Homeರಾಷ್ಟ್ರೀಯಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಇವಿ ಕ್ರಾಂತಿ : ಹೆಚ್ಡಿಕೆ

ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಇವಿ ಕ್ರಾಂತಿ : ಹೆಚ್ಡಿಕೆ

ನವದೆಹಲಿ,ಸೆ.18- ಎಲೆಕ್ಟ್ರಿಕ್‌ ವಾಹನ ಕ್ಷೇತ್ರವು ಸಾಮಾಜಿಕ ಸಬಲೀಕರಣ ಮತ್ತು ಸಾಮಾಜಿಕ ಪರಿವರ್ತನೆಗೆ ಬಹುದೊಡ್ಡ ಕೊಡುಗೆ ನೀಡುತ್ತಿದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.ನವದೆಹಲಿಯ ವಿಜ್ಞಾನ ಭವನದಲ್ಲಿ ಬೃಹತ್‌ ಕೈಗಾರಿಕೆ ಸಚಿವಾಲಯ ವತಿಯಿಂದ ಹಮಿಕೊಂಡಿದ್ದ ಸೇವಾಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿದರು.

ಸ್ವಚ್ಛ ಸಾರಿಗೆ ನರೇಂದ್ರ ಮೋದಿ ಅವರ ಪರಿಕಲ್ಪನೆ. ಸಾಮೂಹಿಕ ಮತ್ತು ಸರಕು ಸಾಗಾಣೆ ಅಷ್ಟೇ ಅಲ್ಲದೆ ಸಾರ್ವಜನಿಕರ ವೈಯಕ್ತಿಕ ಸಾರಿಗೆ ವಿಷಯದಲ್ಲಿಯೂ ಮಾಲಿನ್ಯಮುಕ್ತ ವಾತಾವರಣ ಸೃಷ್ಟಿ ಮಾಡಬೇಕು ಎನ್ನುವುದು ಅವರ ಹೆಗ್ಗುರಿಯಾಗಿದೆ ಎಂದರು.ವಾಣಿಜ್ಯ ಸಾರಿಗೆ ವಲಯದಲ್ಲಿಯೂ ಎಲೆಕ್ಟ್ರಿಕ್‌ ವಾಹನಗಳಿಂದ ದೊರೆಯುತ್ತಿರುವ ಪ್ರಯೋಜನಗಳು ದೊಡ್ಡ ಪ್ರಮಾಣದಲ್ಲಿವೆ ಎಂದು ಒತ್ತಿ ಹೇಳಿದ ಸಚಿವ ಕುಮಾರಸ್ವಾಮಿ ಅವರು; ಇ-ಬಸ್ಸುಗಳು ಮತ್ತು ಇ-ಟ್ರಕ್‌ಗಳ ಬಳಕೆಯು ಹೆಚ್ಚು ಲಾಭದಾಯಕವಾಗಿದೆ ಮತ್ತು ಈ ಮೂಲಕ ಪರಿಸರಕ್ಕೆ ಪೂರಕವಾದ ವ್ಯವಸ್ಥೆಯು ಸೃಷ್ಟಿಯಾಗಿದೆ. ಇಂತಹ ವಾಹನಗಳ ನಿರ್ವಾಹಕರು ಹೆಚ್ಚುಹೆಚ್ಚು ಲಾಭ ಗಳಿಸುತ್ತಿದ್ದಾರೆ ಎಂದು ಹೇಳಿದರು.

2047ರ ಹೊತ್ತಿಗೆ ಭಾರತವು ಅಭಿವೃದ್ಧಿ ಹೊಂದಿದ ಭಾರತವಾಗಬೇಕು ಎಂಬುದು ನರೇಂದ್ರ ಮೋದಿಯವರ ಕನಸು. ಈ ದಿಸೆಯಲ್ಲಿ ಜಾಗತಿಕ ಸ್ಪರ್ಧೆಯ ಸವಾಲುಗಳನ್ನು ಎದುರಿಸಲು ನಾವು ಸ್ವಚ್ಛ ಸಾರಿಗೆಗೆ ಉತ್ತೇಜಿನ ನೀಡುವ ಉದ್ದೇಶದಿಂದ ಎಲೆಕ್ಟ್ರಿಕ್‌ ವಾಹನಗಳ ಕ್ಷೇತ್ರಕ್ಕೆ ಬಲ ತುಂಬುತ್ತಿದ್ದೇವೆ ಎಂದು ಹೇಳಿದರು.

ಪಿಎಂ ಡ್ರೈವ್‌ ಮತ್ತು ಎಲೆಕ್ಟ್ರಿಕ್‌ ಚಾರ್ಜಿಂಗ್‌ ಕೇಂದ್ರಗಳ ಮೂಲಸೌಕರ್ಯಗಳನ್ನು ಸೃಷ್ಟಿ ಮಾಡಲು ಈಗಾಗಲೇ 11,900 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಎಲೆಕ್ಟ್ರಿಕ್‌ ಆಂಬ್ಯುಲೆನ್‌್ಸಗಳು ಮತ್ತು ಟ್ರಕ್‌ಗಳ ಜತೆಗೆ ಸುಮಾರು 24 ಲಕ್ಷ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು, 5 ಲಕ್ಷ ಎಲೆಕ್ಟ್ರಿಕ್‌ ತ್ರಿಚಕ್ರ ವಾಹನಗಳು ಮತ್ತು 14,000 ಎಲೆಕ್ಟ್ರಿಕ್‌ ಬಸ್‌‍ಗಳನ್ನು ಬೆಂಬಲಿಸಲು ಪಿಎಂ ಇ ಡ್ರೈವ್‌ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದರು.

ಚಾರ್ಜಿಂಗ್‌ ಮೂಲಸೌಕರ್ಯವು ಕೇಂದ್ರ ಸರಕಾರದ ಮತ್ತೊಂದು ಪ್ರಮುಖ ಭಾಗವಾಗಿದೆ. ಪೇಮ್‌-2 ಅಡಿಯಲ್ಲಿ ಇವಿ ಚಾರ್ಜಿಂಗ್‌ ಮೂಲಸೌಕರ್ಯಕ್ಕಾಗಿ 1,000 ಕೋಟಿ ರೂ. ಹಂಚಿಕೆ ಮಾಡಿದ ನಂತರ, ಸಾರ್ವಜನಿಕ ಚಾರ್ಜಿಂಗ್‌ ಕೇಂದ್ರಗಳಿಗೆ ಪಿಎಂ ಇ ಡ್ರೈವ್‌ ಅಡಿ 2,000 ಕೋಟಿ ರೂ. ಮೀಸಲಿಡಲಾಗಿದೆ ಎಂದರು.

ಜತೆಗೆ, ಸರಕಾರದ ನೀತಿ ಬೆಂಬಲವು ಬೇಡಿಕೆ ಸೃಷ್ಟಿ ಮತ್ತು ದೇಶೀಯ ಉತ್ಪಾದನೆಗೆ ಚಾರ್ಜಿಂಗ್‌ ಮೂಲಸೌಕರ್ಯವನ್ನು ಮೀರಿ ವಿಸ್ತರಿಸುತ್ತದೆ. 25,938 ಕೋಟಿ ರೂ. ವೆಚ್ಚದಲ್ಲಿ ಆಟೋಮೊಬೈಲ್‌ಗಳಿಗಾಗಿ ಉತ್ಪಾದನೆ ಪ್ರೋತ್ಸಾಹಕ ಯೋಜನೆಯು ಸುಧಾರಿತ ಆಟೋಮೋಟಿವ್‌ ತಂತ್ರಜ್ಞಾನಗಳ ತಯಾರಿಕೆಯನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು. ಬೃಹತ್‌ ಕೈಗಾರಿಕೆ ಸಚಿವಾಲಯದ ಕಾರ್ಯದರ್ಶಿ ಕಮ್ರನ್‌ ರಿಜ್ವಿ, ಹೆಚ್ಚುವರಿ ಕಾರ್ಯದರ್ಶಿ ಹನೀಫ್‌ ಖುರೇಷಿ ಸೇರಿದಂತೆ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

RELATED ARTICLES
spot_img

Latest News