ಬೆಂಗಳೂರು, ಸೆ.2- ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮುಖಚರ್ಯೆ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೊಳಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಬಿಎ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳು ಹಾಗೂ ವಿವಿಧ ಯೋಜನೆಗಳ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಮಾದರಿಯನ್ನು ಪಾಲಿಕೆ ಶಾಲೆಗಳಲ್ಲೂ ಅಳವಡಿಸಿಕೊಳ್ಳುವಂತೆ ಶಿಕ್ಷಣ ವಿಭಾಗದ ವಿಶೇಷ ಆಯುಕ್ತರಿಗೆ ನಿರ್ದೇಶನ ನೀಡಿದರು.
ಪಾಲಿಕೆ ಶಾಲಾ ಮಕ್ಕಳಿಗೆ ಸಮವಸ್ತ್ರಗಳನ್ನು ನಿಗದಿತ ಸಮಯದಲ್ಲಿ ವಿತರಿಸಬೇಕು. ಶಾಲಾ-ಕಾಲೇಜುಗಳ ಶೌಚಾಲಯಗಳು ಸಮರ್ಪಕವಾಗಿರಬೇಕು. ಅಗತ್ಯವಿದ್ದಲ್ಲಿ ಸಿಎಸ್ಆರ್ ಅನುದಾನ ಬಳಸಿ ಶೌಚಾಲಯ ನಿರ್ಮಿಸಿ, ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು 175 ಪಾಲಿಕೆ ಶಿಕ್ಷಣ ಸಂಸ್ಥೆಗಳಿದ್ದು, 22,210 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 115 ಖಾಯಂ ಹಾಗೂ 841 ಅತಿಥಿ ಶಿಕ್ಷಕರು ಸೇರಿದಂತೆ 956 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.
ವೈಟ್ ಟಾಪಿಂಗ್ ಕಾಮಗಾರಿಗೆ ವೇಗ:ನಗರದಲ್ಲಿ 1,700 ಕೋಟಿ ವೆಚ್ಚದಲ್ಲಿ 120.60 ಕಿ.ಮೀ ಉದ್ದದ 117 ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, 61.43 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಇರುವ 59.26 ಕಿ.ಮೀ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರು. ರಸ್ತೆ ಅಭಿವೃದ್ಧಿ ವೇಳೆ ಪಾದಚಾರಿ ಮಾರ್ಗಗಳನ್ನು ಅತಿಯಾಗಿ ಎತ್ತರಿಸದೆ, ವೀಲ್ಚೇರ್ಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಿರ್ಮಿಸಬೇಕು. ಮರಗಳ ಸುತ್ತ ಗ್ರಾಸ್ ಪೇವರ್ ಬ್ಲಾಕ್ಗಳನ್ನು ಅಳವಡಿಸಬೇಕು ಎಂದು ನಿರ್ದೇಶಿಸಿದರು.
ಅಧಿಕಾರಿಗಳಿಗೆ ತರಾಟೆ: ಹೊರವಲಯ ರಸ್ತೆಗಳ ಹೈಡೆನ್ಸಿಟಿ ಕಾರಿಡಾರ್ ಕಾಮಗಾರಿಗಳಲ್ಲಿ ಪ್ರತಿ 20 ಮೀಟರ್ಗೆ ವಿದ್ಯುತ್ ಕಂಬ ಅಳವಡಿಸಬೇಕಿದ್ದರೂ, ಕೆಲವೆಡೆ ಹಳೆಯ ಹಾಗೂ ಹೊಸ ಕಂಬಗಳನ್ನು ಸೇರಿಸಿ 5ರಿಂದ 10 ಮೀಟರ್ ಅಂತರದಲ್ಲೇ ಕಂಬಗಳನ್ನು ಹಾಕಿರುವುದಕ್ಕೆ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು. ಇದು ಸಾರ್ವಜನಿಕರ ಹಿತಕ್ಕಾಗಿ ಮಾಡುತ್ತಿರುವ ಕಾಮಗಾರಿಯೇ ಅಥವಾ ಗುತ್ತಿಗೆದಾರರಿಗೆ ಬಿಲ್ ಪಾವತಿಸುವ ಉದ್ದೇಶದಿಂದ ಮಾಡುತ್ತಿರುವ ಕಾಮಗಾರಿಯೇ? ಎಂದು ಪ್ರಶ್ನಿಸಿದ ಅವರು, ಹೊಸ ಕಂಬ ಅಳವಡಿಸುವಾಗ ಹಳೆಯ ಕಂಬಗಳನ್ನು ತೆರವುಗೊಳಿಸಿ ಏಕರೂಪದ ವಿನ್ಯಾಸದ ಕಂಬಗಳನ್ನು ಅಳವಡಿಸಬೇಕು ಎಂದರು.
ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೇರಿದಂತೆ ವಿವಿಧ ನಗರ ಪಾಲಿಕೆಗಳ ಆಯುಕ್ತರು, ವಿಶೇಷ ಆಯುಕ್ತರು, ಎಂಜಿನಿಯರಿಂಗ್, ಆರೋಗ್ಯ, ನಗರ ಯೋಜನೆ ಹಾಗೂ ತೋಟಗಾರಿಕಾ ವಿಭಾಗದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
