ಬೆಂಗಳೂರು, ಸೆ.22- ಭಾರಿ ರಿಯಾಯಿತಿ ನೀಡಿ, ಕೆಲವೇ ನಿಮಿಷಗಳಲ್ಲಿ ಔಷಧಗಳನ್ನು ಮನೆ ಬಾಗಿಲಿಗೆ ತಲುಪಿಸುವ ಆನ್‌ಲೈನ್ ಫಾರ್ಮಸಿ ಕಂಪನಿಗಳ ಮೇಲೂ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆ (ಎಫ್‌ಡಿಎ) ಅಧಿಕಾರಿಗಳ ಕಣ್ಣು ಬಿದ್ದಿದೆ.ಡಿಸ್ಕೌಂಟ್ ಹೆಸರಿನಲ್ಲಿ ಗ್ರಾಹಕರಿಗೆ ಔಷಧಗಳನ್ನು ಮಾರಾಟ ಮಾಡುತ್ತಿರುವ ಕಂಪನಿಗಳಲ್ಲಿ ಔಷಧಗಳ ಗುಣಮಟ್ಟದ ಬಗ್ಗೆ ಯಾವುದೇ ರಾಜಿ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಇಲಾಖೆ ಮುಂದಾಗಿದೆ.
ಇದರ ಭಾಗವಾಗಿ ವಿವಿಧ ಫಾರ್ಮಸಿಗಳಲ್ಲಿ ಮಾರಾಟವಾಗುತ್ತಿರುವ ಔಷಧಗಳನ್ನು ರ್ಯಾಂಡಮ್ ಆಗಿ ಸಂಗ್ರಹಿಸಿ ಗುಣಮಟ್ಟ ಪರೀಕ್ಷೆಗೆ ಒಳಪಡಿಸುವ ಯೋಜನೆ ರೂಪಿಸಲಾಗುತ್ತಿದೆ.ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮೂಲಕ ಔಷಧ ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಲವು ಕಂಪನಿಗಳು ಭಾರಿ ರಿಯಾಯಿತಿ, ಆಫರ್‌ಗಳು ಹಾಗೂ 10 ನಿಮಿಷದೊಳಗೆ ಔಷಧ ವಿತರಣೆ ಮಾಡುವುದಾಗಿ ಜಾಹೀರಾತು ನೀಡುತ್ತಿವೆ. ಕಡಿಮೆ ದರದಲ್ಲಿ ಔಷಧ ಸಿಗುತ್ತಿರುವ ಹಿನ್ನೆಲೆಯಲ್ಲಿ ಅದರ ಗುಣಮಟ್ಟ ಮತ್ತು ಸಂಗ್ರಹಣಾ ವ್ಯವಸ್ಥೆ ಬಗ್ಗೆ ಪ್ರಶ್ನೆಗಳು ಎದುರಾಗಿರುವ ಹಿನ್ನೆಲೆಯಲ್ಲಿ ಎಫ್‌ಡಿಎ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ.
ರ್ಯಾಂಡಮ್ ಸ್ಯಾಂಪಲ್ ಸಂಗ್ರಹ :ಆನ್‌ಲೈನ್ ಸೇರಿದಂತೆ ವಿವಿಧ ಔಷಧ ಮಳಿಗೆಗಳಿಂದ ಔಷಧಗಳ ಮಾದರಿಗಳನ್ನು ರ್ಯಾಂಡಮ್ ಆಗಿ ಸಂಗ್ರಹಿಸಿ ಪ್ರಯೋಗಾಲಯಗಳಲ್ಲಿ ಪರೀಕ್ಷಿಸುವ ಸಾಧ್ಯತೆ ಇದೆ. ಔಷಧಗಳ ಗುಣಮಟ್ಟ ನಿಗದಿತ ಮಾನದಂಡಗಳಿಗೆ ಅನುಗುಣವಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.ಇದರ ಜತೆಗೆ ಔಷಧದ ಪ್ಯಾಕಿಂಗ್ ಹಾಗೂ ಲೇಬಲಿಂಗ್, ಬ್ಯಾಚ್ ಸಂಖ್ಯೆ, ತಯಾರಿಕೆ ಮತ್ತು ಅವಧಿ ಮುಕ್ತಾಯ ದಿನಾಂಕ, ಸಂಗ್ರಹಣೆ ವಿಧಾನ ಸೇರಿದಂತೆ ಹಲವು ಅಂಶಗಳನ್ನೂ ಅಧಿಕಾರಿಗಳು ಪರಿಶೀಲಿಸಲಿದ್ದಾರೆ.
ಮಾರಾಟ ದಾಖಲೆಗಳಿಗೂ ಪರಿಶೀಲನೆ; ಔಷಧಗಳ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ದಾಖಲೆಗಳು, ಔಷಧ ಮಳಿಗೆಗಳ ಪರವಾನಗಿ, ಸಂಬಂಧಪಟ್ಟ ಔಷಧಗಳ ದಾಸ್ತಾನು ಹಾಗೂ ಮಾರಾಟ ಪ್ರಕ್ರಿಯೆ ನಿಯಮಾನುಸಾರ ನಡೆಯುತ್ತಿದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತದೆ.
ವಿಶೇಷವಾಗಿ ಆನ್‌ಲೈನ್ ಮೂಲಕ ಔಷಧ ಮಾರಾಟ ಮಾಡುವ ಸಂಸ್ಥೆಗಳು ಔಷಧಗಳನ್ನು ಯಾವ ರೀತಿಯಲ್ಲಿ ಸಂಗ್ರಹಿಸುತ್ತಿವೆ, ನಿಗದಿತ ತಾಪಮಾನ ಹಾಗೂ ಇತರ ಅಗತ್ಯ ಪರಿಸ್ಥಿತಿಗಳನ್ನು ಕಾಯ್ದುಕೊಳ್ಳಲಾಗುತ್ತಿದೆಯೇ ಎಂಬುದರ ಮೇಲೂ ಇಲಾಖೆ ನಿಗಾ ವಹಿಸಲಿದೆ.
ನಿಯಮ ಉಲ್ಲಂಘಿಸಿದರೆ ಕ್ರಮಪರಿಶೀಲನೆ ವೇಳೆ ಔಷಧಗಳ ಗುಣಮಟ್ಟದಲ್ಲಿ ಲೋಪ, ತಪ್ಪಾದ ಲೇಬಲಿಂಗ್, ಸೂಕ್ತ ಸಂಗ್ರಹಣೆ ಇಲ್ಲದಿರುವುದು, ಪರವಾನಗಿ ಉಲ್ಲಂಘನೆ ಅಥವಾ ಮಾರಾಟ ದಾಖಲೆಗಳಲ್ಲಿ ಅಕ್ರಮ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಔಷಧ ನಿಯಂತ್ರಣ ಕಾನೂನುಗಳಡಿ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಲಿದೆ.
ಡಿಸ್ಕೌಂಟ್ ನೀಡುವುದು ಮಾತ್ರವೇ ಔಷಧದ ಗುಣಮಟ್ಟ ಕಳಪೆಯಾಗಿರುವುದಕ್ಕೆ ಸಾಕ್ಷಿಯಲ್ಲ. ಆದರೆ ಕಡಿಮೆ ದರದಲ್ಲಿ ಮಾರಾಟವಾಗುತ್ತಿರುವ ಔಷಧಗಳೂ ನಿಗದಿತ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಪೂರೈಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಎಫ್‌ಡಿಎ ಪರಿಶೀಲನೆ ಮಹತ್ವ ಪಡೆದಿದೆ.
