ಬೆಂಗಳೂರು,ಸೆ.18- ರಾಜ್ಯದಲ್ಲಿ ಆಸ್ತಿ ತೆರಿಗೆ ಪಾವತಿದಾರರ ಮೇಲೆ ಸರ್ಕಾರ ಹೊಸದಾಗಿ ಸಾಫ್ಟ್ ವೇರ್ ಶುಲ್ಕದ ಹೊರೆ ಹೊರಿಸಿರುವುದು ಈಗ ಭಾರೀ ರಾಜಕೀಯ ಕಾಳಗಕ್ಕೆ ಕಾರಣವಾಗಿದೆ. ವಸತಿ ಆಸ್ತಿಗಳಿಗೆ ಪ್ರತಿ ಸ್ವತ್ತಿಗೆ 200 ಹಾಗೂ ವಾಣಿಜ್ಯ ಆಸ್ತಿಗಳಿಗೆ 1,000 ಸಾಫ್ಟ್ ವೇರ್ ವೆಚ್ಚವನ್ನು ವಿಧಿಸಿರುವುದನ್ನು ಖಂಡಿಸಿ ಪ್ರತಿಪಕ್ಷ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಸರ್ಕಾರದ ತಂತ್ರಜ್ಞಾನ ವ್ಯವಸ್ಥೆ ಮತ್ತು ತಂತ್ರಾಂಶಗಳ ಉನ್ನತೀಕರಣಕ್ಕೆ ಸಾರ್ವಜನಿಕರ ಜೇಬಿನಿಂದ ಏಕಪಕ್ಷೀಯವಾಗಿ ಹಣ ವಸೂಲಿ ಮಾಡುತ್ತಿರುವುದು ಎಷ್ಟು ಸರಿ? ಎಂದು ಬಿಜೆಪಿ ಗಂಭೀರವಾಗಿ ಪ್ರಶ್ನಿಸಿದೆ.
ವಿಧಿಸಲಾಗಿರುವ ಈ ಶುಲ್ಕದ ಸಂಪೂರ್ಣ ವಿವರ (ಬ್ರೇಕ್ ಅಪ್) ಮತ್ತು ಹೊಣೆಗಾರಿಕೆಯನ್ನು ಸಾರ್ವಜನಿಕರ ಮುಂದಿಡಬೇಕು. ಡಿಜಿಟಲೀಕರಣ ಮತ್ತು ಆಡಳಿತ ಸುಧಾರಣೆ ಹೆಸರಿನಲ್ಲಿ ನಾಗರಿಕರ ಮೇಲೆ ಅನಗತ್ಯ ಆರ್ಥಿಕ ಹೊರೆ ಹೇರಲಾಗುತ್ತಿದ್ದು, ತಕ್ಷಣವೇ ಈ ಶುಲ್ಕವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.
ಸರ್ಕಾರದ ಈ ನೂತನ ನಿರ್ಧಾರವನ್ನು ಹಿಂದಿನ ಸರಣಿ ತೆರಿಗೆ ಮತ್ತು ದರ ಏರಿಕೆಗಳೊಂದಿಗೆ ಜೋಡಿಸಿ ಸಾರ್ವಜನಿಕ ವಲಯದಲ್ಲೂ ಅಸಮಾಧಾನ ವ್ಯಕ್ತವಾಗುತ್ತಿದೆ.ಗ್ಯಾರಂಟಿ ಯೋಜನೆಗಳ ನಿರ್ವಹಣೆಯ ನೆಪದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಮತ್ತು ವಿದ್ಯುತ್ ಶುಲ್ಕಗಳನ್ನು ಹೆಚ್ಚಿಸಲಾಗಿತ್ತು.ಇತ್ತೀಚೆಗಷ್ಟೇ ರಾಜ್ಯಾದ್ಯಂತ ಆಸ್ತಿ ಮಾರ್ಗಸೂಚಿ ದರಗಳನ್ನು ಹೆಚ್ಚಿಸುವ ಮೂಲಕ ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಹೊರೆ ಹೆಚ್ಚಿಸಲಾಗಿತ್ತು.
ಇದೀಗ ಪಾಲಿಕೆಗಳು ಮತ್ತು ಸ್ಥಳೀಯ ಸಂಸ್ಥೆಗಳ ಇ-ಆಡಳಿತ ಆಪ್‌ಗಳು ಹಾಗೂ ತಂತ್ರಾಂಶಗಳ ನಿರ್ವಹಣೆಗೆ ತೆರಿಗೆದಾರರೇ ಹಣ ನೀಡಬೇಕು ಎನ್ನುವ ಹೊಸ ನಿಯಮ ತಂದಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ.
ಒಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ, ಯಾವುದೇ ಮುನ್ಸೂಚನೆ ಇಲ್ಲದೆ ಆಸ್ತಿ ತೆರಿಗೆಯಲ್ಲಿ ತಂತ್ರಜ್ಞಾನದ ಹೆಸರಿನಲ್ಲಿ ಸಾಫ್‌್ಟವೇರ್ ಶುಲ್ಕ ಸೇರಿಸಿರುವುದು ಗಾಯದ ಮೇಲೆ ಬಿಸಿ ತುಪ್ಪ ಸುರಿದಂತಾಗಿದೆ. ಸರ್ಕಾರ ಈ ಜನವಿರೋಧಿ ನಿರ್ಧಾರವನ್ನು ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ ವಿರೋಧ ಪಕ್ಷಗಳು ಎಚ್ಚರಿಸಿವೆ.
ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿಯ ಪ್ರಶ್ನೆಗಳು
ಹೊಸ ಶುಲ್ಕದ ಕುರಿತು ಬಿಜೆಪಿ ಮುಖ್ಯವಾಗಿ ಮೂರು ಅಂಶಗಳನ್ನು ಮುಂದಿಟ್ಟಿದ್ದು, 200 ಮತ್ತು 1,000 ಶುಲ್ಕ ನಿಗದಿಪಡಿಸಲು ಬಳಸಿದ ವೆಚ್ಚದ ಲೆಕ್ಕಾಚಾರವೇನು? ಸಾಫ್‌್ಟವೇರ್ ಅಭಿವೃದ್ಧಿ, ನಿರ್ವಹಣೆ ಮತ್ತು ತಾಂತ್ರಿಕ ಸೇವೆಗೆ ಒಟ್ಟು ಎಷ್ಟು ಹಣ ಖರ್ಚಾಗುತ್ತಿದೆ? ಈ ವೆಚ್ಚವನ್ನು ಸಾಮಾನ್ಯ ಆಡಳಿತ ವೆಚ್ಚವಾಗಿ ಭರಿಸುವ ಬದಲು ತೆರಿಗೆದಾರರ ಮೇಲೆ ಪ್ರತ್ಯೇಕ ಶುಲ್ಕವಾಗಿ ಹಾಕಿರುವುದಕ್ಕೆ ಕಾರಣವೇನು? ಸರ್ಕಾರ ಬಹಿರಂಗಪಡಿಸಬೇಕು ಅಥವಾ ಶುಲ್ಕವನ್ನು ಹಿಂಪಡೆಯಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
