ಬೆಂಗಳೂರು,ಸೆ.27- ಕೆಆರ್‌ಐಡಿಎಲ್‌ನಲ್ಲಿ ಬಾಕಿ ಇರುವ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ನಾಪತ್ತೆಯಾಗಿರುವ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಫರ್ವೀಜ್ ಅವರನ್ನು ಕೂಡಲೇ ಪತ್ತೆಹಚ್ಚಿ ರಕ್ಷಿಸಬೇಕು ಎಂದು ಜೆಡಿಎಸ್ ಆಗ್ರಹಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಸಂಬಂಧ ಪೋಸ್ಟ್ ಮಾಡಿರುವ ಜೆಡಿಎಸ್, ಮುಂದಾಗಬಹುದಾದ ಯಾವುದೇ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದೆ.
ಅನುದಾನ ಕೊರತೆ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿರುವ ಜೆಡಿಎಸ್ ಗದಗದ ಕೆಆರ್‌ಐಡಿಎಲ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಫರ್ವೀಜ್ ಅವರು ನಾಪತ್ತೆಯಾಗಿರುವ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ರಾಜ್ಯದ ಬೊಕ್ಕಸವನ್ನು ಬರಿದು ಮಾಡಿರುವ ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿದೆ. ಅನುದಾನ ಬಿಡುಗಡೆಯಾಗದೆ ಗುತ್ತಿಗೆದಾರರು ಮನೆಗೆ ಬಂದು ಒತ್ತಡ ಹೇರುತ್ತಿದ್ದಾರೆ, ಇದರಿಂದ ಮಾನಸಿಕ ನೆಮದಿ ಹಾಳಾಗಿದೆ ಎಂದು ಕೆಆರ್‌ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಫರ್ವೀಜ್ ಅವರು ಪತ್ರ ಬರೆದಿದ್ದಾರೆ ಎಂದು ಆಪಾದಿಸಿದೆ.
ಜೀವನ ಕೊನೆಗಾಣಿಸಿಕೊಳ್ಳುವುದಾಗಿ ಪತ್ರದಲ್ಲಿ ಉಲ್ಲೇಖಿಸಿ ಅಧಿಕಾರಿ ನಾಪತ್ತೆಯಾಗಿದ್ದಾರೆ ಎಂದು ಜೆಡಿಎಸ್ ಹೇಳಿದ್ದು, ಅವರ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ ಎಂದು ತಿಳಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ಆತಹತ್ಯೆ ಪ್ರಕರಣಗಳು ನಡೆದಿವೆ ಎಂದು ಆರೋಪಿಸಿರುವ ಜೆಡಿಎಸ್, ವಾಲೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಚಂದ್ರಶೇಖರ್, ಪಿಎಸ್‌ಐ ಪರಶುರಾಮ್, ಬೆಳಗಾವಿಯ ರುದ್ರಣ್ಣ ಯಡವಣ್ಣವರ್, ದಾವಣಗೆರೆಯ ಗುತ್ತಿಗೆದಾರ ಪಿ.ಎನ್.ಗೌಡರ್ ಹಾಗೂ ರಾಮನಗರದ ನಾಗೇಶ್ ಪ್ರಕರಣಗಳನ್ನು ಉಲ್ಲೇಖಿಸಿದೆ.
ಇದೀಗ ಅನುದಾನ ಕೊರತೆಯ ಹಿನ್ನೆಲೆಯಲ್ಲಿ ಕೆಆರ್‌ಐಡಿಎಲ್ ಅಧಿಕಾರಿ ಫರ್ವೀಜ್ ಅವರ ಪ್ರಕರಣವೂ ನಡೆದಿದೆ ಎಂದು ಹೇಳಿದೆ.ರಾಜ್ಯದಲ್ಲಿ ಹೊಸ ಯೋಜನೆಗಳನ್ನು ಘೋಷಿಸಬಾರದು, ಖಜಾನೆಯಲ್ಲಿ ಹಣದ ಕೊರತೆಯಿದೆ ಎಂದು ಆರ್ಥಿಕ ಇಲಾಖೆ ಪತ್ರ ಬರೆಯುತ್ತಿದೆ. ಮತ್ತೊಂದೆಡೆ, ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವಂತೆ ಕಾಂಗ್ರೆಸ್ ನಾಯಕರಾದ ಬಿ.ಆರ್. ಪಾಟೀಲ್ ಮತ್ತು ಬಿ.ಕೆ.ಹರಿಪ್ರಸಾದ್ ಅವರು ಸರ್ಕಾರಕ್ಕೆ ಪದೇಪದೇ ಪತ್ರ ಬರೆಯುತ್ತಿದ್ದಾರೆ ಎಂದು ಜೆಡಿಎಸ್ ಟೀಕಿಸಿದೆ.
ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಹುಡುಕುವ ಸ್ಥಿತಿ ಕಾಂಗ್ರೆಸ್ ನಾಯಕರದ್ದಾಗಿದ್ದರೆ, ಖಜಾನೆಯಲ್ಲಿ ಹಣವಿಲ್ಲ ಎಂದು ಆರ್ಥಿಕ ಇಲಾಖೆ ಹೇಳುತ್ತಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರದೊಳಗಿನ ಈ ಪತ್ರ ವ್ಯವಹಾರವೇ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಜೆಡಿಎಸ್ ಆರೋಪಿಸಿದೆ. ಅಭಿವೃದ್ಧಿ ಕಾಮಗಾರಿಗಳ ಬದಲು ಸರ್ಕಾರದಲ್ಲಿ ಪತ್ರಗಳ ವಿನಿಮಯವೇ ಪ್ರಮುಖ ಚಟುವಟಿಕೆಯಾಗಿದೆ ಎಂದು ಟೀಕಿಸಿರುವ ಜೆಡಿಎಸ್, ಈ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉತ್ತರ ನೀಡಬೇಕು ಎಂದು ಆಗ್ರಹಿಸಿದೆ.
