರಶ್ನೆಗಳನ್ನು ಐಎಎಸ್‌‍ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಸ್ವತಃ ತನ್ನ ಕೈಯಿಂದ ಬರೆದುಕೊಳ್ಳುತ್ತಿದ್ದರು. ಪರೀಕ್ಷೆಗೆ ಕೇವಲ ಎರಡು ದಿನಗಳು ಬಾಕಿ ಇರುವಾಗ ಈ ಅತಿಮುಖ್ಯ ಪ್ರಶ್ನೆ ಪತ್ರಿಕೆಯನ್ನು ಮಧ್ಯವರ್ತಿ ಬಸವರಾಜ್‌ಗೆ ತಲುಪಿಸಲಾಗುತ್ತಿತ್ತು. ರಾಜಾಜಿನಗರದ ಕಚೇರಿಯಲ್ಲಿ ಆಕಾಂಕ್ಷಿಗಳೊಂದಿಗೆ ಲಕ್ಷಾಂತರ ರೂ.ಗಳಿಗೆ (ಪ್ರತಿ ಹುದ್ದೆಗೆ ಅಂದಾಜು 40 ಲಕ್ಷ ರೂ.) ಡೀಲ್‌ ಕುದುರಿಸುತ್ತಿದ್ದ ಬಸವರಾಜ್‌, ಆ ಅಭ್ಯರ್ಥಿಗಳನ್ನು ಬೆಂಗಳೂರು, ತುಮಕೂರು ಹಾಗೂ ಆಂಧ್ರಪ್ರದೇಶದ ನಾನಾ ರೆಸಾರ್ಟ್‌ಗಳಲ್ಲಿ ರಹಸ್ಯವಾಗಿ ಕೂಡಿಹಾಕಿ ಉತ್ತರ ಬರೆಯಲು ತರಬೇತಿ ಕೊಡಿಸುತ್ತಿದ್ದ. ಬಳಿಕ ಅವರನ್ನು ಖಾಸಗಿ ಬಸ್‌‍ಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ಕರೆತರುತ್ತಿದ್ದ.

ಎರಡನೇ ಹಂತ-ಒಎಂಆರ್‌ ಶೀಟ್‌ ಕರಡು ತಿದ್ದುಪಡಿ- ಪರೀಕ್ಷೆಯಲ್ಲಿ ಯಾವುದೇ ಆತಂಕವಿಲ್ಲದೆ ಬರೆಯಲು ಸಾಧ್ಯವಾಗದ ಅಥವಾ ಅಂಕ ಕಡಿಮೆ ಪಡೆಯುವ ನಿರೀಕ್ಷೆಯಿದ್ದ ಅಭ್ಯರ್ಥಿಗಳ ಒಎಂಆರ್‌ಶೀಟ್‌ಗಳನ್ನು ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್‌ ಅವರೇ ನೇರವಾಗಿ ಕಚೇರಿಯಲ್ಲಿ ತಿದ್ದಿ, ಅವರಿಗೆ ಉನ್ನತ ಮೆರಿಟ್‌ ಬರುವಂತೆ ಅಂಕಗಳನ್ನು ಕೃತಕವಾಗಿ ಹೆಚ್ಚಿಸುತ್ತಿದ್ದರು. ಮೂರನೇ ಹಂತ -ಸಂದರ್ಶನ ಮತ್ತು ಅಂತಿಮ ನೇಮಕಾತಿ-1:3 ಅನುಪಾತದಲ್ಲಿ ಕೆಪಿಎಸ್‌‍ಸಿ ಅಧ್ಯಕ್ಷ ಶಿವಶಂಕರಪ್ಪ ಅವರ ಮುಂದೆ ಹಾಜರಾಗುತ್ತಿದ್ದ ಅಭ್ಯರ್ಥಿಗಳ ಲಿಖಿತ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನದ ಅಂಕಗಳನ್ನು ಪರಸ್ಪರ ಮ್ಯಾಚ್‌ ಮಾಡಿ, ಅಂತಿಮವಾಗಿ ಯಾವುದೇ ಅಡೆತಡೆಯಿಲ್ಲದೆ ಅಕ್ರಮ ನೇಮಕಾತಿ ಆದೇಶಗಳನ್ನು ಕೊಡಿಸಲಾಗುತ್ತಿತ್ತು.

ಕನ್ನಾಳೆ ಮನೆಯಲ್ಲಿ ಹಾಲ್‌ ಟಿಕೆಟ್‌ ಜಪ್ತಿ: ಮಧ್ಯವರ್ತಿ ಬಸವರಾಜ್‌ ಕನ್ನಾಳೆ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳು ನಡೆಸಿದ ದಾಳಿ ಮತ್ತು ಶೋಧದ ವೇಳೆ ಮತ್ತಷ್ಟು ಸ್ಫೋಟಕ ಸಾಕ್ಷ್ಯಗಳು ಲಭಿಸಿವೆ. ಪಶುವೈದ್ಯಾಧಿಕಾರಿ ಪರೀಕ್ಷೆ ಮಾತ್ರವಲ್ಲದೆ, ಇತರೆ ಸ್ಪರ್ಧಾತಕ ಪರೀಕ್ಷೆಗಳಿಗೂ ಈ ಜಾಲವು ಕೈಹಾಕಿರುವುದು ದೃಢಪಟ್ಟಿದೆ. ಕನ್ನಾಳೆ ಮನೆಯಿಂದ 2025ರಲ್ಲಿ ನಡೆದ ಬಿ ಗ್ರೂಪ್‌ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದ 6 ಅಭ್ಯರ್ಥಿಗಳ ಪ್ರವೇಶಪತ್ರಗಳು ಜಪ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ಆ 6 ಜನ ಅಭ್ಯರ್ಥಿಗಳಿಗೂ ಸಿಐಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌‍ ಜಾರಿ ಮಾಡಲಾಗಿದೆ.

40 ಲಕ್ಷದಿಂದ 80 ಲಕ್ಷದವರೆಗೆ ಡೀಲ್‌:
ತನಿಖೆಯಲ್ಲಿ ಪ್ರತಿ ಅಭ್ಯರ್ಥಿಯಿಂದ ಹುದ್ದೆಗೆ ಅನುಗುಣವಾಗಿ 40 ಲಕ್ಷದಿಂದ 80 ಲಕ್ಷದವರೆಗೆ ಹಣ ಪಡೆಯಲಾಗುತ್ತಿತ್ತು ಎಂಬ ಆರೋಪಗಳು ಹೊರಬಿದ್ದಿವೆ. ಕೆಲ ಅಭ್ಯರ್ಥಿಗಳು ಹಣ ಪಾವತಿಸಿ ಅಕ್ರಮ ಮಾರ್ಗದ ಮೂಲಕ ಪರೀಕ್ಷೆಗೆ ಹಾಜರಾಗಿದ್ದೇವೆ ಎಂದು ಸಿಐಡಿ ಮುಂದೆ ಹೇಳಿಕೆ ನೀಡಿದ್ದಾರೆ. ಕೆಲ ಅಭ್ಯರ್ಥಿಗಳು ಇದೀಗ ತನಿಖೆಗೆ ಸಹಕರಿಸಲು ಮುಂದಾಗಿದ್ದು, ತಮ ಹೇಳಿಕೆಗಳನ್ನು ದಾಖಲಿಸಿಕೊಂಡಿರುವುದಾಗಿ ವರದಿಗಳು ತಿಳಿಸಿವೆ. ಈ ಹೇಳಿಕೆಗಳು ಪ್ರಕರಣದ ಹಣದ ವ್ಯವಹಾರ, ಪ್ರಶ್ನೆಪತ್ರಿಕೆ ಸೋರಿಕೆಯ ಮೂಲ ಮತ್ತು ಮಧ್ಯವರ್ತಿಗಳ ಜಾಲದ ಬಗ್ಗೆ ಹೆಚ್ಚಿನ ಸುಳಿವು ನೀಡುವ ಸಾಧ್ಯತೆ ಇದೆ.

ರೆಸಾರ್ಟ್‌ಗಳಲ್ಲಿ ಸ್ಪೆಷಲ್‌ ಪರೀಕ್ಷೆ?:
ಈ ಪ್ರಕರಣದ ಅತ್ಯಂತ ಗಂಭೀರ ಅಂಶಗಳಲ್ಲಿ ಒಂದಾಗಿ ರಹಸ್ಯ ಸ್ಥಳಗಳಲ್ಲಿ ಅಭ್ಯರ್ಥಿಗಳನ್ನು ಇರಿಸಿ ಪರೀಕ್ಷೆಗೆ ಸಿದ್ಧಪಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಿಐಡಿ ತನಿಖೆಯ ಪ್ರಕಾರ, ಹಣ ಪಾವತಿಸಿದ್ದರೆಂದು ಶಂಕಿಸಲಾದ ಕೆಲವು ಅಭ್ಯರ್ಥಿಗಳನ್ನು ಬೆಂಗಳೂರಿನ ಡೆವಣಹಳ್ಳಿ ಪ್ರದೇಶ, ತುಮಕೂರಿನ ದೇವರಾಯನದುರ್ಗ ಹಾಗೂ ಆಂಧ್ರಪ್ರದೇಶದ ಸ್ಥಳಗಳಿಗೆ ಕರೆದೊಯ್ಯಲಾಗಿತ್ತು ಎಂಬ ಮಾಹಿತಿ ಹೊರಬಂದಿದೆ. ಅಲ್ಲಿ ಅವರಿಗೆ ತರಬೇತಿ ನೀಡಲಾಗಿತ್ತು ಮತ್ತು ನಂತರ ಪರೀಕ್ಷಾ ಕೇಂದ್ರಗಳಿಗೆ ಕರೆದೊಯ್ಯಲಾಗುತ್ತಿತ್ತು ಎಂದು ವರದಿಯಾಗಿದೆ.

RELATED ARTICLES
spot_img

Latest News