Homeರಾಜ್ಯಗವಿಸಿದ್ದೇಶ್ವರ ಶ್ರೀಗಳೇ ದಸರಾ ಉದ್ಘಾಟಿಸಲಿದ್ದಾರೆ, ಯಾವುದೇ ಗೊಂದಲ ಬೇಡ : ತಂಗಡಗಿ

ಗವಿಸಿದ್ದೇಶ್ವರ ಶ್ರೀಗಳೇ ದಸರಾ ಉದ್ಘಾಟಿಸಲಿದ್ದಾರೆ, ಯಾವುದೇ ಗೊಂದಲ ಬೇಡ : ತಂಗಡಗಿ

ಬೆಂಗಳೂರು,ಸೆ.27- ವಿಶ್ವವಿಖ್ಯಾತ ಮೈಸೂರು ದಸರಾವನ್ನು ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಉದ್ಘಾಟಿಸುವುದು ನಿಶ್ಚಿತ. ಈ ಕುರಿತು ಯಾವುದೇ ಅನುಮಾನ ಅಥವಾ ಗೊಂದಲಕ್ಕೆ ಅವಕಾಶವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಸ್ಪಷ್ಟಪಡಿಸಿದರು.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗವಿಸಿದ್ದೇಶ್ವರ ಶ್ರೀಗಳು ದಸರಾ ಉದ್ಘಾಟನೆಗೆ ಒಪ್ಪಿಲ್ಲ, ಸರ್ಕಾರದ ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಮಾಹಿತಿ ಎಂದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಶ್ರೀಗಳೊಂದಿಗೆ ಮಾತುಕತೆ ನಡೆಸಿದ ಬಳಿಕವೇ, ಈ ಬಾರಿಯ ಮೈಸೂರು ದಸರಾವನ್ನು ಗವಿಸಿದ್ದೇಶ್ವರ ಶ್ರೀಗಳು ಉದ್ಘಾಟಿಸಲಿದ್ದಾರೆ ಮುಖ್ಯಮಂತ್ರಿಗಳೇ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ. ಈ ಅಧಿಕೃತ ಘೋಷಣೆಯ ನಂತರವೂ ಶ್ರೀಗಳು ಆಹ್ವಾನ ತಿರಸ್ಕರಿಸಿದ್ದಾರೆ ಂಬ ಸುಳ್ಳು ಸುದ್ದಿಯನ್ನು ಕೆಲವರು ಹರಡುತ್ತಿದ್ದಾರೆ. ಇದು ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.

ಸರ್ಕಾರವು ಈಗಾಗಲೇ ಗವಿಮಠದೊಂದಿಗೆ ಸಂಪರ್ಕ ಸಾಧಿಸಿದ್ದು, ಸೆ.28ರಂದು ಖುದ್ದು ಗವಿಮಠಕ್ಕೆ ಭೇಟಿ ನೀಡಿ ಪರಮಪೂಜ್ಯ ಶ್ರೀಗಳನ್ನು ಅಧಿಕೃತವಾಗಿ ಆಹ್ವಾನಿಸಲು ದಿನಾಂಕ ನಿಗದಿಯಾಗಿದೆ. ಹೀಗಾಗಿ, ಶ್ರೀಗಳ ಒಪ್ಪಿಗೆ ಇಲ್ಲ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ನಾಡಹಬ್ಬ ಮೈಸೂರು ದಸರಾ ಕುರಿತು ಸುಳ್ಳು ಹಾಗೂ ಆಧಾರರಹಿತ ಮಾಹಿತಿ ಹರಡಿ ಜನರಲ್ಲಿ ಗೊಂದಲ ಸೃಷ್ಟಿಸುವವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು. ದಸರಾ ಉದ್ಘಾಟನೆ ಸೇರಿದಂತೆ ಯಾವುದೇ ಅಧಿಕೃತ ಮಾಹಿತಿಗಾಗಿ ಸರ್ಕಾರದ ಅಧಿಕೃತ ಪ್ರಕಟಣೆಗಳನ್ನೇ ಪರಿಗಣಿಸುವಂತೆ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ.

RELATED ARTICLES
spot_img

Latest News