ಮೈಸೂರು, ಸೆ.6- ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿ ಆಕರ್ಷಣೆಯಾದ ಗಜಪಡೆಗೆ ಭಾರ ಹೊರುವ ತಾಲೀಮು ಆರಂಭವಾಗಿದೆ. ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಗಜಪಡೆಗೆ ಬೆಳಿಗ್ಗೆ ಹಾಗೂ ಸಂಜೆ ತಾಲೀಮು ನಡೆಸಲಾಗುತ್ತಿದ್ದು, ಇದೀಗ ಹಂತ ಹಂತವಾಗಿ ಭಾರ ಹೊರುವ ತರಬೇತಿ ನೀಡಲಾಗುತ್ತಿದೆ.
ಮೊದಲಿಗೆ ಮರಳಿನ ಮೂಟೆಗಳನ್ನು ಹೊರಿಸುವ ತಾಲೀಮು ನಡೆಯಲಿದೆ. ಬಳಿಕ ಮರದ ಅಂಬಾರಿ ಕಟ್ಟಿಕೊಂಡು ತಾಲೀಮು ನಡೆಸಲಾಗುತ್ತದೆ. ತಾಲೀಮು ವೇಳೆ ಮೂರು ಆನೆಗಳ ಮೇಲೆ ಅರಣ್ಯಾಧಿಕಾರಿಗಳು ವಿಶೇಷ ನಿಗಾ ವಹಿಸಿದ್ದು, ಈ ಪೈಕಿ ಅಂಬಾರಿ ಹೊರುವ ಆನೆ ಯಾವುದು ಎಂಬುದನ್ನು ಅಂತಿಮವಾಗಿ ನಿರ್ಧರಿಸಲಾಗುತ್ತದೆ.
ಇನ್ನು ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಆರೋಗ್ಯ ಹಾಗೂ ದೇಹದಾಢ್ಯತೆ ಕಾಪಾಡುವ ಉದ್ದೇಶದಿಂದ ವಿಶೇಷ ಪೌಷ್ಟಿಕ ಆಹಾರ ನೀಡುವ ಕಾರ್ಯ ನಿನ್ನೆಯಿಂದ ಆರಂಭವಾಗಿದೆ.ನಿನ್ನೆ ಏಕಲವ್ಯ ಆನೆಗೆ ವಿಶೇಷ ಹಬ್ಬದೂಟ ನೀಡುವ ಮೂಲಕ ಇತರೆ ಆನೆಗಳಿಗೂ ಪೌಷ್ಟಿಕ ಆಹಾರ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಬೇಯಿಸಿದ ಹೆಸರುಕಾಳು, ಉದ್ದಿನಕಾಳು, ಗೋಧಿ, ಕುಸಲಕ್ಕಿ ಜತೆಗೆ ಈರುಳ್ಳಿ, ಮೂಲಂಗಿ, ಸೌತೆಕಾಯಿ, ಕ್ಯಾರೆಟ್ ಸೇರಿದಂತೆ ವಿವಿಧ ತರಕಾರಿಗಳನ್ನು ಬಳಸಿ ತಯಾರಿಸಿದ ವಿಶೇಷ ಆಹಾರವನ್ನು ಆನೆಗಳಿಗೆ ಬೆಳಿಗ್ಗೆ ಮತ್ತು ಸಂಜೆ ನೀಡಲಾಗುತ್ತಿದೆ. ತಾಲೀಮು ನಡೆಸಿ ಆಯಾಸಗೊಂಡಿರುವ ಆನೆಗಳನ್ನು ತಂಪಾಗಿಸಲು ಅವಲಕ್ಕಿ ಹಾಗೂ ಮೊಸರು ನೀಡಲಾಗುತ್ತಿದೆ. ಪಶುವೈದ್ಯಾಧಿಕಾರಿಗಳ ಸೂಚನೆ ಮತ್ತು ಮಾರ್ಗದರ್ಶನದಂತೆ ಜೀರ್ಣಕ್ರಿಯೆಗೆ ತೊಂದರೆಯಾಗದಂತೆ ಮಿತ ಪ್ರಮಾಣದಲ್ಲಿ ಪೌಷ್ಟಿಕ ಆಹಾರ ನೀಡಲಾಗುತ್ತಿದೆ.
ಸಂಜೆ ತಾಲೀಮು ಮುಗಿದ ಬಳಿಕ ವಿಶೇಷವಾಗಿ ತಯಾರಿಸಿದ ರಾಗಿ ಮುದ್ದೆಯನ್ನು ಆನೆಗಳಿಗೆ ನೀಡಲಾಗುತ್ತಿದ್ದು, ಆನೆಗಳು ರಾಗಿ ಮುದ್ದೆಯನ್ನು ಹೆಚ್ಚು ಇಷ್ಟಪಟ್ಟು ಸೇವಿಸುತ್ತಿವೆ. ಈ ಪೌಷ್ಟಿಕ ಆಹಾರವು ಆನೆಗಳ ದೇಹದಾಢ್ಯತೆ ಹಾಗೂ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ನೆರವಾಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
