ಟೆಲ್ ಅವಿವ್, ಅ. 6- ದುಬೈನಿಂದ ಇಸ್ರೇಲ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ ಸಹ-ಪೈಲಟ್ ವಿಮಾನವನ್ನು ಅಪಹರಿಸಿ, ಅದನ್ನು ಪತನಗೊಳಿಸಲು ಯತ್ನಿಸಿದ ರೋಮಾಂಚನಕಾರಿ ಹಾಗೂ ಆತಂಕಕಾರಿ ಘಟನೆ ವರದಿಯಾಗಿದೆ.
170ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊಂದಿದ್ದ ವಿಮಾನವು ತನ್ನ ವಾಯುಪ್ರದೇಶಕ್ಕೆ ಅಪಾಯ ತಂದೊಡ್ಡಬಹುದು ಎಂಬ ಕಾರಣಕ್ಕೆ, ಅದನ್ನು ಆಕಾಶದಲ್ಲೇ ಹೊಡೆದುರುಳಿಸಲು ಇಸ್ರೇಲ್ ವಾಯುಪಡೆ ಸಿದ್ಧವಾಗಿತ್ತು ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
ವಿಮಾನವು ಜೋರ್ಡಾನ್ ವಾಯುಪ್ರದೇಶ ಪ್ರವೇಶಿಸಿದಾಗ, ಒಮಾನ್ ಮೂಲದ ಸಹ-ಪೈಲಟ್ ಹಮಾಮ್ ಅಲ್-ಹಮಮಿ ಇದ್ದಕ್ಕಿದ್ದಂತೆ ವಿಮಾನದ ಕ್ಯಾಪ್ಟನ್ ಸಿತ್ ಮಚ್ಚರ್ ಅವರ ಮೇಲೆ ಇರಿದು ದಾಳಿ ನಡೆಸಿದ್ದಾನೆ.
ಬಳಿಕ ವಿಮಾನದ ನಿಯಂತ್ರಣವನ್ನು ತನ್ನ ವಶಕ್ಕೆ ಪಡೆದು, ಅದನ್ನು ಸುಮಾರು 18,000 ಅಡಿಗಳಷ್ಟು ಕೆಳಗೆ ಇಳಿಸಿ, ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಡಿಕ್ಕಿ ಹೊಡೆಸಲು ಯತ್ನಿಸಿದ್ದಾನೆ. ಈ ವೇಳೆ ವಿಮಾನದಿಂದ ಅಪಹರಣದ ಸಂಕೇತ ರವಾನೆಯಾಗಿತ್ತು. ಇಸ್ರೇಲ್ ವಾಯುಪಡೆಯು ಕಾಕ್‌ಪಿಟ್ ಸಂಪರ್ಕಿಸಲು ಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ತಕ್ಷಣವೇ ಇಸ್ರೇಲ್ ತನ್ನ ವಾಯುಪ್ರದೇಶವನ್ನು ಮುಚ್ಚಿ, ಯುದ್ಧವಿಮಾನಗಳನ್ನು ಆಕಾಶಕ್ಕೆ ಹಾರಿಸಿತು.
ಘಟನೆಯ ವೇಳೆ ಭಾರತೀಯ ಮೂಲದ ಪೈಲಟ್ ಸಹ-ಪೈಲಟ್‌ನೊಂದಿಗೆ ಧೈರ್ಯದಿಂದ ಹೋರಾಡಿ, ಕಾಕ್‌ಪಿಟ್ ಬಾಗಿಲನ್ನು ಅನ್‌ಲಾಕ್ ಮಾಡುವಲ್ಲಿ ಯಶಸ್ವಿಯಾದರು. ತಕ್ಷಣ ಕಾರ್ಯಪ್ರವೃತ್ತರಾದ ಇಸ್ರೇಲಿ ಪ್ರಯಾಣಿಕರು ಹಾಗೂ ಫ್ಲೈದುಬೈ ಸಿಬ್ಬಂದಿ ದಾಳಿಕೋರ ಅಲ್-ಹಮಮಿಯನ್ನು ಬಂಧಿಸಿದ್ದಾರೆ. ಬಳಿಕ ವಿಮಾನದಲ್ಲಿದ್ದ ಇಬ್ಬರು ಆಫ್-ಡ್ಯೂಟಿ ಪೈಲಟ್‌ಗಳು ವಿಮಾನದ ನಿಯಂತ್ರಣವನ್ನು ವಹಿಸಿಕೊಂಡು, ಸೌದಿ ಅರೇಬಿಯಾದ ತಬುಕ್‌ನಲ್ಲಿ ಸುರಕ್ಷಿತವಾಗಿ ತುರ್ತು ಲ್ಯಾಂಡಿಂಗ್ ಮಾಡಿದರು.
9/11 ಮಾದರಿಯ ಉಗ್ರ ದಾಳಿಯನ್ನು ಎದುರಿಸಲು ಇಸ್ರೇಲ್ ಈಗಾಗಲೇ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ. ವಿಮಾನ ಅಪಹರಣಗೊಂಡು ಯಾವುದೇ ಕಟ್ಟಡ ಅಥವಾ ವಿಮಾನ ನಿಲ್ದಾಣಕ್ಕೆ ಡಿಕ್ಕಿ ಹೊಡೆದು ಸಾವಿರಾರು ಜನರ ಸಾವಿಗೆ ಕಾರಣವಾಗುವುದನ್ನು ತಡೆಯಲು, ಅಂತಹ ವಿಮಾನವನ್ನು ಆಕಾಶದಲ್ಲೇ ಹೊಡೆದುರುಳಿಸುವುದು ಇಸ್ರೇಲ್‌ನ ನಿಯಮವಾಗಿದೆ. ಆದರೆ ಇಂತಹ ನಿರ್ಧಾರ ಕೈಗೊಳ್ಳುವ ಅಂತಿಮ ಅಧಿಕಾರ ದೇಶದ ಪ್ರಧಾನಿಗೆ ಮಾತ್ರ ಇರುತ್ತದೆ. ವರದಿಗಳ ಪ್ರಕಾರ, ಫ್ಲೈದುಬೈ ವಿಮಾನವು ಸೌದಿ ಅರೇಬಿಯಾದ ಕಡೆಗೆ ಮಾರ್ಗ ಬದಲಾಯಿಸಿದ್ದರಿಂದ ಇಸ್ರೇಲ್ ಕ್ಷಿಪಣಿ ದಾಳಿ ನಡೆಸುವ ನಿರ್ಧಾರದಿಂದ ಹಿಂದೆ ಸರಿಯಿತು.
