ಶಿಡ್ಲಘಟ್ಟ, ಸೆ.6- ಶ್ರೀಕೃಷ್ಣ ಜನಾಷ್ಟಮಿ ಸಂಭ್ರಮದ ಸಿದ್ಧತೆಯಲ್ಲಿ ತೊಡಗಿದ್ದ ವೇಳೆ ವಿದ್ಯುತ್ ಅವಘಡ ಸಂಭವಿಸಿ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಶಿಡ್ಲಘಟ್ಟ ತಾಲ್ಲೂಕಿನ ವೈ.ಹುಣಸೇನಹಳ್ಳಿಯಲ್ಲಿ ನಡೆದಿದೆ. ಮೃತರನ್ನು ಚೇತನ್ (27) ಹಾಗೂ ಸಂತೋಷ್ (35) ಎಂದು ಗುರುತಿಸಲಾಗಿದೆ.
ಶ್ರೀಕೃಷ್ಣ ಜನಾಷ್ಟಮಿ ಹಿನ್ನೆಲೆಯಲ್ಲಿ ಗ್ರಾಮದ ವೇಣುಗೋಪಾಲಸ್ವಾಮಿ ನೂತನ ದೇವಸ್ಥಾನದಲ್ಲಿ ವಿಶೇಷ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತಿತ್ತು. ದೇವಸ್ಥಾನದ ಅಲಂಕಾರಕ್ಕಾಗಿ ಸೀರಿಯಲ್ ಸೆಟ್‌ಗಳ ವೈರ್‌ಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿತ್ತು.
ಈ ವೇಳೆ ಲೈಟಿಂಗ್‌ಗೆ ಬಳಸುತ್ತಿದ್ದ ವೈರ್‌ವೊಂದು ಜನರೇಟರ್ ಮೇಲೆ ಬಿದ್ದ ಪರಿಣಾಮ ಜನರೇಟರ್‌ನಲ್ಲಿ ವಿದ್ಯುತ್ ಪ್ರವಹಿಸಿದೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಜನರೇಟರ್ ಅನ್ನು ದೇವಸ್ಥಾನದ ಒಳಭಾಗಕ್ಕೆ ತಳ್ಳುತ್ತಿದ್ದ ಚೇತನ್ ಹಾಗೂ ಸಂತೋಷ್ ವಿದ್ಯುತ್ ಶಾಕ್‌ಗೆ ಒಳಗಾಗಿದ್ದಾರೆ.
ವಿದ್ಯುತ್ ಶಾಕ್‌ನ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಯಿತಾದರೂ, ಮಾರ್ಗಮಧ್ಯೆಯೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿದು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
