ರಾಂಚಿ, ಸೆ.6- ಜಾರ್ಖಂಡ್ನ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಹಾಗೂ ನಗರಾಭಿವೃದ್ಧಿ ಸಚಿವ ಸುದಿವ್ಯ ಕುಮಾರ್ ಸೋನು ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.ಸೆ.5ರ ರಾತ್ರಿ ಏಕಾಏಕಿ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಸಹ ಸಚಿವ ದೀಪಕ್ ಬಿರುವಾ ತಿಳಿಸಿದ್ದಾರೆ.
ಸುದಿವ್ಯ ಕುಮಾರ್ ಸೋನು ಅವರು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)ನ ಪ್ರಮುಖ ನಾಯಕರಾಗಿದ್ದು, ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಆಪ್ತ ಸಹಾಯಕರಾಗಿ ಗುರುತಿಸಿಕೊಂಡಿದ್ದರು. ಅವರ ಅಕಾಲಿಕ ನಿಧನ ಜಾರ್ಖಂಡ್ ರಾಜಕೀಯ ವಲಯದಲ್ಲಿ ಆಘಾತ ಮೂಡಿಸಿದೆ.
2019ರಲ್ಲಿ ಗಿರಿಡಿಹ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸೋನು, ಬಳಿಕ ಜಾರ್ಖಂಡ್ ಸರ್ಕಾರದಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಉನ್ನತ ಮತ್ತು ತಾಂತ್ರಿಕ ಶಿಕ್ಷಣ, ನಗರಾಭಿವೃದ್ಧಿ ಜತೆಗೆ ಪ್ರವಾಸೋದ್ಯಮ, ಕಲೆ ಮತ್ತು ಸಂಸ್ಕೃತಿ, ಕ್ರೀಡೆ ಹಾಗೂ ಯುವಜನ ವ್ಯವಹಾರಗಳ ಖಾತೆಗಳ ಜವಾಬ್ದಾರಿಯನ್ನೂ ಅವರು ವಹಿಸಿದ್ದರು.
ಕರ್ನಾಟಕಕ್ಕೂ ಭೇಟಿ ನೀಡಿದ್ದ ಸೋನು
ಸುದಿವ್ಯ ಕುಮಾರ್ ಸೋನು ಅವರ ನಿಧನಕ್ಕೂ ಕೆಲವೇ ದಿನಗಳ ಮುನ್ನ ಅವರು ಕರ್ನಾಟಕಕ್ಕೆ ಭೇಟಿ ನೀಡಿದ್ದರು ಎಂಬುದು ವಿಶೇಷವಾಗಿದೆ. ಜಾರ್ಖಂಡ್ ಸರ್ಕಾರದ ನಿಯೋಗದ ನೇತೃತ್ವ ವಹಿಸಿದ್ದ ಅವರು ಕರ್ನಾಟಕದ ಪ್ರವಾಸೋದ್ಯಮ ಮೂಲಸೌಕರ್ಯ ಹಾಗೂ ನಿರ್ವಹಣಾ ವ್ಯವಸ್ಥೆಗಳ ಅಧ್ಯಯನಕ್ಕಾಗಿ ರಾಜ್ಯಕ್ಕೆ ಆಗಮಿಸಿದ್ದರು. ಈ ವೇಳೆ ಕರ್ನಾಟಕ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರನ್ನು ಭೇಟಿಯಾಗಿ ಪ್ರವಾಸೋದ್ಯಮ ಹಾಗೂ ಅರಣ್ಯ ನಿರ್ವಹಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎರಡೂ ರಾಜ್ಯಗಳ ನಡುವಿನ ಸಹಕಾರದ ಸಾಧ್ಯತೆಗಳ ಕುರಿತು ಚರ್ಚಿಸಿದ್ದರು.
