ಬೆಂಗಳೂರು,ಸೆ.19-ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಅತೀ ವೇಗವಾಗಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಅಂಗಡಿಗೆ ಡಿಕ್ಕಿ ಹೊಡೆದು ನಂತರ ಕಾಂಪೌಂಡ್‌ಗೆ ಅಪ್ಪಳಿಸಿದ ಪರಿಣಾಮ ಇಬ್ಬರು ಎಂಜಿನಿಯರ್ ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಇಂದು ಬೆಳಗಿನ ಜಾವ ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಚಿಕ್ಕಮಗಳೂರಿನ ನಿವಾಸಿಗಳಾದ ವಚನ್ (20) ಮತ್ತು ಕ್ರಿಶಾಂತ್ (20)ಮೃತಪಟ್ಟ ಎಂಜಿನಿಯರಿಂಗ್ ವಿದ್ಯಾರ್ಥಿಗಳು.ವಚನ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಹಾಗೂ ಕ್ರಿಶಾಂತ್ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದ ಇವರಿಬ್ಬರು ಸ್ನೇಹಿತರಾಗಿದ್ದು, ದಿಬ್ಬೂರಹಳ್ಳಿಯಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ಪಡೆದು ನೆಲೆಸಿದ್ದರು.
ರಾಯಲ್ ಎನ್‌ಫೀಲ್ಡ್ ಬೈಕ್ ತೆಗೆದುಕೊಂಡು ರಾತ್ರಿ ಹೊರಗೆ ಹೋಗಿದ್ದ ಇವರಿಬ್ಬರು ರಾಜಾನುಗುಂಟೆ ಕಡೆಯಿಂದ ರೂಂ ಗೆ ಹೋಗುತ್ತಿದ್ದಾಗ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ಕಾಕೋಳು ರಸ್ತೆಯ ಇಟ್ಕಲ್‌ಪುರ ಗೇಟ್ ಸಮೀಪ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಅಂಗಡಿಗೆ ಡಿಕ್ಕಿ ಹೊಡೆದು ನಂತರ ಕಾಂಪೌಂಡ್ ಗೋಡೆಗೆ ಅಪ್ಪಳಿಸಿ ಬಿದ್ದಿದೆ.
ಪರಿಣಾಮ ಇವರಿಬ್ಬರು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.ಸುದ್ದಿ ತಿಳಿದು ಯಲಹಂಕ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ಅತೀ ವೇಗದ ಚಾಲನೆಯಿಂದಾಗಿ ಈ ಅಪಘಾತ ಸಂಭವಿಸಿದೆ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
