ಬೆಂಗಳೂರು, ಸೆ.30- ಮಂಗಳೂರು ತೈಲ ಸಂಸ್ಕರಣೆ ಹಾಗೂ ಪೆಟ್ರೋ ಕೆಮಿಕಲ್ಸ್ ಸಂಸ್ಥೆಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಸುರತ್ಕಲ್ ಸೀಮಿತವಾಗಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಇಂದು ಬೆಳಗ್ಗೆ 12.40 ಸುಮಾರಿಗೆ ಎಂಆರ್ಪಿಎಲ್ ಘಟಕ 2ರಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆ ವಿಮಾನ ನಿಲ್ದಾಣದವರೆಗೂ ವ್ಯಾಪಿಸಿದ್ದು, ಅದುರಿದ ಅನುಭವ ಆಗಿದೆ. ಕೂಡಲೇ ಆಯಾ ಪ್ರದೇಶದ ಸುತ್ತಮುತ್ತಲಿನ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಶಾಲಾಕಾಲೇಜುಗಳಿಗೆ ರಜೆ ನೀಡಲಾಗಿದೆ.
ನಗರದ ಹೊರವಲಯದಲ್ಲಿರುವ ಎಂಆರ್ಪಿಎಲ್ ದಲ್ಲಿ ಕಚ್ಛಾ ತೈಲವನ್ನು ಸಂಗ್ರಹಿಸುವ ಸಿಹೆಚ್ಡಿಯು ಘಟಕದಲ್ಲಿ ಅನಾವುತ ನಡೆದಿದೆ. ಇಲ್ಲಿ ಸಂಗ್ರಹಿಸಿದ ಕಚ್ಚಾ ತೈಲವನ್ನು ಮುಂದಿನ ಹಂತದ ಪೆಟ್ರೋಲ್, ಸಿಮೇಎಣ್ಣೆ ಹಾಗೂ ಇತರ ಸಂಸ್ಕರಣೆಯ ಸಲುವಾಗಿ ರವಾನೆಯಾಗುತ್ತದೆ. ಭಾರೀ ಸ್ಫೋಟದಿಂದ ಬೆಂಕಿಯ ಕೆನ್ನಾಲಿಗೆಗಳು ಮುಗಿಲೆತ್ತರಕ್ಕೆ ವ್ಯಾಪಿಸಿದ್ದವು. ಹೊಗೆಯ ದಟ್ಟಾವರಣ ನಿರ್ಮಾಣವಾಗಿ ಭೀಕರ ಸನ್ನಿವೇಶ ಸೃಷ್ಟಿಯಾಗಿತ್ತು.
ಸ್ಫೋಟದ ತೀವ್ರತೆಗೆ ಜೋಕಟ್ಟೆ ಪಂಚಾಯತ್ ಕಟ್ಟಡ ಸೇರಿದಂತೆ ಸುತ್ತಮುತ್ತಲಿನ ಹಲವು ಮನೆಗಳು ಕಂಪಿಸಿದ್ದು, ಹಾನಿಗೊಳಾಗಿವೆ. ಕೆಲವು ಮನೆಗಳ ಬಾಗಿಲು ಹಾಗೂ ಕಿಟಕಿಗಳಿಗೆ ಛೀದ್ರಗೊಂಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಯಾವುದೇ ಪ್ರಾಣಾಪಯಾದ ವರದಿ ಸದ್ಯಕ್ಕೆ ಲಭ್ಯವಾಗಿಲ್ಲ.
ಸ್ಫೋಟದ ಶಬ್ದ ಅಂಗರಗುಂಡಿ, ಬೈಕಂಪಾಡಿ ಕೈಗಾರಿಕಾ ಪ್ರದೇಶ ಹಾಗೂ ಕುಳಾಯಿ ಸೇರಿದಂತೆ ಹಲವು ಪ್ರದೇಶಗಳವರೆಗೆ ಕೇಳಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸ್ಫೋಟಕ್ಕೆ ನಿಖರ ಕಾರಣ ಏನು ಎಂಬುದು ತಿಳಿದು ಬರಬೇಕಿದೆ. ಸುದ್ದಿ ತಿಳಿದ ತಕ್ಷಣ ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ದಳ ಸ್ಥಳಕ್ಕೆ ಭೇಟಿ ನೀಡಿ, ಬೆಂಕಿ ನಂದಿಸಲು ಹರ ಸಾಹಸ ನಡೆಸಿದೆ. ನಗರ ಪೊಲೀಸ್ ಆಯುಕ್ತರು ಸ್ಥಳಕ್ಕೆ ಧಾವಿಸಿದ್ದಾರೆ.
