ಲಖನೌ, ಸೆ.26- ಉತ್ತರ ಪ್ರದೇಶದಲ್ಲಿ ಭಾರಿ ಮಳೆ, ಗುಡುಗು ಸಹಿತ ಗಾಳಿ ಹಾಗೂ ಮರಗಳು ಉರುಳಿದ ಘಟನೆಗಳಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ರಾಜ್ಯದ 63 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಹಲವು ಪ್ರದೇಶಗಳಲ್ಲಿ ಹಠಾತ್ ಪ್ರವಾಹದ ಆತಂಕ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಸಾಮಾನ್ಯಕ್ಕಿಂತ 19 ಪಟ್ಟು ಹೆಚ್ಚು ಮಳೆಯಾಗಿದೆ. ಮಳೆಯಿಂದ ನಿಂತಿರುವ ಬೆಳೆಗಳಿಗೆ ಹಾನಿಯಾಗಿದ್ದು, 117 ಮನೆಗಳು ಹಾನಿಗೊಳಗಾಗಿವೆ. ಮಣ್ಣಿನ ಗೋಡೆ ಕುಸಿದು ಐವರು ಮೃತಪಟ್ಟರೆ, ಬಿರುಗಾಳಿ ಮತ್ತು ಭಾರಿ ಮಳೆಯಿಂದ ಮರಗಳು ಉರುಳಿ ಐವರು ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ.
ಗೋರಖ್‌ಪುರ ಜಿಲ್ಲೆಯಲ್ಲಿ ಮರಗಳು ಉರುಳಿದ ವಿವಿಧ ಘಟನೆಗಳಲ್ಲಿ ನಾಲ್ವರು ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಲಖನೌನಲ್ಲಿ 21 ಗಂಟೆಗಳಲ್ಲಿ 125.8 ಮಿ.ಮೀ. ಮಳೆಯಾಗಿದ್ದು, ಬಾಂದಾದಲ್ಲಿ 227.6, ಫತೇಹ್‌ಗಢದಲ್ಲಿ 224, ನಾನ್ಪಾರಾದಲ್ಲಿ 217, ಹರ್ದೋಯಿಯಲ್ಲಿ 214 ಮತ್ತು ಕನ್ನೌಜ್‌ನಲ್ಲಿ 204 ಮಿ.ಮೀ. ಮಳೆಯಾಗಿದೆ.
ಭಾರಿ ಮಳೆಯಿಂದ ಹಲವು ಪ್ರದೇಶಗಳಲ್ಲಿ ಜಲಾವೃತವಾಗಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆ ಪೂರ್ವ ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದ್ದು, ಕೆಲವು ಜಲಾನಯನ ಪ್ರದೇಶಗಳಲ್ಲಿ ಹಠಾತ್ ಪ್ರವಾಹದ ಅಪಾಯವಿದೆ ಎಂದು ಎಚ್ಚರಿಸಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜಿಲ್ಲಾಧಿಕಾರಿಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದು, ಪರಿಹಾರ ಮತ್ತು ರಕ್ಷಣಾ ತಂಡಗಳನ್ನು ಸನ್ನದ್ಧವಾಗಿರಿಸಲಾಗಿದೆ. ಅಪಾಯದ ಪ್ರದೇಶಗಳಲ್ಲಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಗುಡುಗು-ಮಿಂಚಿನ ಸಂದರ್ಭದಲ್ಲಿ ಅನಗತ್ಯ ಪ್ರಯಾಣ ತಪ್ಪಿಸುವಂತೆ ಜನರಿಗೆ ಸಲಹೆ ನೀಡಲಾಗಿದೆ.
