ಬೆಂಗಳೂರು, ಸೆ,30- ಉಪ್ಪು ಮತ್ತು ಸಕ್ಕರೆ ಬಳಕೆಗೆ ಸಂಬಂಧಿಸಿದಂತೆ ಜಾಗೃತಿ ಹಾಗೂ ಮಾರ್ಗಸೂಚಿ ರೂಪಿಸಲು ಮುಂದಾಗಿರುವ ಆರೋಗ್ಯ ಇಲಾಖೆ ಇದೀಗ ಅಡುಗೆ ಎಣ್ಣೆ ಮರು ಬಳಕೆಯ ಮೇಲೂ ಕಣ್ಣಿಟ್ಟಿದೆ.ಒಂದೇ ಅಡುಗೆ ಎಣ್ಣೆಯನ್ನು ಪದೇಪದೇ ಬಿಸಿ ಮಾಡಿ ಮರುಬಳಕೆ ಮಾಡುವುದರಿಂದ ಉಂಟಾಗಬಹುದಾದ ಆರೋಗ್ಯ ಅಪಾಯಗಳನ್ನು ತಡೆಗಟ್ಟಲು ಸಾರ್ವಜನಿಕರು ಹಾಗೂ ಹೋಟೆಲ್ಗಳಿಗಾಗಿ ಹೊಸ ಮಾರ್ಗಸೂಚಿ ರೂಪಿಸುವ ಕುರಿತು ಇಲಾಖೆ ಚಿಂತನೆ ನಡೆಸಿದೆ.
ಹೋಟೆಲ್, ರೆಸ್ಟೋರೆಂಟ್, ಬೇಕರಿ ಸೇರಿದಂತೆ ಆಹಾರ ತಯಾರಿಕಾ ಘಟಕಗಳಲ್ಲಿ ಬಳಸಿದ ಎಣ್ಣೆಯನ್ನು ಹೇಗೆ ಸಂಗ್ರಹಿಸಬೇಕು, ಎಷ್ಟು ಬಾರಿ ಎಣ್ಣೆಯನ್ನು ಮರುಬಳಕೆ ಮಾಡಬಹುದು ಹಾಗೂ ಬಳಕೆಗೆ ಯೋಗ್ಯವಲ್ಲದ ಎಣ್ಣೆಯನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟ ನಿಯಮ ರೂಪಿಸುವ ಸಾಧ್ಯತೆ ಇದೆ.
3 ಬಾರಿಗಿಂತ ಹೆಚ್ಚು ಬಳಕೆ ಬೇಡ :
ಅಡುಗೆ ಎಣ್ಣೆಯನ್ನು ಪದೇಪದೇ ಬಿಸಿ ಮಾಡುವುದರಿಂದ ಅದರಲ್ಲಿ ಟಿಪಿಸಿ ಪ್ರಮಾಣ ಹೆಚ್ಚಾಗುತ್ತದೆ. ಪ್ರಮಾಣ ಶೇ.25ಕ್ಕಿಂತ ಹೆಚ್ಚಾದ ಎಣ್ಣೆ ಮಾನವ ಬಳಕೆಗೆ ಅಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಒಂದೇ ಎಣ್ಣೆಯನ್ನು ಮೂರು ಬಾರಿಗಿಂತ ಹೆಚ್ಚು ಮರುಬಳಕೆ ಮಾಡದಂತೆ ಮಾರ್ಗಸೂಚಿಯಲ್ಲಿ ಸೂಚಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಎಣ್ಣೆಯಲ್ಲಿ ನೊರೆ ಕಾಣಿಸಿಕೊಂಡರೆ, ನೀಲಿ ಅಥವಾ ಬೂದು ಬಣ್ಣದ ಹೊಗೆ ಕಾಣಿಸಿಕೊಂಡರೆ ಬಳಕೆ ನಿಲ್ಲಿಸಬೇಕು. ಎಣ್ಣೆ ಕಪ್ಪಾಗುವುದು, ಮಸುಕಾಗುವುದು, ಅದರ ವಾಸನೆ, ಗುಣಮಟ್ಟ ಅಥವಾ ಗಾಢತೆ ಬದಲಾಗುವುದು ಕಂಡುಬಂದರೂ ಅದನ್ನು ತ್ಯಜಿಸುವಂತೆ ಸಾರ್ವಜನಿಕರಿಗೆ ಸೂಚಿಸುವ ಸಾಧ್ಯತೆ ಇದೆ.
ಮನೆಗಳಲ್ಲೂ ಸಂಗ್ರಹ ವ್ಯವಸ್ಥೆ:
ಇದುವರೆಗೆ ಹೋಟೆಲ್ಗಳು ಹಾಗೂ ಆಹಾರ ಉದ್ಯಮಗಳಿಂದ ಬಳಸಿದ ಅಡುಗೆ ಎಣ್ಣೆ ಸಂಗ್ರಹಿಸುವ ವ್ಯವಸ್ಥೆ ಹೆಚ್ಚು ಗಮನದಲ್ಲಿತ್ತು. ಇದೀಗ ಮನೆಗಳಲ್ಲೂ ಉಳಿಯುವ ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸುವ ವ್ಯವಸ್ಥೆ ರೂಪಿಸುವ ಬಗ್ಗೆ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.
ವಾರ್ಡ್ ಅಥವಾ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಬಳಸಿದ ಎಣ್ಣೆ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಿ, ಮನೆಗಳಿಂದ ಸಂಗ್ರಹಿಸಿದ ಎಣ್ಣೆಯನ್ನು ಅಧಿಕೃತ ಏಜೆನ್ಸಿಗಳಿಗೆ ನೀಡುವ ಯೋಜನೆ ರೂಪಿಸುವ ಸಾಧ್ಯತೆ ಇದೆ.ಬಳಸಿದ ಎಣ್ಣೆಯನ್ನು ಚರಂಡಿ, ಒಳಚರಂಡಿ ಅಥವಾ ಕಸದೊಂದಿಗೆ ಹಾಕದಂತೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವೂ ಇದೆ. ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗುವ ಬಳಸಿದ ಅಡುಗೆ ಎಣ್ಣೆಯನ್ನು ಅಧಿಕೃತ ಸಂಗ್ರಹ ಏಜೆನ್ಸಿ ಅಥವಾ ಅಗ್ರಿಗೇಟರ್ಗಳಿಗೆ ನೀಡುವ ಬಗ್ಗೆ ಮಾರ್ಗಸೂಚಿ ರೂಪಿಸುವ ಚಿಂತನೆ ನಡೆದಿದೆ.
ಬಯೋಡೀಸೆಲ್ಗೆ ಬಳಕೆ; ಬಳಕೆಗೆ ಯೋಗ್ಯವಲ್ಲದ ಅಡುಗೆ ಎಣ್ಣೆಯನ್ನು ಮತ್ತೆ ಆಹಾರ ತಯಾರಿಕೆಯಲ್ಲಿ ಬಳಸುವ ಬದಲು ಪರ್ಯಾಯ ಬಳಕೆಗೆ ಒತ್ತು ನೀಡಲು ಇಲಾಖೆ ಮುಂದಾಗಿದೆ. ಸಂಗ್ರಹಿಸಿದ ಬಳಸಿದ ಎಣ್ಣೆಯನ್ನು ಬಯೋಫ್ಯುಯೆಲ್ ಅಥವಾ ಬಯೋಡೀಸೆಲ್ ಉತ್ಪಾದನೆಗೆ ಬಳಸುವ ಕುರಿತು ಸಂಬಂಧಿತ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುವ ಉದ್ದೇಶವಿದೆ.
ರಾಜ್ಯದಲ್ಲಿ 202425 ಮತ್ತು 202526ನೇ ಸಾಲಿನಲ್ಲಿ ಒಟ್ಟು 32.68 ಲಕ್ಷ ಲೀಟರ್ ಬಳಸಿದ ಅಡುಗೆ ಎಣ್ಣೆ ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವುದು ಹಾಗೂ ಎಣ್ಣೆ ಮರುಬಳಕೆಯನ್ನು ನಿಯಂತ್ರಿಸುವುದು ಇಲಾಖೆಯ ಉದ್ದೇಶವಾಗಿದೆ.
ಹೋಟೆಲ್ಗಳ ಮೇಲೆ ನಿಗಾ:ಹೊಸ ಮಾರ್ಗಸೂಚಿ ಜಾರಿಗೆ ಬಂದರೆ ಹೋಟೆಲ್, ರೆಸ್ಟೋರೆಂಟ್, ಬೇಕರಿ ಹಾಗೂ ಇತರೆ ಆಹಾರ ತಯಾರಿಕಾ ಘಟಕಗಳಲ್ಲಿ ಬಳಸಿದ ಎಣ್ಣೆಯ ನಿರ್ವಹಣೆ ಕುರಿತು ನಿಯಮಿತ ತಪಾಸಣೆಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಎಷ್ಟು ಬಾರಿ ಎಣ್ಣೆಯನ್ನು ಮರುಬಳಕೆ ಮಾಡಲಾಗಿದೆ, ಬಳಕೆಯಾದ ಎಣ್ಣೆಯನ್ನು ಎಲ್ಲಿ ವಿಲೇವಾರಿ ಮಾಡಲಾಗಿದೆ ಎಂಬುದರ ದಾಖಲೆಯನ್ನು ನಿರ್ವಹಿಸುವ ವ್ಯವಸ್ಥೆಯನ್ನೂ ತರಲು ಚಿಂತನೆ ನಡೆದಿದೆ.
ಆಹಾರ ಸುರಕ್ಷತಾ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಮೂಲಕ ಜಂಟಿ ಕಾರ್ಯಾಚರಣೆ ನಡೆಸುವ ಸಾಧ್ಯತೆಯೂ ಇದೆ.ಒಂದೆಡೆ ಸಾರ್ವಜನಿಕರ ಆರೋಗ್ಯ ರಕ್ಷಣೆ, ಮತ್ತೊಂದೆಡೆ ಪರಿಸರ ಸಂರಕ್ಷಣೆಮನೆಯ ಅಡುಗೆಮನೆಯಿಂದ ಹೋಟೆಲ್ವರೆಗೆ ಬಳಸಿದ ಅಡುಗೆ ಎಣ್ಣೆ ನಿರ್ವಹಣೆಗೆ ಹೊಸ ವ್ಯವಸ್ಥೆ ರೂಪಿಸಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
