Homeರಾಜ್ಯಶಿಕಾರಿಪುರದಿಂದ 'ಭಾರತ್‌ ಜೋಡೊ' ಯಾತ್ರೆ 2ನೇ ಯಾತ್ರೆ

ಶಿಕಾರಿಪುರದಿಂದ ‘ಭಾರತ್‌ ಜೋಡೊ’ ಯಾತ್ರೆ 2ನೇ ಯಾತ್ರೆ

ಬೆಂಗಳೂರು, ಸೆ.28- ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಭಾರತ್‌ ಜೋಡೊ ಯಾತ್ರೆ 2ನೇ ಸರಣಿಯನ್ನು ಕಾಂಗ್ರೆಸ್‌‍ ನಡೆಸುತ್ತಿದೆ. ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾಸದ್‌ ಕಾಂಗ್ರೆಸ್‌‍ನ ಒಟ್ಟು 40 ಜಿಲ್ಲೆಗಳ ಪೈಕಿ 11ರಲ್ಲಿ ಈ ಹಿಂದೆ ರಾಹುಲ್‌ಗಾಂಧಿ ಭಾರತ್‌ಜೋಡೊ ಯಾತ್ರೆ ನಡೆಸಿದ್ದರು. ಅವುಗಳನ್ನು ಬಿಟ್ಟು ಬಾಕಿಯಿರುವ 29 ಜಿಲ್ಲೆಗಳಲ್ಲಿ ಭಾರತ್‌ಜೋಡೊ ಯಾತ್ರೆ-2 ನಡೆಯಲಿದೆ. ಅದರಲ್ಲೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಕಂಡ 84 ಕ್ಷೇತ್ರಗಳಲ್ಲಿ ಯಾತ್ರೆ ಗುರಿಯಾಗಿಸಿಕೊಂಡಿದೆ ಎಂದು ಹೇಳಿದರು.

ಪ್ರತಿಯೊಂದು ಕ್ಷೇತ್ರದಲ್ಲೂ ಬೆಳಗ್ಗೆ ಪಾದಯಾತ್ರೆ ನಡೆಸಿ ಸಂಜೆ ಬಹಿರಂಗ ಸಮಾವೇಶ ನಡೆಸಲಾಗುವುದು. ಈ ವೇಳೆ ಕೇಂದ್ರ ಸರ್ಕಾರದ ವೈಫಲ್ಯಗಳು ರಾಜ್ಯ ವಿರೋಧಿ ಧೋರಣೆ ಮತ್ತು ಎಸ್‌‍ಐಆರ್‌ ಹೆಸರಿನಲ್ಲಿ ಮತದಾರರಿಗೆ ಮಾಡಲಾಗುತ್ತಿರುವ ವಂಚನೆ ಕುರಿತಂತೆ ಜನಜಾಗೃತಿ ಮೂಡಿಸಲಾಗುವುದು. ಜೊತೆಯಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಯಾತ್ರೆಯನ್ನು ಸೆ.30ರಂದು ಶಿಕಾರಿಪುರದಿಂದ ಆರಂಭಿಸುವುದಾಗಿ ಸ್ಪಷ್ಟಪಡಿಸಿದರು.
ಮತ್ತೊಂದೆಡೆ ಶಿಕಾರಿಪುರದಲ್ಲಿ ಶಾಲಾ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಭಾರತ್‌ಜೋಡೊ ಯಾತ್ರೆ-2ರ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ನಾಲ್ಕು ವರ್ಷಗಳ ಹಿಂದೆ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಭಾರತ್‌ ಜೋಡೋ ಪಾದಯಾತ್ರೆ ಒಂದು ಪುಣ್ಯದ ಪಾದಯಾತ್ರೆ. ದ್ವೇಷದ ರಾಜಕೀಯಕ್ಕೆ ಸೆಡ್ಡು ಹೊಡೆದು ಭಾರತವನ್ನು ಒಗ್ಗೂಡಿಸಲು ನಡೆದಿದ್ದ ಈ ಪಾದಯಾತ್ರೆ ಕರ್ನಾಟಕಕ್ಕೆ ಕಾಲಿಟ್ಟು 4 ವರ್ಷಗಳಾದ ಹಿನ್ನೆಲೆಯಲ್ಲಿ ಸೆ. 30ರಂದು ಶಿಕಾರಿಪುರದಲ್ಲಿ ರಾಜ್ಯಮಟ್ಟದ ಭಾರತ್‌ ಜೋಡೋ 2.0 ಪಾದಯಾತ್ರೆ ಆಯೋಜಿಸಲಾಗಿದೆ ಎಂದು ಹೇಳಿದರು.

2022ರ ಸೆ.30ರಂದು ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆ ಕರ್ನಾಟಕವನ್ನು ಗುಂಡ್ಲುಪೇಟೆ ಮೂಲಕ ಪ್ರವೇಶಿಸಿತ್ತು. ಇದು ಕೇವಲ ಪಾದಯಾತ್ರೆಯಾಗಿರಲಿಲ್ಲ, ಜಾತಿ, ಧರ್ಮದ ಹೆಸರಲ್ಲಿ ಛಿದ್ರಗೊಂಡಿರುವ ಹೃದಯಗಳನ್ನು ಮತ್ತೆ ಬೆಸೆಯಲು ನಡೆಸಿದ್ದ ಪ್ರೀತಿಯ, ಸಾಮರಸ್ಯದ ಯಾತ್ರೆಯಾಗಿತ್ತು ಎಂದು ಮಧು ಬಂಗಾರಪ್ಪ ಹೇಳಿದರು.

ಸೆ.30ರಂದು ಬೆಳಗ್ಗೆ 10 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ. ಕಿಟ್ಟದಹಳ್ಳಿಯಿಂದ ಆರಂಭವಾಗಿ ಮಡ್ಡಿ ಕೋಟೆ ಕ್ರಾಸ್‌‍, ಹೊಸನಗರ ಕ್ರಾಸ್‌‍, ನೆಲವಾಗಿಲು ಕ್ರಾಸ್‌‍ ಮೂಲಕ ಸುಮಾರು 10 ಕಿ.ಮೀ. ಕ್ರಮಿಸಿ ಶಿಕಾರಿಪುರ ನಗರವನ್ನು ಪ್ರವೇಶಿಸಲಿದೆ ಎಂದು ಸಚಿವರು ವಿವರಿಸಿದರು.

ಇದೊಂದು ರಾಜಕೀಯ ಸಂದೇಶ ಸಾರುವ ಕಾರ್ಯಕ್ರಮ. ರಾಜ್ಯದಲ್ಲಿ ಮರಳಿ ಕಾಂಗ್ರೆಸ್‌‍ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡುವ ದಿನ. ಶಿಕಾರಿಪುರದಲ್ಲಿ ಕಾಂಗ್ರೆಸ್‌‍ ಗೆಲ್ಲಿಸಿಕೊಂಡು ಬರುವುದಕ್ಕೆ ನಾವೆಲ್ಲರೂ ಪಣ ತೊಡುವ ದಿನ ಎಂದು ಹೇಳಿದರು.

RELATED ARTICLES
spot_img

Latest News