ಬೆಂಗಳೂರು,ಅ.6- ರಾಜ್ಯದ ಜನರಿಗೆ ತೆರಿಗೆ ಏರಿಕೆ ಮಾಡುವ ಮೂಲಕ ಸರ್ಕಾರ ಸಂಪೂರ್ಣವಾಗಿ ಪಾಪರ್ ಆಗಿದೆ. ಕೆಲವೇ ದಿನಗಳಲ್ಲಿ ಭಿಕ್ಷಾಪಾತ್ರೆ ಹಿಡಿಯುವ ಹಂತಕ್ಕೆ ಬರಬಹುದು ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಸಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸರ್ಕಾರದ ಹಸ್ತಕ್ಷೇಪ ವಿರೋಧಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿ ಬಳಿಕ ಮಾತನಾಡಿದ ಅವರು, ಪ್ರತಿಯೊಂದರಲ್ಲೂ ಸರ್ಕಾರ ದರ ಏರಿಕೆ ಮಾಡುವ ನೀಚ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ತೆರಿಗೆ ಏರಿಕೆ ಮಾಡುತ್ತಿರುವುದೇ ಸರ್ಕಾರ ಪಾಪರ್ ಆಗಿದೆ ಎಂಬುದರ ಸಂಕೇತ. ಇನ್ನೇನು ಭಿಕ್ಷಾ ಪಾತ್ರೆ ಹಿಡಿಯುವ ಹಂತಕ್ಕೂ ಬಂದಿದೆ. ಈ ಸರ್ಕಾರ ತೊಲಗಿದರೆ ಮಾತ್ರ ಜನರಿಗೆ ನೆಮದಿ. ಸರಿಯಾದ ಕಾಲದಲ್ಲಿ ಜನ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು. ಜನರಿಗೆ ತೆರಿಗೆ ಹೊರೆಯಿಂದ ಸಂಕಷ್ಟಕ್ಕೆ ಸಿಲುಕಿಸುವುದು ಸರ್ಕಾರದ ಹೊಸ ಗ್ಯಾರಂಟಿ ಯೋಜನೆಯಾಗಿದೆ. ದರ ಏರಿಸುವ ಅಗತ್ಯವಾದರೂ ಏನಿದೆ? ಗ್ಯಾರಂಟಿಗಳನ್ನು ಉಚಿತವಾಗಿ ಕೊಡುತ್ತೇವೆ ಎಂದು ಹೇಳಿದ್ದ ಸರ್ಕಾರ ಈಗ ಎಲ್ಲದರಲ್ಲೂ ದರ ಏರಿಸುತ್ತಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಪೊಲೀಸ್ ಠಾಣೆಗಳೆಲ್ಲವೂ ಕಾಂಗ್ರೆಸ್ ಕಚೇರಿಗಳಾಗಿವೆ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಕೇಸ್ ಹಾಕಿ ಕಿರುಕುಳ ಕೊಡುತ್ತಿದ್ದಾರೆ. ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಸೇರಿ ಕಾರ್ಯಕರ್ತರ ಮೇಲೆ ಎಫ್‌ಐಆರ್ ಹಾಕಿದ್ದಾರೆ ಎಂದು ಟೀಕಿಸಿದರು. ಗೂಂಡಾ ಸರ್ಕಾರ, ಡಿಕೆ ಶಿವಕುಮಾರ್, ಬಿ.ಕೆ.ಹರಿಪ್ರಸಾದ್‌ರವರ ಹಿಂದಿನ ಹಳೆ ದಿನಗಳಂತೆ ನಡೆಯುತ್ತಿದ್ದಾರೆ. ಅವರಿಗೆ ಚುನಾವಣೆ ಭಯ ಶುರು ವಾಗಿದೆ. ಅದಕ್ಕಾಗಿ ಕಾರ್ಯಕರ್ತರಿಗೆ ಕಿರುಕುಳ ಕೊಡುವ ರಾಜಕೀಯ ಶುರು ಮಾಡಿದ್ದಾರೆ. ಇದೆಲ್ಲದರ ಬಗ್ಗೆ ಗವರ್ನರ್‌ಗೆ ನಾವು ತಿಳಿಸಿದ್ದೇವೆ ಎಂದರು.
ಕಾಂಗ್ರೆಸ್ ಮಾಡಿರುವ ಸರ್ವೆಯಲ್ಲೂ ಸೋಲುವ ವರದಿ ಬಂದಿದೆ. ಕಾಂಗ್ರೆಸ್ ನವರು ಹತಾಶರಾಗಿದ್ದಾರೆ. ಕಾಂಗ್ರೆಸ್ ನ ಗೂಂಡಾಗಿರಿ ನೋಡಿದ್ದೇವೆ. ಇದನ್ನು ಬುಡಸಮೇತ ಕಿತ್ತು ಹಾಕುವ ಕಾಲ ಬರುತ್ತದೆ ಎಂದು ಎಚ್ಚರಿಕೆ ಕೊಟ್ಟರು. ಹಾಲಿನ ದರ ಏರಿಕೆ ಹಾಗೂ ಬಸ್ಸು ದರ ಏರಿಕೆ ಕುರಿತು ಮಾತನಾಡಿದ ಅವರು, ನನಗೂ ಫ್ರೀ ನಿಮಗೂ ಫ್ರೀ ಅಂದವರು ಈವಾಗ ದರ ಏರಿಕೆ ಮಾಡುತ್ತಿದ್ದಾರೆ. ಇವರು ಜನದ್ರೋಹಿ ಸರ್ಕಾರ, ಎಲ್ಲರ ಮೇಲೆ ತೆರಿಗೆ ಹಾಕುತ್ತಿದ್ದಾರೆ ಎಂದು ದೂರಿದರು.
ಇದು ಲೂಟಿ ಕೋರರ ಸರ್ಕಾರ, ಮಂತ್ರಿಗಳು, ಸಿಎಂ ಹೋಗುವ ಕಡೆಗಳಲ್ಲಿ ದುಡ್ಡು ವಸೂಲಿ ಮಾಡುತ್ತಿದ್ದಾರೆ. ಡಿಸಿ ಕಚೇರಿಗಳೇ ಹಣ ವಸೂಲಿಗಿಳಿದಿದ್ದಾರೆ. ಪ್ರಣಾಳಿಕೆ ಯಲ್ಲಿ ಹಾಲಿಗೆ ಸಬ್ಸಿಡಿ ಕೊಡುತ್ತೇನೆ ಅಂದರು.ಕೊನೆಗೆ ಹಾಲಿನ ಮೇಲೆ ತೆರಿಗೆ ಹಾಕುತ್ತಿದಾರೆ. ನಾಚಿಕೆ ಆಗಬೇಕು ಇವರಿಗೆ ಎಂದು ಗರಮಾದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ ಮಗನನ್ನು ನೋಡಿಕೊಳ್ಳಿ ಅಂತಾರೆ. ಜನರನ್ನು ನೋಡೋರು ಯಾರಪ್ಪ..? ಎಂದು ಇದೇ ವೇಳೆ ವ್ಯಂಗ್ಯವಾಡಿದರು. ವಿಧಾನಪರಿಷತ್ ಜೆಡಿಎಸ್ ನಾಯಕ ಎಸ್.ಎಲ್.ಭೋಜೇಗೌಡ ಮಾತನಾಡಿ, ಬರದ ವಿಚಾರ ಮುಚ್ಚಿ ಹಾಕಲು ಕಾಂಗ್ರೆಸ್ ಎಸ್‌ಐಆರ್ ವಿಚಾರ ತಂದಿದೆ. ರೈತರಿಗೆ ಮತ್ತೊಮೆ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದ್ದಾರೆ ಎದರು.
2028ರಲ್ಲಿ ಮೈತ್ರಿಯಲ್ಲಿ ಚುನಾವಣೆ ಎದುರಿಸುವ ಬಗ್ಗೆ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ನವರು ಹೇಳಿಕೆಯನ್ನು ಪುನರುಚ್ಛಾರ ಮಾಡುವ ಮೂಲಕ ಮೈತ್ರಿಯನ್ನು ಮತ್ತಷ್ಟು ಗಟ್ಟಿ ಮಾಡಿದ್ದಾರೆ. ಅವರು ಕಾರ್ಯಕರ್ತರಿಗೆ ಮತ್ತೆ ಹುಮಸ್ಸು ತುಂಬಿದ್ದಾರೆ. ನಾವು ಎಲ್ಲಾ ಚುನಾವಣೆಯಲ್ಲಿ ಒಟ್ಟಾಗಿ ಹೋಗುತ್ತೇವೆ ಎಂದು ಹೇಳಿದರು.
