ಮುಂಬೈ, ಸೆ.6- ಮಹಾರಾಷ್ಟ್ರದಲ್ಲಿ ಅಕ್ಟೋಬರ್ 11ರಿಂದ ಆರಂಭವಾಗಲಿರುವ ನವರಾತ್ರಿ ಉತ್ಸವಕ್ಕೂ ಮುನ್ನ ಗರ್ಬಾ ಹಾಗೂ ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರ ಭಾಗವಹಿಸುವಿಕೆಯನ್ನು ತಡೆಯುವಂತೆ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ನೀಡಿರುವ ಸೂಚನೆ ಹೊಸ ರಾಜಕೀಯ ಹಾಗೂ ಸಾಮಾಜಿಕ ವಿವಾದಕ್ಕೆ ಕಾರಣವಾಗಿದೆ.
ಗರ್ಬಾ ಮತ್ತು ದಾಂಡಿಯಾ ಕಾರ್ಯಕ್ರಮಗಳಿಗೆ ಪ್ರವೇಶಿಸುವವರ ಆಧಾರ್ ಕಾರ್ಡ್ ಪರಿಶೀಲಿಸಬೇಕು ಹಾಗೂ ಹಣೆಗೆ ತಿಲಕ ಹಚ್ಚುವ ಮೂಲಕ ಹಿಂದೂ ಗುರುತನ್ನು ಖಚಿತಪಡಿಸಿಕೊಳ್ಳಬೇಕು ಎಂಬ ವಿಎಚ್ಪಿಯ ಸಲಹೆ ಧಾರ್ಮಿಕ ಆಚರಣೆ ಮತ್ತು ಸಾರ್ವಜನಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವಿನ ಗಡಿ ಕುರಿತು ಚರ್ಚೆ ಹುಟ್ಟುಹಾಕಿದೆ.
ವಿಎಚ್ಪಿ ರಾಷ್ಟ್ರೀಯ ವಕ್ತಾರ ಹಾಗೂ ಜಂಟಿ ಕಾರ್ಯದರ್ಶಿ ಶ್ರೀರಾಜ್ ನಾಯರ್ ಮಾತನಾಡಿ, ನವರಾತ್ರಿ ಕೇವಲ ಹಾಡು-ನೃತ್ಯದ ಕಾರ್ಯಕ್ರಮವಲ್ಲ. ಅದು ದೇವಿಯ ಆರಾಧನೆಯ ಹಬ್ಬ. ಮುಸ್ಲಿಮರು ಮೂರ್ತಿಪೂಜೆಯನ್ನು ಅನುಸರಿಸುವುದಿಲ್ಲವಾದರೆ, ಅಂತಹ ಧಾರ್ಮಿಕ ಆಚರಣೆಯ ಭಾಗವಾಗುವ ಅಗತ್ಯವೇನು ಎಂಬುದು ತಮ್ಮ ಸಂಘಟನೆಯ ಪ್ರಶ್ನೆ ಎಂದು ಹೇಳಿದ್ದಾರೆ. ಆದರೆ, ಈ ಕ್ರಮ ಯಾವುದೇ ಸಮುದಾಯದ ವಿರುದ್ಧವಲ್ಲ. ಹಿಂದೂ ಹಬ್ಬಗಳ ಸಾಂಸ್ಕೃತಿಕ ಸ್ವರೂಪವನ್ನು ಕಾಪಾಡುವ ಉದ್ದೇಶದಿಂದ ಕೈಗೊಳ್ಳುತ್ತಿರುವ ಮುನ್ನೆಚ್ಚರಿಕೆ ಎಂದು ವಿಎಚ್ಪಿ ಸಮರ್ಥಿಸಿಕೊಂಡಿದೆ.
ಹೊಸ ವಿವಾದವೇನಲ್ಲ
ಮಹಾರಾಷ್ಟ್ರದಲ್ಲಿ ಗರ್ಬಾ ಹಾಗೂ ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರ ಪ್ರವೇಶ ಮತ್ತು ಗುರುತು ಪರಿಶೀಲನೆ ಕುರಿತ ವಿವಾದ ಕಳೆದ ಕೆಲವು ವರ್ಷಗಳಿಂದ ಪುನರಾವರ್ತನೆಯಾಗುತ್ತಿದೆ. 2023ರಲ್ಲೇ ವಿಎಚ್ಪಿ ಗರ್ಬಾ-ದಾಂಡಿಯಾ ಕಾರ್ಯಕ್ರಮಗಳಿಗೆ ಆಗಮಿಸುವವರ ಆಧಾರ್ ಕಾರ್ಡ್ ಪರಿಶೀಲಿಸಬೇಕು, ಹಣೆಗೆ ತಿಲಕ ಹಚ್ಚಬೇಕು ಹಾಗೂ ಕೈಗೆ ಕಲವಾ ಕಟ್ಟಬೇಕು ಎಂದು ಸಲಹೆ ನೀಡಿತ್ತು. ಭಾಗವಹಿಸುವವರ ಹಿಂದೂ ಗುರುತನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಅಂದು ವಿಎಚ್ಪಿ ಮುಖಂಡ ಸುರೇಂದ್ರ ಜೈನ್ ಹೇಳಿದ್ದರು.
2025ರಲ್ಲೂ ಇದೇ ರೀತಿಯ ವಿವಾದ ಮತ್ತಷ್ಟು ತೀವ್ರಗೊಂಡಿತ್ತು. ಮಹಾರಾಷ್ಟ್ರದ ನವರಾತ್ರಿ ಕಾರ್ಯಕ್ರಮಗಳಿಗೆ ಮುಸ್ಲಿಮರು ಸೇರಿದಂತೆ ಹಿಂದೂಯೇತರರಿಗೆ ಪ್ರವೇಶ ನೀಡಬಾರದು ಎಂದು ವಿಎಚ್ಪಿ ಸೂಚಿಸಿತ್ತು. ಪ್ರತಿಯೊಬ್ಬರ ಹಣೆಗೆ ತಿಲಕ ಹಚ್ಚುವುದು ಹಾಗೂ ಆಧಾರ್ ಪರಿಶೀಲಿಸುವಂತೆಯೂ ಸಂಘಟನೆ ಸಲಹೆ ನೀಡಿತ್ತು.
ಆ ಸಂದರ್ಭದಲ್ಲಿ ಶ್ರೀರಾಜ್ ನಾಯರ್, ಮುಸ್ಲಿಮರು ನವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸಿದರೆ ಹಿಂದೂ ಧರ್ಮವನ್ನು ಸ್ವೀಕರಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. 2025ರ ವಿವಾದದ ವೇಳೆ ‘ಲವ್ ಜಿಹಾದ್’ ಹಾಗೂ ದುರುದ್ದೇಶದಿಂದ ಕೆಲವರು ಕಾರ್ಯಕ್ರಮಗಳಿಗೆ ಪ್ರವೇಶಿಸುತ್ತಾರೆ ಎಂಬ ಆರೋಪಗಳನ್ನೂ ವಿಎಚ್ಪಿ ಮುಂದಿಟ್ಟಿತ್ತು. ಕಾರ್ಯಕ್ರಮಗಳ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಿ ಭದ್ರತೆ ಹೆಚ್ಚಿಸುವಂತೆ ಸಂಘಟನೆ ಆಗ್ರಹಿಸಿತ್ತು.
