ಬೆಂಗಳೂರು,ಸೆ.18- ಹಬ್ಬದ ಸಮಯದಲ್ಲಿ ಕೆಲವು ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ಹೆಚ್ಚುವರಿ ದರ ವಸೂಲಿ ಮಾಡಿರುವ ಬಗ್ಗೆ ಆರ್‌ಟಿಒ ಅಧಿಕಾರಿಗಳು ವ್ಯಾಪಕ ಕಾರ್ಯಾಚರಣೆ ನಡೆಸಿ 3,756 ಪ್ರಕರಣಗಳನ್ನು ದಾಖಲಿಸಿಕೊಂಡು 33 ಬಸ್‌ಗಳನ್ನು ವಶಕ್ಕೆ ಪಡೆದಿದ್ದಾರೆ.ಪ್ರಮುಖವಾಗಿ ಗಣೇಶ ಚತುರ್ಥಿ ಹಬ್ಬದ ಹಿನ್ನಲೆಯಲ್ಲಿ ಖಾಸಗಿ ಬಸ್‌ಗಳು ಪ್ರಯಾಣಿಕ ರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿವೆ ಎಂಬ ದೂರುಗಳು ಬಂದಿದ್ದವು.
ಈ ಹಿನ್ನಲೆಯಲ್ಲಿ ಆರ್‌ಟಿಓ ಅಧಿಕಾರಿಗಳು ಖಾಸಗಿ ಬಸ್‌ಗಳ ವಿರುದ್ಧ ಕಾರ್ಯಾಚರಣೆಗಿಳಿದು ಸೆ.11 ರಿಂದ 15 ರವರೆಗೆ ಒಟ್ಟು 14,987 ಖಾಸಗಿ ಬಸ್‌ಗಳನ್ನು ಪರಿಶೀಲಿಸಿದ್ದಾರೆ.ತಪಾಸಣೆ ಸಂದರ್ಭದಲ್ಲಿ ಹಲವು ಖಾಸಗಿ ಬಸ್‌ಗಳು ನಿಯಮ ಉಲ್ಲಂಘನೆ ಮಾಡಿರುವುದು ಪತ್ತೆಯಾಗಿದೆ. ಪರವಾನಗಿ ನಿಯಮಗಳನ್ನು ಮೀರಿ ಕಾರ್ಯನಿರ್ವಹಿಸುತ್ತಿದ್ದ ಬಸ್‌ಗಳು, ತೆರಿಗೆ ವಂಚನೆ ಮಾಡಿದ್ದ ಬಸ್‌ಗಳು ಮತ್ತು ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದ ಬಸ್‌ಗಳ ವಿರುದ್ಧ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ.
ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಸಲು ಕೆಲ ಪ್ರಯಾಣಿಕರಿಂದ ಏಳು ಸಾವಿರದ ವರೆಗೆ ದರ ವಸೂಲಿ ಮಾಡಲಾಗಿದೆ ಎಂಬ ಸಾರ್ವಜನಿಕರಿಂದ ಬಂದ ದೂರುಗಳ ಆಧಾರದ ಮೇಲೆ ಆರ್‌ಟಿಓ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಈ ಖಾಸಗಿ ಬಸ್‌ಗಳು ಹಬ್ಬದ ಸಂದರ್ಭಗಳಲ್ಲಿ ಹೆಚ್ಚುವರಿ ದರ ವಸೂಲಿ ಮಾಡಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತವೆ, ಹೀಗಾಗಿ ಆರ್‌ಟಿಓ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 73.6 ಲಕ್ಷ ಹಣ ಸಂಗ್ರಹವಾಗಿದ್ದು,ಇದರಲ್ಲಿ 40.3 ಲಕ್ಷ ದಂಡ ಸಂಗ್ರಹಿಸಲಾಗಿದೆ.
ಉಳಿದ ಹಣ ವಿವಿಧ ರೀತಿಯ ಶುಲ್ಕಗಳು ಮತ್ತು ಇತರೆ ವಸೂಲಿಗಳಿಂದ ಬಂದಿದೆ. ಜಪ್ತಿ ಮಾಡಿದ 33 ಬಸ್‌ಗಳನ್ನು ಸಂಬಂಧಪಟ್ಟ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ. ಸಾರ್ವಜನಿಕರಿಂದ ಬಂದ ದೂರುಗಳನ್ನು ಸಂಬಂಧಪಟ್ಟ ನೋಂದಣಿ ಪ್ರಾಧಿಕಾರಗಳಿಗೆ ರವಾನಿಸಲಾಗಿದೆ.
