ಬೆಂಗಳೂರು,ಸೆ.28-ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚೊಕ್ಕಸಂದ್ರದ ನಿವಾಸಿ ದೀಪಕ್ ಅಲಿಯಾಸ್ ದೀಪು (26) ಕೊಲೆಯಾದ ಯುವಕ. ಈತ ಮಾದನಾಯಕನಹಳ್ಳಿಯಲ್ಲಿ ರುವ ಲಾಜಿಸ್ಟಿಕ್ ಸಂಸ್ಥೆಯಲ್ಲಿ ವಾಹನ ಚಾಲಕರಾಗಿದ್ದರು.
ಮೊನ್ನೆ ರಾತ್ರಿ ದೀಪಕ್ ತನ್ನ ಸ್ನೇಹಿತರಾದ ಈಶ್ವರ್ ನೇಪಾಳಿ, ಸುಮನ್ ಹಾಗೂ ಇನ್ನಿತರರೊಂದಿಗೆ ಗುಲ್ಬರ್ಗ ಕಾಲೋನಿಗೆ ಹೋಗಿದ್ದಾಗ ಕ್ಷುಲ್ಲಕ ವಿಚಾರಕ್ಕೆ ಸ್ಥಳೀಯ ಹುಡುಗರ ನಡುವೆ ಗಲಾಟೆಯಾಗಿದೆ.
ಇದೇ ಜಿದ್ದಿನಿಂದ ಗುಲ್ಬರ್ಗ ಕಾಲೋನಿಯ ಜೋಪಡಿ ಹುಡುಗರು ನಿನ್ನೆ ತಡರಾತ್ರಿ 11.50 ರ ಸುಮಾರಿನಲ್ಲಿ ಚೊಕ್ಕಸಂದ್ರಕ್ಕೆ ಬಂದು ದೀಪಕ್ ಹಾಗೂ ಇನ್ನಿತರರ ಜೊತೆ ಗಲಾಟೆ ಮಾಡಿ ಹೊಡೆದಾಡಿಕೊಂಡಿದ್ದಾರೆ. ಆ ವೇಳೆ ಈ ಗುಂಪು ಚಾಕು, ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿದೆ. ಚಾಕು ಇರಿತಕ್ಕೊಳಗಾದ ದೀಪಕ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ. ಹೊಡೆದಾಟದಲ್ಲಿ ಸುಮನ್ ಹಾಗೂ ಶರಣಪ್ಪ ಸೇರಿದಂತೆ ಮೂವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಪೀಣ್ಯ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದರು.ಆರು ಮಂದಿ ಬಂಧನ: ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳಾದ ಸಂತೋಷ್ , ಮಹಿಪಾಲ್, ರಾಜೇಶ್, ಬನ್ನಪ್ಪ, ಚಂದು ಮತ್ತು ದೇವ ಎಂಬಾತನನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
