ಬೆಂಗಳೂರು, ಸೆ.21- ಯಾವುದೇ ನ್ಯಾಯಾಲಯದ ಆದೇಶಗಳಿಲ್ಲದೆ ಇದ್ದರೂ ಈ ಮೊದಲು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಮಾಧವ ಗಾಡ್ಗಿಲ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದರಿಂದಾಗಿಯೇ ಇಂದು ಆತಂಕ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದರು.
ವಿಧಾನ ಸಭೆಯಲ್ಲಿ ಕಸ್ತೂರಿರಂಗನ್ ವರದಿಯ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಅರಣ್ಯ ಸಚಿವರಾಗಿದ್ದಾಗ ಸಮಿತಿ ರಚಿಸಲಾಗಿತ್ತು. ಅದಕ್ಕೆ ತಮಿಳುನಾಡು ಕೇರಳ, ಗುಜರಾತ್, ಗೋವಾ, ಕರ್ನಾಟಕ, ಮಹಾರಾಷ್ಟ್ರಗಳ ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಮಾಧವ ಗಾಡ್ಗಿಲ್ ಸಮಿತಿ ಅತ್ಯಂತ ಕಠಿಣ ಶಿಫಾರಸುಗಳನ್ನು ಮಾಡಿದ್ದು ಅದನ್ನು ಅನುಷ್ಠಾನಕ್ಕೆ ತರುವುದಾಗಿದ್ದರೆ, ಆರು ರಾಜ್ಯಗಳ 1500 ಕಿ.ಮೀ. ದೂರದ ಪಶ್ಚಿಮ ಘಟ್ಟ ಭಾಗದಲ್ಲಿನ ಒಂದು ಲಕ್ಷ ಚ.ಕಿ.ಮೀ. ಹೆಚ್ಚಿನ ಪ್ರದೇಶಗಳ, ಆರು ಕೋಟಿ ಜನರನ್ನು ಒಕ್ಕಲೆಬ್ಬಿಸಬೇಕಾಗುತ್ತದೆ. ಈ ವರದಿ ಸರಿ ಇಲ್ಲ ಎಂಬ ಪ್ರತಿಭಟನೆಗಳು ವ್ಯಕ್ತವಾದಾಗ ಕೇಂದ್ರ ಸರ್ಕಾರವೇ ಕಸ್ತೂರಿರಂಗನ್ ಅವರ ನೇತೃತ್ವದಲ್ಲಿ ಉನ್ನತ ಕಾರ್ಯ ನಿರ್ವಹಣಾ ಸಮಿತಿಯನ್ನು ರಚಿಸಿದೆ ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿ ಅವರ ಮಾಧವ ಗಾಡ್ಗಿಲ್ ಅವರ ವರದಿಯಲ್ಲಿನ ಕಠಿಣ ನಿಯಮಗಳನ್ನು ಸಡಿಲ ಗೊಳಿಸಿದೆ. ಸೂಕ್ಷ್ಮ ಅರಣ್ಯ ಪ್ರದೇಶ ವ್ಯಾಪ್ತಿಯನ್ನು 59,900 ಚ.ಕಿ.ಮೀ. ವ್ಯಾಪ್ತಿಗೆ ಕಡಿತ ಮಾಡಿದೆ. ಇದರಲ್ಲಿ ಜನವಸತಿ ಕೃಷಿ ಮತ್ತು ತೋಟಗಾರಿಕೆ ಪ್ರದೇಶಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ ಕೈಗಾರಿಕೆಗಳಿಗೆ ಕಠಿಣ ನಿರ್ಬಂಧ ಗಳಿವೆ ಎಂದು ವಿವರಿಸಿದರು.
ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಶೇ.40ರಷ್ಟು ಭೂಮಿಯನ್ನು ಉಳಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಗೋವಾದ ಗೋವಾ ಫೌಂಡೇಷನ್ ಎಂಬ ಸಂಸ್ಥೆ ಪರಿಸರ ರಕ್ಷಣೆ ವಿಚಾರದಲ್ಲಿ ಪ್ರಾಮಾಣಿಕವಾದ, ಪ್ರಬಲ ಹೋರಾಟ ನಡೆಸುತ್ತಿದೆ. ಪದೇಪದೇ ನ್ಯಾಯಾಲಯಗಳ ಮುಂದೆ ಹೋಗಿ ತೀರ್ಪುಗಳು ಹೊರಬೀಡುವಂತೆ ಮಾಡುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಅಸಹಾಯಕವಾಗುವಂತೆ ಮಾಡಲಾಗುತ್ತಿದೆ ಎಂದು ಹೇಳಿದರು. ಕಸ್ತೂರಿರಂಗನ್ ಸಮಿತಿ ವೈಮಾನಿಕ ಸಮೀಕ್ಷೆ ನಡೆಸಿದ್ದರಿಂದಾಗಿ ಕೃಷಿ ಬೆಳೆಗಳು, ತೋಟಗಾರಿಕೆ ಕೂಡ ಅರಣ್ಯದಂತೆ ಕಂಡಿದೆ. ಇದು ಹೆಚ್ಚಿನ ಅಪಾಯ ಉಂಟು ಮಾಡಿದೆ ಎಂದರು.
ಚರ್ಚೆಯ ನಡುವೆ ಸಚಿವ ಬಸವರಾಜ ರಾಯರೆಡ್ಡಿ ಮಧ್ಯ ಪ್ರವೇಶಿಸಿ ಮಾಧವ ಗಾಡ್ಗಿಲ್ ವರದಿಯನ್ನು ಆಗಿನ ಕೇಂದ್ರ ಸರ್ಕಾರ ಒಪ್ಪಿಲ್ಲ ಎಂದರು. ಬಿಜೆಪಿಯ ಆರಗ ಜ್ಞಾನದ ವರದಿಯನ್ನು ಒಪ್ಪಿಯೂ ಇಲ್ಲ ಹಾಗೆಯೇ ತಿರಸ್ಕರಿಸಿಯೂ ಇಲ್ಲ ಎಂದು ಸ್ಪಷ್ಟನೆ ನೀಡಿದರು. ಇದು ಕೆಲಕಾಲ ಚರ್ಚೆಗೆ ಕಾರಣವಾಯಿತು.
