ಮಂಗಳೂರು, ಸೆ.18- ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮರುನಾಮಕರಣ ಮಾಡಲು, ಕರಾವಳಿ ಪ್ರವಾಸೋದ್ಯಮ ನೀತಿ ಹಾಗೂ ಮಂಗಳೂರಿನಲ್ಲಿ ಐಟಿ ಪಾರ್ಕ್ ನಿರ್ಮಾಣ ಸೇರಿದಂತೆ ಹಲವಾರು ಮಹತ್ವದ ಯೋಜನೆಗಳ ಕುರಿತು ಮಂಗಳೂರಿನಲ್ಲಿಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಕರಾವಳಿ ಭಾಗದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಪ್ರದೇಶದ ಬಂದರು, ದ್ವೀಪ, ಪ್ರವಾಸೋದ್ಯಮ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಮಂಗಳೂರು, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಲವು ಮಹತ್ವದ ಯೋಜನೆಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಕೈಗೊಳ್ಳಲು ಅನುಮೋದನೆ ನೀಡಿದೆ.
2026ನೇ ಸಾಲಿನ ಸಚಿವ ಸಂಪುಟದ 21ನೇ ಸಭೆಯಲ್ಲಿ ಈ ಕುರಿತು ಹಲವು ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲಾಗಿದೆ. ವಿಶೇಷವಾಗಿ ಬಂದರು ಮತ್ತು ದ್ವೀಪಗಳ ಅಭಿವೃದ್ಧಿ, ಪ್ರವಾಸೋದ್ಯಮ ಮೂಲಸೌಕರ್ಯಗಳ ಹಾಗೂ ಹಡಗು ನಿರ್ಮಾಣಕ್ಕೆ ಸಂಬಂಧಿಸಿದ ಯೋಜನೆಗಳು ಗಮನ ಸೆಳೆದಿವೆ.
ಮಂಗಳೂರಿನಲ್ಲಿರುವ ಗುರುಪುರ ನದಿ ದ್ವೀಪಗಳನ್ನು ಪಿಪಿಪಿ ಮಾದರಿಯಲ್ಲಿ, ಡಿ.ಬಿ.ಎಫ್.ಒ.ಟಿ ಆಧಾರದ ಮೇಲೆ ಸುಮಾರು 125.43 ಕೋಟಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಭಟ್ಕಳ ಮತ್ತು ಹೊನ್ನಾವರ ತಾಲೂಕುಗಳ ವ್ಯಾಪ್ತಿಯಲ್ಲಿರುವ 7 ದ್ವೀಪಗಳನ್ನು ಸುಮಾರು 307.71 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದೆ.

ಮಂಗಳೂರಿನ ಲೈಟ್‌ಹೌಸ್ (ದೀಪಸ್ತಂಭ) ಪ್ರದೇಶದ ಸುತ್ತಮುತ್ತ ಪ್ರವಾಸೋದ್ಯಮ ಮತ್ತು ಆತಿಥ್ಯ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಯೋಜನೆಯನ್ನು 60.34 ಕೋಟಿ ರೂ.ವೆಚ್ಚದಲ್ಲಿ ಮಾಡಲಾಗುತ್ತಿದೆ.
ಪ್ರಮುಖವಾಗಿ ಉತ್ತರ ಕನ್ನಡ ಜಿಲ್ಲೆಯ ಮಂಕಿ ಬಂದರಿನಲ್ಲಿ ಬಹುಉದ್ದೇಶಿತ ಬಂದರು ಹಾಗೂ ಹಡಗು ನಿರ್ಮಾಣ ಅಂಗಳ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಡಿ.ಬಿ.ಎಫ್.ಒ.ಟಿ ಮಾದರಿಯ ಈ ಯೋಜನೆಯ ಅಂದಾಜು ವೆಚ್ಚ 6,925 ಕೋಟಿ ರೂಪಾಯಿ ಎಂದು ಹೇಳಲಾಗಿದೆ.
ಉಡುಪಿ ಜಿಲ್ಲೆಯ ಅಯಬಾ, ದರಿಯಾ ಬಹದ್ದೂರ್ ಗಢ ಹಾಗೂ ಮಲ್ಪೆ ದ್ವೀಪಗಳನ್ನು ಪರಿಸರ ಪ್ರವಾಸೋದ್ಯಮ ತಾಣಗಳಾಗಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ. ಇದಕ್ಕಾಗಿ ಸುಮಾರು 279.03 ಕೋಟಿ ರೂ.ಗಳ ವೆಚ್ಚ ಅಂದಾಜಿಸಲಾಗಿದೆ.
ಕಾರವಾರ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಯ ವೆಚ್ಚವನ್ನು 98.24 ಕೋಟಿಯಿಂದ 250.05 ಕೋಟಿ ರೂ.ಗೆ ಹೆಚ್ಚಿಸಿ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ರಸ್ತೆ ಹಾಗೂ ಸೇತುವೆ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಮಂಗಳೂರು, ಮೂಡುಬಿದ್ರೆ, ಬಂಟ್ವಾಳ ಸೇರಿದಂತೆ ವಿವಿಧ ಪ್ರದೇಶಗಳ ರಸ್ತೆ ಸಂಪರ್ಕ ಸುಧಾರಣೆಗೆ ಒಟ್ಟು ಹಲವು ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದ ಒಳನಾಡು ಜಲಸಾರಿಗೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಕರ್ನಾಟಕದ ಒಳನಾಡು ಹಡಗುಗಳ (ದಂಡನೆ ಮತ್ತು ಮೇಲ್ಮನವಿ) ನಿಯಮಗಳು, 2026ಕ್ಕೆ ಅನುಮೋದನೆ ನೀಡುವ ಪ್ರಸ್ತಾವನೆಗೂ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಕೇಂದ್ರ ಸರ್ಕಾರದ ಯೋಜನೆಯಡಿ ರಾಜ್ಯದಲ್ಲಿ ಹೊಸದಾಗಿ ಆರಂಭಿಸಲಾಗಿರುವ ಗ್ರಾಮ ಗ್ರಂಥಾಲಯಗಳಿಗೆ ಕಂಪ್ಯೂಟರ್ ಮತ್ತು ಯುಪಿಎಸ್ ಸೇರಿದಂತೆ ಅಗತ್ಯ ಯಂತ್ರೋಪಕರಣಗಳನ್ನು ಖರೀದಿಸಿ ಒದಗಿಸಲು 57.15 ಕೋಟಿ ರೂ.ಗಳ ಅಂದಾಜು ವೆಚ್ಚದ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿ ಮಳವೂರು ಸೇರಿದಂತೆ 10 ಗ್ರಾಮಗಳಿಗೆ 11.40 ಕೋಟಿ ವೆಚ್ಚದಲ್ಲಿ, ಬಂಟ್ವಾಳ ತಾಲೂಕಿನ ಕರೋಪಾಡಿ ಮತ್ತು ಇತರೆ 79 ಜನವಸತಿಗಳಿಗೆ 12.36 ಕೋಟಿ ರೂಪಾಯಿ ವೆಚ್ಚದಲ್ಲಿ, ಸಂಗಬೆಟ್ಟು ಮತ್ತು ಇತರೆ 65 ಜನವಸತಿಗಳಿಗೆ 14.90 ಕೋಟಿ ರೂಪಾಯಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಎರಡು ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಒಟ್ಟಾರೆ, ಸಚಿವ ಸಂಪುಟದ ಈ ನಿರ್ಧಾರಗಳಲ್ಲಿ ಕರಾವಳಿ ಕರ್ನಾಟಕದ ಬಂದರು, ದ್ವೀಪ, ಪ್ರವಾಸೋದ್ಯಮ, ವಿಮಾನ ನಿಲ್ದಾಣ, ರಸ್ತೆ ಸಂಪರ್ಕ ಹಾಗೂ ಕುಡಿಯುವ ನೀರಿನ ಮೂಲಸೌಕರ್ಯಕ್ಕೆ ಸಂಬಂಧಿಸಿದ ಹಲವು ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ.
