ಬೆಂಗಳೂರು,ಸೆ.27- ಬಿಡದಿ ಉಪನಗರ ಯೋಜನೆಯ ಭೂ ಸ್ವಾಧೀನ ವಿರೋಧಿಸಿ ನಡೆಸುತ್ತಿರುವ ರೈತರ ಹೋರಾಟವನ್ನು ರಾಜ್ಯ ಸರ್ಕಾರ ಹತ್ತಿಕ್ಕುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾಗ ಸುಮನಿದ್ದು, ನಿನ್ನೆ ರೈತರ ಮೇಲೆ ಏಕಾಏಕಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ರೈತರ ಪರವಾಗಿ ನಮ ಪಕ್ಷ ನಿಂತು ಹೋರಾಟ ನಡೆಸಲಿದೆ ಎಂದರು.
ಮುಖ್ಯಮಂತ್ರಿಯಾಗಿ ಎರಡು ಬಾರಿ ರೈತರ ಸಾಲಮನ್ನ ಮಾಡಿದ್ದಾಗಲೂ ಕೇಂದ್ರ ಸರ್ಕಾರದ ಬಳಿ ಕೈ ಚಾಚಿರಲಿಲ್ಲ. 28 ಸಾವಿರ ಕೋಟಿ ರೂ. ಬೆಳೆ ಸಾಲವನ್ನು ಮನ್ನಾ ಮಾಡಿದ್ದೆ. ಕಬ್ಬು ಬೆಳೆಗಾರರ 2,500 ಕೋಟಿ ರೂ. ಸಾಲ ಮನ್ನಾ ಮಾಡಿದ್ದೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ತಿರುಗೇಟು ನೀಡಿದರು.
ನಾವು ಬೆಂಬಲ ಕೊಟ್ಟಿದ್ದರಿಂದಲೇ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ರೈತರಿಗೆ ಸಹಾಯ ಮಾಡುವ ಉದ್ದೇಶದಿಂದಲೇ ನಾನು ಈ ಪಾಪಿಗಳ ಜೊತೆಗೆ ಸೇರಿದ್ದು, 14 ತಿಂಗಳ ಅವಧಿಯಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಯನ್ನು ತಪ್ಪಿಸಲು ಸಾಲ ಮನ್ನಾ ಮಾಡಬೇಕಾಯಿತು. ನಾನು ಮುಖ್ಯಮಂತ್ರಿ ಸ್ಥಾನ ಬಿಟ್ಟ ಮೇಲೆ ಏನಾಯಿತು ಎಂಬುದನ್ನು ಹೇಳಬೇಕಿಲ್ಲ ಎಂದರು.
ಬರ ಪರಿಹಾರವಾಗಿ ಪ್ರತಿ ರೈತರಿಗೆ 2,500 ರೂ. ಕೊಡುತ್ತಿದ್ದಾರೆ. ಕಾಫಿ-ತಿಂಡಿಗೆ 200 ಕೋಟಿ ಖರ್ಚು ಮಾಡುತ್ತಾರೆ. 2,500 ಹಣದಲ್ಲಿ ಏನು ಮಾಡಲು ಸಾಧ್ಯ? ಯಾವ ಭಾಗದಲ್ಲಿ ರೈತರ ಬೆಳೆ ಎಷ್ಟು ಹಾನಿಯಾಗಿದೆ ಎಂಬುದನ್ನು ವೈಜ್ಞಾನಿಕವಾಗಿ ಪರಿಗಣಿಸಿ ಪರಿಹಾರ ನೀಡಲು ತೀರ್ಮಾನಿಸಿ ಕೇಂದ್ರ ಸರ್ಕಾರದ ಬಳಿಗೆ ಸರ್ವ ಪಕ್ಷಗಳ ನಿಯೋಗ ಕೊಂಡೊಯ್ಯುವುದರಿಂದ ರಾಜ್ಯ ಸರ್ಕಾರಕ್ಕೆ ಖರ್ಚು ಹೆಚ್ಚಾಗಲಿದೆ. ಅದರ ಬದಲು ಸರ್ಕಾರದ ಮುಖ್ಯಮಂತ್ರಿ, ಸಚಿವರು ಕೇಂದ್ರದ ಬಳಿ ಹೋಗಿ ಮನವಿ ಸಲ್ಲಿಸಿ ಬರಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ನಾನು ಹೇಳುತ್ತಿಲ್ಲ. ಆದರೆ ಖಾಲಿ ಮಾಡಿಕೊಂಡು ಕುಳಿತಿರುವವರು ನೀವು ಎಂದು ತಿರುಗೇಟು ನೀಡಿದ ಅವರು, ರೈತರಿಗೆ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಹಾಗೂ ಅವರ ಬೆಂಬಲಕ್ಕೆ ನಿಲ್ಲಲು ನಮ ಪಕ್ಷದ ವತಿಯಿಂದ ರೈತ ಸ್ವಾಭಿಮಾನಿ ಯಾತ್ರೆ ಮಾಡಲಾಗುತ್ತಿದೆ ಎಂದು ಹೇಳಿದರು.
