Homeರಾಜ್ಯರಾಜ್ಯದಲ್ಲಿ ವಾರಾಂತ್ಯದವರೆಗೂ ಮಳೆ : ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಭಾರಿ ವರ್ಷಧಾರೆ ಮುನ್ನೆಚ್ಚರಿಕೆ

ರಾಜ್ಯದಲ್ಲಿ ವಾರಾಂತ್ಯದವರೆಗೂ ಮಳೆ : ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಭಾರಿ ವರ್ಷಧಾರೆ ಮುನ್ನೆಚ್ಚರಿಕೆ

ಬೆಂಗಳೂರು, ಅ.6- ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗದ ಹಲವು ಕಡೆಗಳಲ್ಲಿ ನಿನ್ನೆ ಸಂಜೆ ಹಾಗೂ ರಾತ್ರಿ ಮಳೆಯಾಗಿದ್ದು, ವಾರಾಂತ್ಯದವರೆಗೆ ಮಳೆ ಮುಂದುವರೆಯಲಿದೆ.

ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಮಳೆ ಪ್ರಮಾಣ ಹೆಚ್ಚಾಗಿರುವ ಮುನ್ಸೂಚನೆಗಳಿವೆ. ಭಾರಿ ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೇಂಜ್‌ ಅಲರ್ಟ್‌ ಘೋಷಿಸಿದೆ.

ಶಿವಮೊಗ್ಗ, ಉತ್ತರ ಕನ್ನಡ, ಹಾಸನ, ಕೊಡಗು ಜಿಲ್ಲೆಗಳಲ್ಲೂ ಭಾರಿ ಮಳೆ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್‌ ನೀಡಲಾಗಿದೆ. ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬೆಂಗಳೂರು ದಕ್ಷಿಣ, ಮಂಡ್ಯ, ಚಾಮರಾಜನರ, ಮೈಸೂರು ಜಿಲ್ಲೆಗಳಲ್ಲಿ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಗಳಿದ್ದು, ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಆದರೆ, ರಾಜ್ಯದ ಉಳಿದ ಜಿಲ್ಲೆಗಳಿಗೆ ಯಾವುದೇ ಮುನ್ನೆಚ್ಚರಿಕೆ ನೀಡಲಾಗಿಲ್ಲ. ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ರಾಜ್ಯದ ಹಲವೆಡೆ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ನಾಳೆಯ ನಂತರ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಆದರೆ, ವಾರಂತ್ಯಕ್ಕೆ ಮತ್ತೆ ಮಳೆ ಪ್ರಮಾಣ ಹೆಚ್ಚಾಗುವ ನಿರೀಕ್ಷೆಗಳಿವೆ. ಬೆಂಗಳೂರಿನಲ್ಲಿ ನಿನ್ನೆ ಸಂಜೆ ಹಾಗೂ ತಡರಾತ್ರಿ ಧಾರಾಕಾರ ಮಳೆಯಾಯಿತು. ಇದರಿಂದ ತಗ್ಗು ಪ್ರದೇಶಗಳ ರಸ್ತೆಗಳು ಹಾಗೂ ಅಂಡರ್‌ಪಾಸ್‌‍ಗಳಲ್ಲಿ ನೀರು ನಿಂತು ವಾಹನ ಸವಾರರಿಗೆ ತೊಂದರೆಯಾಯಿತು. ಸಂಚಾರ ದಟ್ಟಣೆಯ ಸಮಸ್ಯೆಯನ್ನು ಎದುರಿಸುವಂತಾಯಿತು.

ಬೆಂಗಳೂರು ಮಾತ್ರವಲ್ಲದೆ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಬೆಂಗಳೂರು ದಕ್ಷಿಣ, ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಹಲವೆಡೆ ಮಳೆಯಾಗಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆದಿದ್ದು, ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ.

ಮುಂಗಾರು ಮರಳುವಿಕೆ ಹಾಗೂ ಹಿಂಗಾರು ಪ್ರಾರಂಭದ ಈ ಪರ್ವ ಕಾಲದಲ್ಲಿ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿದ್ದು. ಮಳೆಗೆ ಪೂರಕವಾದ ಸನ್ನಿವೇಶ ಸೃಷ್ಟಿಯಾಗುವುದು ಸಹಜ ಪ್ರಕ್ರಿಯೆ ಎಂಬುದು ಹವಾಮಾನ ತಜ್ಞರ ಅಭಿಪ್ರಾಯ.

RELATED ARTICLES
spot_img

Latest News