ಬೆಂಗಳೂರು,ಸೆ.29- ನಗರದ ಹೊರವಲಯದಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಿದ್ದ ಕಾಡಾನೆಯನ್ನು ಬನ್ನೇರುಘಟ್ಟ ಅರಣ್ಯಕ್ಕೆ ಹಿಮೆಟ್ಟಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.ಬಿಎಂ ಕಾವಲು ಮೀಸಲು ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗವನ್ನು ರಾತ್ರಿ ವೇಳೆ ಥರ್ಮಲ್ ಡ್ರೋನ್‌ಗಳ ಮೂಲಕ ಪತ್ತೆಹಚ್ಚಿ, ನಿಗದಿತ ಆನೆ ಸಂಚಾರ ಮಾರ್ಗದ ಮೂಲಕ ಬನ್ನೇರುಘಟ್ಟ ಅರಣ್ಯದತ್ತ ಕಳುಹಿಸಲಾಗಿದೆ.
ಅಂಚೆಪಾಳ್ಯದೊಡ್ಡಬೆಲೆ ಭಾಗದಲ್ಲಿ ನಿನ್ನೆ ಮುಂಜಾನೆ ಕಾಡಾನೆ ದಾಳಿಗೆ ನಾಗರಾಜು (60) ಎಂಬುವವರು ಮತಪಟ್ಟ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆಗೆ ಹೆಚ್ಚಿನ ಮಹತ್ವ ಬಂದಿದೆ. ಈ ಘಟನೆಯ ಬಳಿಕ ಅರಣ್ಯ ಇಲಾಖೆ ಆನೆಯ ಚಲನವಲನವನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ನಿಯೋಜಿಸಿತ್ತು.ಬಿಎಂ ಕಾವಲು ಅರಣ್ಯ ಪ್ರದೇಶದಲ್ಲಿ ಆನೆ ಇರುವುದನ್ನು ಅಧಿಕಾರಿಗಳು ಗುರುತಿಸಿದ್ದರು. ದಟ್ಟ ಅರಣ್ಯ ಹಾಗೂ ರಾತ್ರಿ ಸಮಯದಲ್ಲಿ ಆನೆಯ ನಿಖರ ಜಾಡು ಪತ್ತೆಹಚ್ಚುವುದು ಸವಾಲಾಗಿದ್ದ ಹಿನ್ನೆಲೆಯಲ್ಲಿ ಎರಡು ಥರ್ಮಲ್ ಡ್ರೋನ್‌ಗಳನ್ನು ಬಳಸಲಾಯಿತು.
ಡಿಸಿಎಫ್ ಚಕ್ರಪಾಣಿ ನೇತತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ 100ಕ್ಕೂ ಅಧಿಕ ಸಿಬ್ಬಂದಿ ಆನೆಯ ಚಲನವಲನವನ್ನು ನಿರಂತರವಾಗಿ ಗಮನಿಸಿ, ಅದು ಜನವಸತಿ ಪ್ರದೇಶದತ್ತ ಮತ್ತೆ ತೆರಳದಂತೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ಕೊನೆಗೆ ಬಿಎಂ ಕಾವಲು ಅರಣ್ಯದಿಂದ ಟಿಕೆ ಫಾರೆಸ್ಟ್ ಭಾಗದ ಆನೆ ಸಂಚಾರ ಪಥದ ಮೂಲಕ ಕಾಡಾನೆಯನ್ನು ಬನ್ನೇರುಘಟ್ಟ ಅರಣ್ಯದತ್ತ ಹಿಮೆಟ್ಟಿಸಲಾಯಿತು. ಇದರಿಂದ ನಗರದ ಹೊರವಲಯದ ಜನವಸತಿ ಪ್ರದೇಶಗಳಲ್ಲಿ ಮತ್ತೆ ಆನೆ ಪ್ರವೇಶಿಸುವ ಸಾಧ್ಯತೆಯನ್ನು ತಾತ್ಕಾಲಿಕವಾಗಿ ನಿಯಂತ್ರಿಸುವ ಪ್ರಯತ್ನ ನಡೆದಿದೆ.
ಐದು ಕಿ.ಮೀ. ದೂರ ಬಂದಿದ್ದ ಆನೆ:
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಆನೆ ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಹೊರಬಂದು ಸುಮಾರು ಐದು ಕಿಲೋಮೀಟರ್ ದೂರದ ಜನವಸತಿ ಪ್ರದೇಶದತ್ತ ಬಂದಿತ್ತು. ಸುಮಾರು 25-30 ವರ್ಷದ ಗಂಡಾನೆ ಎಂದು ಅಧಿಕಾರಿಗಳು ಗುರುತಿಸಿದ್ದರು. ಈ ಆನೆ ಬಿಎಂ ಕಾವಲು ಪ್ರದೇಶದಲ್ಲಿ ಇರುವುದನ್ನು ಪತ್ತೆಹಚ್ಚಿದ ಬಳಿಕ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಬನ್ನೇರುಘಟ್ಟ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶಗಳನ್ನು ಸಂಪರ್ಕಿಸುವ ವನ್ಯಜೀವಿ ಸಂಚಾರ ಮಾರ್ಗಗಳ ಮಹತ್ವವೂ ಇತ್ತೀಚಿನ ಬೆಳವಣಿಗೆಗಳಿಂದ ಮತ್ತೊಮೆ ಮುನ್ನೆಲೆಗೆ ಬಂದಿದೆ. ನಗರದ ಹೊರವಲಯದಲ್ಲಿ ಆನೆಗಳ ಸುರಕ್ಷಿತ ಸಂಚಾರಕ್ಕಾಗಿ ನಿರ್ಮಿಸಲಾದ ವನ್ಯಜೀವಿ ಮೇಲ್ಸೇತುವೆಯನ್ನು ಆನೆಗಳು ಬಳಸುತ್ತಿರುವುದನ್ನು ಈ ವರ್ಷ ಕ್ಯಾಮೆರಾ ಟ್ರ್ಯಾಪ್‌ಗಳು ದಾಖಲಿಸಿದ್ದವು.
ಅರಣ್ಯ ಇಲಾಖೆ ಜನರಿಗೆ ರಾತ್ರಿ ಮತ್ತು ಮುಂಜಾನೆ ಸಮಯದಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.ಹೀಗಾಗಿ ಒಂದು ಕಾಡಾನೆಯನ್ನು ಅರಣ್ಯಕ್ಕೆ ಮರಳಿಸುವ ಕಾರ್ಯಾಚರಣೆ ಯಶಸ್ವಿಯಾದರೂ, ಬನ್ನೇರುಘಟ್ಟ ಅರಣ್ಯ ಮತ್ತು ನಗರ ವಿಸ್ತರಣೆಯ ನಡುವಿನ ಮಾನವ ಆನೆ ಸಂಘರ್ಷವನ್ನು ಶಾಶ್ವತವಾಗಿ ನಿಯಂತ್ರಿಸಲು ಆನೆ ಕಾರಿಡಾರ್‌ಗಳ ರಕ್ಷಣೆ, ವೈಜ್ಞಾನಿಕ ನಿಗಾ ವ್ಯವಸ್ಥೆ ಮತ್ತು ಜನವಸತಿ ಪ್ರದೇಶಗಳಿಗೆ ಮುನ್ನೆಚ್ಚರಿಕೆ ವ್ಯವಸ್ಥೆ ಬಲಪಡಿಸುವುದು ಮುಂದಿನ ಪ್ರಮುಖ ಸವಾಲಾಗಿದೆ.
